ಹಲವರಿಗೆ ಮಡಿಕೇರಿಗೆ, ಕೊಡಗಿಗೆ ವ್ಯತ್ಯಾಸ ಗೊತ್ತಿಲ್ಲ

madikeri kodagu
Published on

ಮಡಿಕೇರಿ:

'ಮಡಿಕೇರಿ ಜಿಲ್ಲೆ ಎಲ್ಲಿದೆ ತೋರಿಸಿ...' ಇದು ಸರ್ಕಾರಿ ಅಧಿಸೂಚನೆಗಳಲ್ಲಿ, ಪತ್ರಗಳಲ್ಲಿ, ಹೊರ ಜಿಲ್ಲೆಯ ರಾಜಕಾರಣಿಗಳು, ಜನಪ್ರತಿನಿಧಿಗಳು, ಅಧಿಕಾರಿಗಳ ಮೂಲಕ ಆಗಾಗ್ಗೆ 'ಮಡಿಕೇರಿ ಜಿಲ್ಲೆ' ಎಂದು ಪ್ರಸ್ತಾಪ ಮಾಡುವವರಿಗೆ ಸ್ಥಳೀಯರ ಆಗ್ರಹ. ಇರುವುದು 'ಕೊಡಗು ಜಿಲ್ಲೆ', ಮಡಿಕೇರಿ ಎನ್ನುವ 'ಜಿಲ್ಲೆ'ಯೇ ಇಲ್ಲ. ಈ ಬಗ್ಗೆ ಹಲವು ಬಾರಿ ಸಂಬAಧಿಸಿದವರಿಗೆ ಮನವರಿಕೆ ಮಾಡಿದರೂ 'ಮಡಿಕೇರಿ ಜಿಲ್ಲೆ' ಎಂದು ಬಳಕೆಯಲ್ಲಿರುವುದಕ್ಕೆ ಆಕ್ಷೇಪ ವ್ಯಕ್ತ ಆಗುತ್ತಿದೆ.

ಮಡಿಕೇರಿಗೆ ಬರುವ ಬಹುತೇಕ ಪ್ರವಾಸಿಗರು ಸ್ಥಳೀಯ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ಪಡೆಯುವ ಸಂದರ್ಭ, 'ಇಲ್ಲಿಂದ ಕೊಡಗು ಎಷ್ಟು ದೂರ' ಎಂದು ಕೇಳಿ ನಗೆಪಾಟಲಿಗೆ ಈಡಾಗುವುದಿದೆ. ಹೊರ ಜಿಲ್ಲೆಗಳಿಂದ ಫೋನ್ ಮಾಡುವವರೂ ಕೆಲವೊಮ್ಮೆ, 'ಮಡಿಕೇರಿಯಿಂದ ಕೂರ್ಗ್ಗೆ ಹೋಗೋದಿಕ್ಕೆ ಬಸ್‌ಗಳು ಸಿಗುತ್ತಾ ಅಥವಾ ಟ್ಯಾಕ್ಸಿ ಮಾಡಬೇಕಾ ?' ಎಂದು ಕೇಳುವುದೂ ಇದೆ. ಕೊಡಗು ಬಿಟ್ಟು ಹೊರಗಿನವರಿಗೆ ಹೆಚ್ಚಿನ ಸಂದರ್ಭಗಳಲ್ಲಿ 'ಕೊಡಗು' ಮತ್ತು 'ಮಡಿಕೇರಿ' ನಡುವಿನ ವ್ಯತ್ಯಾಸವೇ ಗೊತ್ತಾಗುವುದಿಲ್ಲ.

ಜನಸಾಮಾನ್ಯರು ಇರಲಿ, ಸರ್ಕಾರದ ಮಟ್ಟದಲ್ಲೂ ಈ ತಪ್ಪುಗಳು ಆಗಾಗ್ಗೆ ಆಗುತ್ತಿರುತ್ತದೆ. ಸಚಿವಾಲಯಗಳಿಂದ ಹೊರಬೀಳುವ ಅಧಿಸೂಚನೆಗಳು, ಹಿರಿಯ ಅಧಿಕಾರಿಗಳಿಂದ ಬರುವ ಆದೇಶಗಳು, ಸರ್ಕಾರದ ವಿವಿಧ ಇಲಾಖೆಗಳ ಮಧ್ಯೆ ಹರಿದಾಡುವ ಪತ್ರಗಳಲ್ಲೂ 'ಮಡಿಕೇರಿ ಜಿಲ್ಲೆ' ಎಂದೇ ಬಹುತೇಕ ವೇಳೆ ಪ್ರಸ್ತಾಪ ಆಗುತ್ತಿರುತ್ತದೆ. ದೊಡ್ಡ ದೊಡ್ಡ ಅಧಿಕಾರಿಗಳು, ರಾಜಕಾರಣಿಗಳು, ಜನಪ್ರತಿನಿಧಿಗಳು, ಗಣ್ಯ ವ್ಯಕ್ತಿಗಳು ಮಾತನಾಡುವಾಗಲೂ ಕೊಡಗು ಜಿಲ್ಲೆಯನ್ನು 'ಮಡಿಕೇರಿ ಜಿಲ್ಲೆ' ಎಂದೇ ಕರೆದಿರುವ ನಿದರ್ಶನಗಳಿವೆ.

ಸಾಮಾನ್ಯವಾಗಿ ಕೊಡಗಿನವರ ಬಳಿ ಹೀಗೆ 'ಮಡಿಕೇರಿ ಜಿಲ್ಲೆ' ಎಂದು ಯಾರಾದರೂ ಪ್ರಸ್ತಾಪ ಮಾಡಿದರೆ ಮಡಿಕೇರಿ ಮತ್ತು ಕೊಡಗಿನ ಮಧ್ಯೆ ಇರುವ ವ್ಯತ್ಯಾಸ ತಿಳಿಸಿ ಹೇಳಿ ಅವರನ್ನು 'ಸರಿದಾರಿ'ಗೆ ತರುವ ಪ್ರಯತ್ನ ಮಾಡುತ್ತಾರೆ. ಹಾಗೆಯೇ ಇಲಾಖಾ ಪ್ರಕಟಣೆಗಳಲ್ಲಿ 'ಮಡಿಕೇರಿ ಜಿಲ್ಲೆ' ಎಂದು ಕಂಡುಬAದರೆ ಸಂಬAಧಿಸಿದ ಇಲಾಖೆಗಳ ಮುಖ್ಯಸ್ಥರ ಗಮನಕ್ಕೆ ತರುವ ಕೆಲಸವೂ ನಡೆದಿದೆ. ಆದರೆ ಪದೇ ಪದೇ 'ಮಡಿಕೇರಿ ಜಿಲ್ಲೆ' ಎಂದೇ ಬಳಕೆ ಆಗುತ್ತಿರುವುದು ಕೊಡಗಿನವರ ಸಿಟ್ಟಿಗೆ ಕಾರಣವಾಗಿದೆ.

ಆಂಗ್ಲರ ಬಳಕೆಯಲ್ಲಿ ಮರ್ಕರಾ ಆಗಿದ್ದ ಮಡಿಕೇರಿ ಕೊಡಗಿನ ಜಿಲ್ಲಾ ಕೇಂದ್ರ. ಇದೊಂದು ನಗರಸಭೆ ಹೊಂದಿರುವ ಪಟ್ಟಣ. ಮಡಿಕೇರಿ ಹೆಸರಿನಲ್ಲಿ ತಾಲೂಕು ಇದೆ. ಆದರೆ ಈ ಹೆಸರಿನಲ್ಲಿ ಯಾವುದೇ ಜಿಲ್ಲೆ ಇಲ್ಲ. ಜಿಲ್ಲೆಯ ಪ್ರಮುಖ ಸರ್ಕಾರಿ ಕಚೇರಿಗಳು, ವಾಣಿಜ್ಯ ಕೇಂದ್ರಗಳು ಇಲ್ಲಿದೆ. ಪ್ರಮುಖ ಪ್ರವಾಸಿ ತಾಣವೂ ಹೌದು.

ಮಡಿಕೇರಿಯನ್ನು ಮುದ್ದುರಾಜ ಕೇರಿ ಎಂದೂ ಕರೆಯಲಾಗುತ್ತಿತ್ತು. 1633 ರಿಂದ 1687 ರವರೆಗೆ ಕೊಡಗನ್ನು ಆಳಿದ ಹಾಲೇರಿ ರಾಜ ಮುದ್ದುರಾಜನಿಂದಾಗಿ ಈ ಹೆಸರು ಬಂದಿತ್ತು. ಬ್ರಿಟಿಷ್ ರಾಜ್ ಅವಧಿಯಲ್ಲಿ ಮರ್ಕರಾ ಇದ್ದಿದ್ದು ಮೈಸೂರು ಸರ್ಕಾರದ ಅವಧಿಯಲ್ಲಿ ಮಡಿಕೇರಿ ಆಯಿತು.

ಕೊಡಗು ಪಶ್ಚಿಮಘಟ್ಟದ ಮಲೆನಾಡಿನಲ್ಲಿ ಇರುವ ಜಿಲ್ಲೆ. ಬ್ರಿಟಿಷರು ಇದನ್ನು ಕೂರ್ಗ್ ಎಂದು ಕರೆಯುತ್ತಿದ್ದರು. ಪೌರಾಣಿಕವಾಗಿ ಮತ್ತು ಐತಿಹಾಸಿಕವಾಗಿ ಜಿಲ್ಲೆ 'ಕೊಡಗು' ಆಗಿಯೇ ಗುರುತಿಸಿಕೊಂಡು ಬಂದಿದೆ. ಸರ್ಕಾರಿ ದಾಖಲೆಗಳಲ್ಲೂ 'ಕೊಡಗು' ಎಂದೇ ಇದೆ. ಆದರೂ ಇದನ್ನು 'ಮಡಿಕೇರಿ ಜಿಲ್ಲೆ' ಎಂದು ಸೀಮಿತಗೊಳಿಸುತ್ತಿರುವುದು ಸರಿಯಲ್ಲ ಎಂದು ಸ್ಥಳೀಯರ ಮಾತು. ಇನ್ನು ಮುಂದೆಯಾದರೂ 'ಕೊಡಗು' ಕೊಡಗು ಜಿಲ್ಲೆಯಾಗಿಯೇ ಬಳಕೆ ಆಗಲಿ ಎನ್ನುವುದು ಸ್ಥಳೀಯರ ಆಶಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net