ಮಡಿಕೇರಿಯ ಗಾಂಧಿ ಮೈದಾನದಲ್ಲಿ ಕಾವೇರಿ ವಸ್ತ್ರಸಿರಿ ಮೇಳ

9mdkf2 - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ

ಮಡಿಕೇರಿಯ ಗಾಂಧಿ ಮೈದಾನದಲ್ಲಿ ಫೆ.೧೫ ರವರೆಗೆ ಆಯೋಜಿಸಲಾಗಿರುವ ಕಾವೇರಿ ವಸ್ತ್ರಸಿರಿ ಜಿಲ್ಲಾ ಮಟ್ಟದ ಕೈಮಗ್ಗ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಕರ್ನಾಟಕ ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಗುರುವಾರ ಚಾಲನೆ ನೀಡಿದರು.

ಜವಳಿ ಅಭಿವೃದ್ಧಿ ಆಯುಕ್ತಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೈಮಗ್ಗ ಮತ್ತು ಜವಳಿ ಇಲಾಖೆ ಇವರ ಸಹಕಾರದಲ್ಲಿ ಏರ್ಪಡಿ ಸಲಾಗಿರುವ ಕಾವೇರಿ ವಸ್ತ್ರಸಿರಿ ಜಿಲ್ಲಾಮಟ್ಟದ ಕೈಮಗ್ಗ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ ನೀಡಿದರು. ರಾಷ್ಟ್ರದಲ್ಲಿ ಹಿಂದಿನಿಂದಲೂ ಕೈಮಗ್ಗದಿಂದ ಉತ್ಪಾದಿಸಿದ ಬಟ್ಟೆ ಧರಿಸುತ್ತಾ ಬರಲಾಗಿದೆ. ಆ ನಿಟ್ಟಿನಲ್ಲಿ ಗುಡಿ ಮತ್ತು ಸಣ್ಣ ಕೈಗಾರಿಕೆಗೆ ಒತ್ತು
ನೀಡಲಾಗಿದೆ ಎಂದರು.

ಸಣ್ಣ ಮತ್ತು ಗುಡಿ ಕೈಗಾರಿಕೆಗಳಿಗೆ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ ಸರ್ಕಾರ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಿದ್ದು, ಜಿಲ್ಲೆಯ ಜನತೆ ಇದರ ಸದುಪಯೋಗ ಪಡಿಸಿಕೊಳ್ಳುವಂತಾಗಬೇಕೆಂದರು.

ನಗರಸಭೆ ಅಧ್ಯಕ್ಷ ಅನಿತಾ ಪೂವಯ್ಯ ಮಾತನಾಡಿ, ಕಾವೇರಿ ತವರು ಮಡಿಕೇರಿಯಲ್ಲಿ ಕಾವೇರಿ ವಸ್ತ್ರಸಿರಿ ಜಿಲ್ಲಾ ಮಟ್ಟದ ಕೈಮಗ್ಗ ಉತ್ಪನ್ನ ಗಳ ಪ್ರದರ್ಶನ, ಹಾಗೆಯೇ ಜಿಪಂಯಿಂದ ಸಂಜೀವಿನಿ ಒಕ್ಕೂಟಗಳು ಉತ್ಪಾದಿಸಿದ ಉತ್ಪನ್ನಗಳ ಮಾರಾಟ ಮೇಳ ಏರ್ಪಡಿಸಲಾಗಿದೆ. ಮುಂದುವರೆದು ಕೈಮಗ್ಗ ಉತ್ಪನ್ನಗಳ ಮಾರಾಟ ಮೇಳ ಏರ್ಪಡಿಸಿರುವುದು ವಿಶೇಷ ಎಂದು ಹೇಳಿದರು.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಚರಕದ ಮೂಲಕ ವಸ್ತ್ರ ನೇಯ್ದು ಸ್ವದೇಶಿ ಉತ್ಪನ್ನಗಳಿಗೆ ಬೇಡಿಕೆ ತಂದು ಕೊಟ್ಟರು. ಆ ನಿಟ್ಟಿನಲ್ಲಿ ಸ್ವದೇಶಿ ಕೈಮಗ್ಗ ಉತ್ಪನ್ನಗಳನ್ನು ಬಳಸುವಂತಾಗಬೇಕು. ಇದರಿಂದ ಇಲ್ಲಿನ ಸ್ಥಳೀಯರಿಗೆ ಉದ್ಯೋಗಾವಕಾಶಗಳು ದೊರೆಯಲಿವೆ ಎಂದರು.

ಸರ್ಕಾರದಿಂದ ನೇಕಾರರಿಗೆ ವಿಮಾ ಸೌಲಭ್ಯ, ಸಾಲ ಸೌಲಭ್ಯ, ಜೊತೆಗೆ ಕೈಮಗ್ಗ ನೇಯ್ಗೆ ತರಬೇತಿ, ಹೀಗೆ ಹಲವು ಯೋಜನೆ ಜಾರಿ ಗೊಳಿಸಿದೆ. ಜಿಲ್ಲೆಯಲ್ಲಿಯೂ ಸಹ ಪೊನ್ನಂಪೇಟೆ, ಕುಶಾಲನಗರದಲ್ಲಿ ಕೈಮಗ್ಗ ಉತ್ಪನ್ನ ಉತ್ಪಾದಿಸುವುದು ಸಂತಸದ ವಿಚಾರ. ಜನಸಾಮಾನ್ಯರು ಇಂತಹ ಮೇಳದಲ್ಲಿ ಭಾಗವಹಿಸಿ ಕೈಮಗ್ಗ ಉತ್ಪನ್ನ ಖರೀದಿಸಿದಾಗ ಕೈಮಗ್ಗ ಉತ್ಪನ್ನಗಳಿಗೆ ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಅನಿತಾ ಪೂವಯ್ಯ ಸಲಹೆ ಮಾಡಿದರು.

ಕೈಮಗ್ಗ ಮತ್ತು ಜವಳಿ ಇಲಾಖೆ ಸಹಾಯಕ ನಿರ್ದೇಶಕ ಜಿ.ಎಸ್. ಗುರುಸ್ವಾಮಿ, ಮೇಳದಲ್ಲಿ ಕೈಮಗ್ಗ ನೇಕಾರರು ಉತ್ಪಾದಿಸಿದ ರೇಷ್ಮೆ, ಕಾಟನ್, ಕಾಂಚಿಪುರಂ, ಮೊಣಕಾಲ್ಮೂರು, ಕಂಚಿಕಾಟನ್, ಇಳಕಲ್ ಸೀರೆಗಳು, ಟವಲ್, ಬೆಡ್‌ಶೀಟ್, ಲುಂಗಿ, ಕರವಸ್ತ್ರ ಮತ್ತಿತರ ನಿತ್ಯ ಬಳಕೆಯ ಕೈಮಗ್ಗ ವಸ್ತುಗಳನ್ನು ನೇರವಾಗಿ ಶೇ.೨೦ ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ ಎಂದರು.

ಪಶ್ಚಿಮ ಬಂಗಾಳ ರಾಜ್ಯ, ಚಿಕ್ಕಬಳ್ಳಾಪುರ, ಗದಗ, ಶಿರಸಿ, ಬಾಗಲಕೋಟೆ, ಗದಗ, ದಾವಣಗೆರೆ, ಬೆಂಗಳೂರು, ತುಮಕೂರು, ಹಾವೇರಿ, ಬೆಳಗಾವಿ, ಕುಶಾಲನಗರ, ಪೊನ್ನಂಪೇಟೆ, ಹಾಸನ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ಕೈಮಗ್ಗ ಉತ್ಪಾದಕರು ಆಗಮಿಸಿ ಕೈಮಗ್ಗ ಉತ್ಪನ್ನಗಳ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ೨೦ ಮಳಿಗೆ ಸ್ಥಾಪಿಸಲಾಗಿದೆ ಎಂದು ಗುರುಸ್ವಾಮಿ ಹೇಳಿದರು. ನಗರಸಭೆ ಸದಸ್ಯೆ ಉಷಾ ಕಾವೇರಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net