ಬೆಟ್ಟಗೇರಿಯಲ್ಲಿ ಜನವರಿ ೨೮ ರಂದು ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

23mdkd1 - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ

ಮಡಿಕೇರಿ ತಾಲೂಕು ೧೧ನೇ ಕನ್ನಡ ಸಾಹಿತ್ಯ ಸಮ್ಮೇಳನ ಬೆಟ್ಟಗೇರಿ ಉದಯ ಪ್ರೌಢಶಾಲೆ ಸಭಾಂಗಣದಲ್ಲಿ ಜನವರಿ ೨೮ ರಂದು ಆಯೋಜಿಸಲು ತೀರ್ಮಾನಿಸಲಾಗಿದೆ.

ಉದಯ ಪ್ರೌಢಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಮಡಿಕೇರಿ ತಾಲೂಕು ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಯಿತು.

ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವಕಾಮತ್, ತಾಲೂಕು ಸಾಹಿತ್ಯ ಸಮ್ಮೇಳನವನ್ನು ಬೆಟ್ಟಗೇರಿ ಗ್ರಾಮದಲ್ಲಿ ನಡೆಸಬೇಕೆಂದು ತಾಲೂಕು ಸಮಿತಿ ಆಶಯ ಪಟ್ಟಿದೆ. ಜನಪ್ರತಿನಿಧಿಗಳು, ಸ್ಥಳೀಯ ಪ್ರಮುಖರು, ಗ್ರಾಮಸ್ಥರು ಸಮ್ಮೇಳನ ಯಶಸ್ವಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.

ಕಸಾಪ ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಸಮ್ಮೇಳನದಲ್ಲಿ ನಾಡಿಗೆ ಸೇವೆ ಸಲ್ಲಿಸಿ ಗತಿಸಿ ಹೋದವರ ಸೇವೆ ನೆನಪಿಸಿಕೊಳ್ಳು ವಂತಹ ಪ್ರವೇಶ ದ್ವಾರ ನಿರ್ಮಿಸಲಾಗುವುದು. ಸಾಹಿತ್ಯ ಸಮ್ಮೇಳನ ನಡೆದ ಪ್ರದೇಶದ ಹಿರಿಮೆ ಗರಿಮೆ ಆ ಪ್ರದೇಶದಲ್ಲಿ ಬರುವ ಪ್ರಾಕೃತಿಕ ಸೌಂದರ್ಯದ ಪ್ರದೇಶಗಳ ಬಗ್ಗೆ ದೇವಾಲಯಗಳ ಬಗ್ಗೆ ಸಾಂಸ್ಕೃತಿಕ ನೆಲೆಗಳ ಬಗ್ಗೆ ಮಾಹಿತಿ ಇರುವಂತಹ ಸ್ಮರಣ ಸಂಚಿಕೆ ತರಲಾಗುವು ದೆಂದರು.

ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆ, ಗೋಷ್ಠಿಗಳು, ಗೀತ ಗಾಯನ ಕಾರ್ಯಕ್ರಮ, ಕವಿಗೋಷ್ಠಿ, ಸಾಧಕರಿಗೆ ಸನ್ಮಾನ, ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಕುರಿತು ಮಾಹಿತಿ ನೀಡಿದರು. ಶಾಸಕರ ಗೌರವಾಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ ರಚಿಸು ವಂತೆಯೂ ಅಲ್ಲದೆ ಸಮ್ಮೇಳನದ ಯಶಸ್ಸಿಗೆ ಪೂರಕವಾಗುವಂತೆ ಹಣಕಾಸು ಸಮಿತಿ, ಆಹಾರ ಸಮಿತಿ, ವೇದಿಕೆ ಸಮಿತಿ, ಮೆರವಣಿಗೆ ಸಮಿತಿ, ಅಲಂಕಾರ ಸಮಿತಿ, ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ ಹೀಗೆ ಹತ್ತು ಸಮಿತಿ ರಚಿಸುವ ಕುರಿತು ಸಲಹೆ ನೀಡಿದರು.

ಉದಯ ಪ್ರೌಢಶಾಲೆ ಅಧ್ಯಕ್ಷ ತಳೂರು ಕಿಶೋರ್ ಮಾತನಾಡಿ, ನಮ್ಮ ಊರಿನಲ್ಲಿ ನಡೆಸಲಿರುವ ಸಾಹಿತ್ಯ ಸಮ್ಮೇಳನ ಒಂದು ಅಭೂತ ಪೂರ್ವ ಕಾರ್ಯಕ್ರಮದಂತೆ ನಡೆಸಿ ಕೊಡುವಲ್ಲಿ ತಾವೆಲ್ಲರೂ ಶ್ರಮ ವಹಿಸುವುದಾಗಿ ಭರವಸೆ ನೀಡಿದರು. ಇಡೀ ಗ್ರಾಮದ ಜನರನ್ನು ಒಗ್ಗೂಡಿಸಿ ಸಮ್ಮೇಳನ ಮಾಡಬೇಕೆಂದರು.

ಬೆಟ್ಟಗೇರಿ ಗ್ರಾಮ ಪಂಚಾಯತಿ ಅಧ್ಯಕ್ಷ ನಾಪಂಡ ರಾಲಿ ಮಾದಯ್ಯ ಮಾತನಾಡಿ, ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಮ್ಮ ಊರಿನಲ್ಲಿ ಮಾಡುವಂತೆ ತೀರ್ಮಾನಿಸಿದ್ದು ಖುಷಿ ತಂದಿದೆ. ನಾವೆಲ್ಲರೂ ಸೇರಿ ಹಿಂದಿನ ಎಲ್ಲಾ ತಾಲೂಕು ಸಮ್ಮೇಳನಗಳನ್ನು ಮೀರಿಸು ವಂತಹ ಸಮ್ಮೇಳನ ನಡೆಸಬೇಕಿದೆ. ಗ್ರಾಪಂಯಿಂದ ಸಂಪೂರ್ಣ ಸಹಕಾರ ನೀಡಲಾಗುವುದೆಂದರು.

ಬೆಟ್ಟಗೇರಿ ಗೌಡ ಸಮಾಜ ಅಧ್ಯಕ್ಷ ಕೊಡಪಾಲ ಗಣಪತಿ, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಕುಡೆಕಲ್ ಸಂತೋಷ್ ಮಾತನಾಡಿದರು. ವೇದಿಕೆಯಲ್ಲಿ ಉದಯ ಶಾಲೆ ಮುಖ್ಯೋಪಾಧ್ಯಾಯನಿ ಕವಿತಾ ಸೋಮಣ್ಣ, ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯನಿ ಧರಣಿ, ಕಸಾಪ ಭಾಗಮಂಡಲ ಹೋಬಳಿ ಅಧ್ಯಕ್ಷ ಸುನಿಲ್ ಜೆ. ಪತ್ರವೋ, ನಾಪೋಕ್ಲು ಹೋಬಳಿ ಅಧ್ಯಕ್ಷ ನೆರವಂಡ ಉಮೇಶ್, ಜಿಲ್ಲಾ ಗೌರವ ಕಾರ್ಯದರ್ಶಿ ರೇವತಿ ರಮೇಶ್, ಖಜಾಂಚಿ ಎಂ.ಬಿ. ಜೋಯಪ್ಪ, ತಾಲೂಕು ಖಜಾಂಚಿ ಗಿರೀಶ್, ಪ್ರಮುಖರಾದ ತಳೂರು ದಿನೇಶ್, ಕಡ್ಲೆರ ತುಳಸಿ ಮೋಹನ್ ಮತ್ತಿತರರು ಇದ್ದರು.

ಸಭೆಯಲ್ಲಿ ತಲಕಾವೇರಿ ತಕ್ಕ ಮುಖ್ಯಸ್ಥ ಕೋಡಿ ಮೋಟಯ್ಯ, ಅಹಿಂದ ಜಿಲ್ಲಾಧ್ಯಕ್ಷ ಟಿ.ಎಂ ಮುದ್ದಯ್ಯ, ಪ್ರಮುಖರಾದ ಪಟ್ಟಡ ಪೊನ್ನಪ್ಪ, ಮಟ್ಟನ ಉಲ್ಲಾಸ್, ನೆಯ್ಯಣಿ ಹೇಮಲತಾ, ತಳೂರು ಶಾಂತಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net