

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಕರ್ನಾಟಕ ಲೋಕಾಯುಕ್ತಕ್ಕೆ ಸರ್ಕಾರ ಪ್ರಾಮಾಣಿಕ ಪೊಲೀಸರನ್ನು ನೀಡಬೇಕು. ಆ ಮೂಲಕ ಲೋಕಾಯುಕ್ತ ಬಲ ಪಡಿಸಬೇಕೆಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಹೇಳಿದರು.
ಲೋಕಾಯುಕ್ತ ಕೇಳುವ ಪ್ರಾಮಾಣಿಕ ಪೊಲೀಸ್ ಅಧಿಕಾರಿ- ಸಿಬ್ಬಂದಿ ನೀಡಬೇಕು. ಪೊಲೀಸರ ಸಂಖ್ಯೆ ಹೆಚ್ಚು ಮಾಡಬೇಕೆಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಿಂದ ಲೋಕಾಯುಕ್ತಕ್ಕೆ ಪ್ರಾಮಾಣಿಕ ಅಧಿಕಾರಿ- ಸಿಬ್ಬಂದಿ ಮಾತ್ರ ತೆಗೆದುಕೊಳ್ಳಲಾಗುತ್ತದೆ. ಭ್ರಷ್ಟರನ್ನು ಸೇರಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.
ಭ್ರಷ್ಟ ಅಧಿಕಾರಿ- ಸಿಬ್ಬಂದಿ ಮೇಲೆ ತೆಗೆದುಕೊಳ್ಳಬೇಕಾದ ಕ್ರಮದ ಕುರಿತು ಸರ್ಕಾರಕ್ಕೆ ಲೋಕಾಯುಕ್ತ ಶಿಫಾರಸ್ಸು ಮಾಡುತ್ತದೆ. ಸರ್ಕಾರ ತನ್ನ ವಿವೇಚನೆ ಮೇಲೆ ಕ್ರಮ ತೆಗೆದುಕೊಳ್ಳುತ್ತದೆ. ಶೇ.೯೦ ರಷ್ಟು ಶಿಫಾರಸ್ಸು ಸರ್ಕಾರ ಜಾರಿಗೆ ತಂದಿದೆ. ಕೆಲವೊಮ್ಮೆ ಸರ್ಕಾರದ ನಿರ್ಧಾರ ತೃಪ್ತಿವುಂಟು ಮಾಡುವುದಿಲ್ಲ ಎಂದು ಹೇಳಿದರು.
ಕಳೆದ ಕೆಲವು ವರ್ಷಗಳಿಂದ ಲೋಕಾಯುಕ್ತಕ್ಕೆ ಅಡೆಚಣೆ ಉಂಟಾಗಿತ್ತು. ಕೆಲವು ಲೋಕಾಯುಕ್ತ ಅಧಿಕಾರಿಗಳಿಂದಲೂ ಅಪಖ್ಯಾತಿ ಬಂದಿತ್ತು. ಭ್ರಷ್ಟರ ಮೇಲೆ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಲೋಕಾಯುಕ್ತ ಕಾರ್ಯಾರಂಭ ಮಾಡಿದೆ. ಲೋಕಾಯುಕ್ತ ತನ್ನ ಇತಿಮಿತಿ ಒಳಗೆ ಕಾರ್ಯನಿರ್ವಹಿಸುತ್ತಿದೆ ಎಂದರು.
ಭ್ರಷ್ಟಾಚಾರ ತಡೆಯುವ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸಬೇಕಾಗಿದೆ. ಭ್ರಷ್ಟಾಚಾರ ತಡೆಯಲು ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂಬ ಪ್ರಶ್ನೆ ಎದುರಾಗಿದೆ. ದೂರುದಾರರು ಪೂರಕ ದಾಖಲೆಯೊಂದಿಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಬೇಕು. ತನಿಖೆ ಹಂತದಲ್ಲಿ ಸಹಕರಿಸಬೇಕೆಂದರು. ಕೆಲವೊಮ್ಮೆ ಒತ್ತಡಕ್ಕೆ ಒಳಗಾಗಿ ದೂರುದಾರರು ಬದಲಾಗುತ್ತಾರೆಂದು ವಿಷಾದ ವ್ಯಕ್ತ ಪಡಿಸಿದರು.
ಭ್ರಷ್ಟರು ಪೊಲೀಸರಿಗಿಂತ ಜಾಣರಾಗಿದ್ದಾರೆ. ಪೊಲೀಸ್ ಪ್ರಕ್ರಿಯೆ ಯಾವ ರೀತಿ ನಡೆಯುತ್ತದೆ ಎಂದು ಅರಿತುಕೊಂಡು ಸಿಕ್ಕಿಹಾಕಿ ಕೊಳ್ಳದ್ದಂತೆ ಭ್ರಷ್ಟಾಚಾರ ಮಾಡುತ್ತಾರೆ. ಲೋಕಾಯುಕ್ತ, ಉಪ ಲೋಕಾಯುಕ್ತರು ದಾಳಿ ನಡೆಸುವುದಿಲ್ಲ. ಲೋಕಾಯುಕ್ತ ಪೊಲೀಸರು ದಾಳಿ ನಡೆಸುತ್ತಾರೆಂದರು.
ಲೋಕಾಯುಕ್ತ ಕಾರ್ಯ ವ್ಯಾಪ್ತಿ, ದೂರು ನೀಡುವ ಕ್ರಮದ ಬಗ್ಗೆ ಬಹುತೇಕ ಜನರಿಗೆ ಮಾಹಿತಿ ಇಲ್ಲ. ಈ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಮೂರು ದಿನ ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದೇನೆ. ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಚಾಮರಾಜನಗರ ಜಿಲ್ಲೆ ಬಳಿಕ ಕೊಡಗಿಗೆ ಆಗಮಿಸಿದ್ದೇನೆ.
**
ಭ್ರಷ್ಟರ ಮೇಲೆ ಕ್ರಮ ತೆಗೆದುಕೊಳ್ಳುವ ಅಧಿಕಾರ ಲೋಕಾಯುಕ್ತಕ್ಕೆ ಇಲ್ಲ. ಲೋಕಾಯುಕ್ತ ನೀಡುವ ಶಿಫಾರಸ್ಸಿನ ಮೇಲೆ ಕ್ರಮ ತೆಗೆದು ಕೊಳ್ಳುವುದು ಸರ್ಕಾರದ ವಿವೇಚನಗೆ ಬಿಟ್ಟಿದ್ದು. ಲೋಕಾಯುಕ್ತ ಶಿಫಾರಸ್ಸು ಸರ್ಕಾರ ಜಾರಿಗೆ ತರದಿದ್ದಲ್ಲಿ ಸಹಜವಾಗಿ ಬೇಸರವುಂಟಾ ಗುತ್ತದೆ. ಕೆಲವೊಂದು ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಹೈಕೋಟರ್‌ನಲ್ಲಿ ರಿರ್ಟ್ ಸಲ್ಲಿಸಲಾಗಿದೆ. ಕೆ.ಎನ್. ಫಣೀಂದ್ರ, ಉಪಲೋಕಾಯುಕ್ತರು.
೪೦ ಅಹವಾಲು, ೨೦ ಪ್ರಕರಣ
ಕೊಡಗಿನಲ್ಲಿ ಪ್ರಥಮ ದಿನ ೪೦ ಅಹವಾಲು ಸ್ವೀಕರಿಸಿದ್ದು, ೨೦ ಪ್ರಕರಣ ನೋಂದಾಯಿಸಿಕೊಳ್ಳಲಾಗಿದೆ. ನ್ಯಾಯಾಲಯ ಸೇರಿದ್ದಂತೆ ತಮ್ಮ ವ್ಯಾಪ್ತಿಗೆ ಬಾರದ ಪ್ರಕರಣಗಳನ್ನು ಸಂಬಂಧಿಸಿದವರ ಗಮನಕ್ಕೆ ತರಲಾಗಿದೆ. ಸಾರ್ವಜನಿಕ ಅಹವಾಲು ಇತ್ಯರ್ಥಕ್ಕೆ ಅಧಿಕಾರಿಗಳಿಗೆ ೨೦ ದಿನದ ಗಡುವು ನೀಡಲಾಗಿದೆ. ವಿಲೇವಾರಿ ಮಾಡದಿದ್ದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಲಾಗಿದೆ ಎಂದರು.
ಸಾರ್ವಜನಿಕ ಅಹವಾಲನ್ನು ನಾಲ್ಕು ನಕಲು ಪ್ರತಿ ಮಾಡಲಾಗುತ್ತದೆ. ಮೂಲ ಪ್ರತಿ ನಮ್ಮ ಬಳಿ ಇಟ್ಟುಕೊಳ್ಳಲಾಗುತ್ತದೆ. ಕಾನೂನು ವಿಭಾಗ, ತಾಲೂಕಿನ ನ್ಯಾಯಾಧೀಶರು, ಲೋಕಾಯುಕ್ತ ಎಸ್ಪಿಗೆ ಒಂದೊಂದು ಪ್ರತಿ ನೀಡಲಾಗುತ್ತದೆ.
ಭಾನುವಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ್ದ ವಸತಿ ನಿಲಯ ಸೇರಿದ್ದಂತೆ ವಿವಿಧ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಸ್ಥಿತಿಗತಿ ಪರಿಶೀಲಿಸಲಾಗುವುದು. ಅಲ್ಲಿ ಆಗಬೇಕಾಗಿರುವ ಬದಲಾವಣೆ ಬಗ್ಗೆ ಮಾರ್ಗದರ್ಶನ ನೀಡಲಾಗುವುದು. ಅಗತ್ಯತೆ ಇದ್ದಲ್ಲಿ ಪ್ರಕರಣ ದಾಖಲಿಸಲಾಗುವುದೆಂದರು.
ಕೊಡಗಿನಲ್ಲಿ ಕನಿಷ್ಠ ೧೦೦ ಅಹವಾಲು ಬರುವ ನಿರೀಕ್ಷೆ ಇತ್ತು. ಆದರೆ, ನಿರೀಕ್ಷಿತ ದೂರು ಬಂದಿಲ್ಲ. ಕೊಡಗಿಗೆ ಸಂಬಂಧಿಸಿದ್ದಂತೆ ೭೦ ದೂರು ಇದ್ದು, ಈ ಪೈಕಿ ವಿಚಾರಣೆ ನಡೆಸಲು ೪೦ ಪ್ರಕರಣದ ಕಡತ ತರಲಾಗಿದೆ. ದೂರುದಾರರು ಮತ್ತು ಸಂಬಂಧಿಸಿದ ಅಧಿಕಾರಿಗಳ ಸಮ್ಮುಖದಲ್ಲಿ ವಿಚಾರಣೆ ನಡೆಸಿ ಇತ್ಯರ್ಥ ಮಾಡಲಾಗುವುದೆಂದರು.