ದೈವ ಆರಾಧಕರು- ದೈವ ಸಂಪ್ರದಾಯದ ಕೃತಿ ಪ್ರಕಟಣೆ

14mdkj1 - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ

ಕೊಡಗು ಜಿಲ್ಲೆಯಲ್ಲಿರುವ ತುಳುನಾಡಿನ ದೈವಸ್ಥಾನದ ಹೆಸರು, ಊರು, ದೈವ ನರ್ತಕರು, ದೈವ ಆರಾಧಕರು ಮತ್ತು ದೈವ ಸಂಪ್ರದಾಯದ ಮಾಹಿತಿಯನ್ನೊಳಗೊಂಡ ದಾಖಲೀಕರಣದ ಪುಸ್ತಕ ಹೊರ ತರುವ ಯೋಜನೆ ರೂಪಿಸುವ ಅಗತ್ಯವಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪಿ.ಎಂ.ರವಿ ಹೇಳಿದರು.

ಬಾಲಭವನದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕೊಡಗು ಜಿಲ್ಲೆಯ ದೈವ ಆರಾಧಕರು ಹಾಗೂ ದೈವ ನರ್ತಕರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಜಿಲ್ಲೆಯಲ್ಲಿ ತುಳುನಾಡಿನ ದೈವಾರಾಧನೆಯ ಬಹಳಷ್ಟು ದೈವ ಕ್ಷೇತ್ರಗಳಿವೆ. ದೈವ ಆರಾಧಕರು ಹಾಗೂ ದೈವ ನರ್ತಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಇತ್ತೀಚಿನ ದಿನಗಳಲ್ಲಿ ದೈವ ಮತ್ತು ದೈವಾರಾಧನೆಯನ್ನು ಅವಮಾನಿಸುವ, ದೈವದ ಬಗ್ಗೆ ಅಪಹಾಸ್ಯ ಮಾಡುವ ಪ್ರಕರಣ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸಲು ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಅಗತ್ಯವಿದೆ. ಶಾಲಾ, ಕಾಲೇಜು ಸೇರಿದಂತೆ ಖಾಸಗಿ ಕಾರ್ಯಕ್ರಮಗಳಲ್ಲಿ ದೈವದ ವೇಷಭೂಷಣ ತೊಟ್ಟು ಪಾತ್ರ ಮಾಡುವುದಕ್ಕೆ ಅವಕಾಶ ನೀಡಬಾರದೆಂದರು.

ಸರ್ಕಾರದ ಆದೇಶದಂತೆ ದೈವ ಆರಾಧಕರು, ದೈವ ನರ್ತಕರಿಗೆ ಮಾಸಾಶನ ನೀಡುವ ಕಾರ್ಯ ಈಗಾಗಲೇ ದಕ್ಷಿಣ ಕನ್ನಡದಲ್ಲಿ ಆರಂಭ ಗೊಂಡಿದ್ದು, ಕೊಡಗು ಜಿಲ್ಲೆಗೆ ಸಂಬಂಧಿಸಿದ ಮಾಹಿತಿ ನೀಡುವ ಕೆಲಸ ಆಗಬೇಕು. ಜಿಲ್ಲೆಯ ದೈವಸ್ಥಾನದ ಅಭಿವೃದ್ಧಿಗೆ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು. ದೈವದ ಸೇವೆ, ಕೋಲ, ನೇಮೋತ್ಸವ ಕ್ರಮ ಬದ್ಧವಾಗಿ ನಡೆಸಲು ಮಾರ್ಗದರ್ಶನ ನೀಡಬೇಕು. ವರ್ಷಕ್ಕೊಮ್ಮೆ ದೈವ ಆರಾಧಕರ ದೈವ ನರ್ತಕರ ಕುಟುಂಬದ ಎಲ್ಲಾ ಸದಸ್ಯರೊಂದಿಗೆ ಕಾರ್ಯಕ್ರಮ ಆಯೋಜಿಸಿ ತುಳುನಾಡಿನ ಜಾನಪದ ವಿದ್ವಾಂಸ ರಿಂದ ಧಾರ್ಮಿಕ ಉಪನ್ಯಾಸ ಹಾಗೂ ಮಾಹಿತಿ ವಿನಿಮಯ ಕಾರ್ಯಕ್ರಮ ನಡೆಸಬೇಕು. ಜಿಲ್ಲೆಯಲ್ಲಿ ದೈವ ಆರಾಧಕರು ಮತ್ತು ದೈವ ನರ್ತಕರ ಸಂಘ ರಚಿಸವುದರಿಂದ ಪ್ರತಿ ಉದ್ದೇಶಗಳನ್ನು ಈಡೇರಿಸಲು ಸಹಕಾರಿಯಾಗಲಿದೆ ಹಾಗೂ ಸಂಕಷ್ಟಕ್ಕೆ ಸ್ಪಂದನೆ ದೊರೆಯಲಿದೆ ಎಂದು ರವಿ ಸಲಹೆ ನೀಡಿದರು.

ಸಭೆಯಲ್ಲಿ ದೈವ ಆರಾಧಕರಾದರ ರಮೇಶ್ ಪೂಜಾರಿ, ಉಮೇಶ್ ಕೆದಕಲ್, ರಾಜೇಶ್ ಒಂಟಿಯಂಗಡಿ, ಮುತ್ತಪ್ಪ ಪೂಜಾರಿ, ಸದಾಶಿವ ರೈ ತಾಳತ್ತಮನೆ, ಕೃಷ್ಣಪ್ಪ ಹೆಬ್ಬೆಟ್ಟಗೇರಿ, ಲೋಹಿತ್ ಹೆಬ್ಬೆಟ್ಟಗೇರಿ, ಪೂವಪ್ಪ ಗರಗಂದೂರು, ಪವನ್ ಮರಗೋಡು, ದೇವಪ್ಪ ಕೊಯಿನಾಡು, ಗುರುವ ಮಂಜಿಕೆರೆ, ಕೋಟಿ ಪೂಜಾರಿ, ಜನಾರ್ಧನ, ರಾಜು ರೈ ಸುಂಟಿಕೊಪ್ಪ, ದಿನೇಶ್ ಉಡೋತ್, ಪವನ್ ಪೂಜಾರಿ, ಲವನ್ ಪೂಜಾರಿ, ಪಾಪು ರವಿ, ಸಂತೋಷ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net