ಜೆಡಿಎಸ್ ಅಧಿಕಾರಕ್ಕೆ ತರಲು ಶ್ರಮಿಸಲು ವಿ.ನರಸಿಂಹಮೂರ್ತಿ ಕರೆ

narasimhamurthi
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ

ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ತರಲು ಪ್ರತಿಯೊಬ್ಬರು ನಿಸ್ವಾರ್ಥದಿಂದ ಶ್ರಮಿಸಬೇಕೆಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ನರಸಿಂಹಮೂರ್ತಿ ಕರೆ ನೀಡಿದರು.

ಜೆಡಿಎಸ್ ಜಿಲ್ಲಾ ಕಚೇರಿಯಲ್ಲಿ ಸೋಮವಾರ ಆಯೋಜಿಸಲಾಗಿದ್ದ ಪಕ್ಷದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಜಿಲ್ಲೆಯ ಎರಡೂ ಕ್ಷೇತ್ರ ಗಳಲ್ಲಿ ಈ ಬಾರಿ ಜೆಡಿಎಸ್ ಅಭ್ಯರ್ಥಿ ಗೆಲುವು ಸಾಧಿಸುವಂತೆ ನೋಡಿಕೊಳ್ಳಬೇಕು. ವರಿಷ್ಠರು ಘೋಷಿಸುವ ಅಭ್ಯರ್ಥಿಯೇ ಅಂತಿಮವಾಗ ಲಿದೆ. ಯಾರೂ ತಾವೇ ಅಭ್ಯರ್ಥಿ ಎಂದು ಘೋಷಿಸಿಕೊಂಡು ಪ್ರಚಾರಕ್ಕಿಳಿಯಬಾರದೆಂದರು.

ಎಚ್.ಡಿ. ಕುಮಾರಸ್ವಾಮಿ ತಮ್ಮ ಅಧಿಕಾರವಧಿಯಲ್ಲಿ ಮಾಡಿದ ಜನಪರ ಸೇವೆ ಮತ್ತು ರೈತರ ಮೇಲಿನ ಕಾಳಜಿಯನ್ನು ಇಡೀ ರಾಜ್ಯವೇ ಕೊಂಡಾಡುತ್ತಿದೆ. ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾಗಬೇಕೆನ್ನುವ ಜನಾಭಿಪ್ರಾಯದೆ. ಆದ್ದರಿಂದ ಪ್ರತಿ ಕ್ಷೇತ್ರದಲ್ಲಿ ಕುಮಾರಸ್ವಾಮಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆಂದು ಭಾವಿಸಿ ಪಕ್ಷವನ್ನು ಗೆಲ್ಲಿಸುವ ಗುರಿಯೊಂದಿಗೆ ಮುನ್ನಡೆಯಬೇಕೆಂದರು. ಜೆಡಿಎಸ್ ಕೊಡಗು ಜಿಲ್ಲಾಧ್ಯಕ್ಷರ ಬದಲಾವಣೆ ಮಾತೇ ಇಲ್ಲ. ಈ ವಿಚಾರದಲ್ಲಿ ಯಾರೂ ಗೊಂದಲ ಸೃಷ್ಟಿಸಬಾರದೆಂದು ನರಸಿಂಹಮೂರ್ತಿ ಹೇಳಿದರು.

ವಿದ್ಯಾರ್ಥಿ ಘಟಕದ ರಾಜ್ಯಾಧ್ಯಕ್ಷ ಉಮೇಶ್ ಗೌಡ ಮಾತನಾಡಿ, ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ನೇತೃತ್ವದಲ್ಲಿ ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲವು ಸಾಧಿಸಲಿದ್ದಾರೆಂದು ವಿಶ್ವಾಸ ವ್ಯಕ್ತ ಪಡಿಸಿದರು.

ಎರಡು ದಶಕದಿಂದ ಜಿಲ್ಲೆಯನ್ನು ಪ್ರತಿನಿಧಿಸಿದವರು ಸ್ಥಳೀಯ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸದ ಕಾರಣ ಜನರು ಬದಲಾವಣೆ ಬಯಸುತ್ತಿದ್ದಾರೆ. ಸರ್ಕಾರದ ವೈಫಲ್ಯ ಜನರ ಮುಂದಿಟ್ಟು ಜೆಡಿಎಸ್ ಅಭ್ಯರ್ಥಿ ಗೆಲುವಿಗೆ ಅವಿರತ ಶ್ರಮ ವಹಿಸುವಂತೆ ಕರೆ ನೀಡಿದರು.


ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ಮಾತನಾಡಿ, ಕಾಂಗ್ರೆಸ್- ಬಿಜೆಪಿಯಿಂದ ಜಿಲ್ಲೆಯ ಜನ ಬೇಸತ್ತಿದ್ದು, ಈ ಬಾರಿ ಜೆಡಿಎಸ್ ಅನ್ನು ಎರಡೂ ಕ್ಷೇತ್ರಗಳಲ್ಲಿ ಗೆಲ್ಲಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಲಿದ್ದಾರೆಂದು ವಿಶ್ವಾಸ ವ್ಯಕ್ತ ಪಡಿಸಿದರು.

ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದಾಗ ರೈತರ ನೋವಿಗೆ ಸ್ಪಂದಿಸಿ ಕೃಷಿ ಸಾಲ ಮನ್ನಾ ಮಾಡಿದ್ದಾರೆ. ಕೊಡಗು ಪ್ರಾಕೃತಿಕ ವಿಕೋಪದಿಂದ ಸಂಕಷ್ಟದಲ್ಲಿದ್ದಾಗ ಸಕಾಲದಲ್ಲಿ ನೆರವಿಗೆ ಧಾವಿಸಿ ನೊಂದವರಿಗೆ ಆಸರೆ ನೀಡಿದ್ದಾರೆ. ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದಾರೆ. ಇದನ್ನು ಜಿಲ್ಲೆಯ ಜನ ಮರೆತಿಲ್ಲ ಎಂದರು.

ಮಡಿಕೇರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಸಂಭವನೀಯ ಅಭ್ಯರ್ಥಿ ನಾಪಂಡ ಮುತ್ತಪ್ಪ, ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಸಿ. ಸುನೀಲ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗಣೇಶ್, ಯುವ ಘಟಕ ಜಿಲ್ಲಾಧ್ಯಕ್ಷ ಸಿ.ಎಲ್. ವಿಶ್ವ, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಪುಷ್ಪಾವತಿ, ಪ್ರಧಾನ ಕಾರ್ಯದರ್ಶಿ ಲೀಲಾ ಶೇಷಮ್ಮ, ಕುಶಾಲನಗರ ತಾಲೂಕು ಅಧ್ಯಕ್ಷ ಪಿ.ಡಿ. ರವಿ, ವಿರಾಜಪೇಟೆ ತಾಲ್ಲೂಕು ಅಧ್ಯಕ್ಷ ಪಿ.ಎ. ಮಂಜುನಾಥ್, ಪ್ರಮುಖರಾದ ಗುಲಾಬಿ ಜನಾರ್ಧನ, ರುಬೀನಾ, ಪಾಣತ್ತಲೆ ವಿಶ್ವನಾಥ್, ಯೂಸುಫ್ ಕೊಂಡಂಗೇರಿ, ಜಿಲ್ಲಾ ಯುವ ಜೆಡಿಎಸ್ ವಕ್ತಾರ ರವಿಕಿರಣ್ ರೈ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net