ಮಡಿಕೇರಿ ಜನೋತ್ಸವ; ’ಶ್ರೀ ಕೋಟೆ ಗಣಪತಿ’ಗೆ ಪ್ರಥಮ ಸ್ಥಾನ

6adarshkdga
Published on

ಮಡಿಕೇರಿ: ಮಡಿಕೇರಿ ಜನೋತ್ಸವದ ಶೋಭಯಾತ್ರೆಯಲ್ಲಿ ’ಶ್ರೀ ಕೋಟೆ ಗಣಪತಿ’ ಪ್ರಥಮ ಸ್ಥಾನ ಪಡೆದರೆ, ’ಶ್ರೀ ದಂಡಿನ ಮಾರಿಯಮ್ಮ’ ದ್ವಿತೀಯ, ಶ್ರೀ ’ಚೌಟಿಮಾರಿಯಮ್ಮ’ ಮತ್ತು ’ಕೋಟೆ ಮಾರಿಯಮ್ಮ’ ಮಂಟಪ ಸಮಿತಿಗಳು ತೃತೀಯ ಸ್ಥಾನವನ್ನು ಹಂಚಿಕೊಂಡಿತ್ತು.


ನಗರದ ಮುಖ್ಯ ಬೀದಿಗಳಲ್ಲಿ ಬುಧವಾರ ರಾತ್ರಿಯಿಂದ ಆರಂಭವಾದ ೧೦ ಮಂಟಪಗಳ ಮೆರವಣಿಗೆ ಹಾಗೂ ಪೌರಾಣಿಕ ಕಥಾ ಪ್ರಸಂಗ ಆಧಾರಿತ ಕಲಾಕೃತಿಗಳ ಶೋಭಾಯಾತ್ರೆ ಗುರುವಾರ ಮುಂಜಾನೆವರೆಗೆ ನಡೆಯಿತು.

ಪ್ರತಿಯೊಂದು ದೇವಾಲಯ ಮಂಟಪ ಸಮಿತಿಗಳು ೨ ಟ್ರ್ಯಾಕ್ಟರ್ ಬಳಸಿ ೧೫ಕ್ಕೂ ಹೆಚ್ಚಿನ ಕಲಾಕೃತಿಗಳಿಂದ ಕಥೆಗೆ ತಕ್ಕಂತೆ ಚಲನೆ ಮಾಡಲಾಯಿತು. ಕಥಾ ಸಾರಾಂಶ ಕಲಾಕೃತಿ, ಪ್ರಭಾವಳಿ ಸ್ಟುಡಿಯೋ, ಚಾಲನೆಗೆ ೨ ಟ್ರ್ಯಾಕ್ಟರ್ ಸೆಟ್ಟಿಂಗ್ಸ್, ಧ್ವನಿ ಮುದ್ರಣ - ಶುಚಿತ್ವ- ಸಮಯಪಾಲನೆ ಆಲಿಸಿ ನಗರ ದಸರಾ ಸಮಿತಿ ವತಿಯಿಂದ ವರ್ಷಂಪ್ರತಿ ಪ್ರಶಸ್ತಿ ಹಾಗೂ ಚಿನ್ನದ ನಾಣ್ಯ ವಿತರಿಸಲಾಗುತ್ತದೆ. ಅಂತೆಯೇ ಪ್ರಸಕ್ತ ವರ್ಷದ ಪ್ರಶಸ್ತಿಯನ್ನು ಕ್ರಮವಾಗಿ ಶ್ರೀ ಕೋಟೆ ಗಣಪತಿ, ಶ್ರೀ ದಂಡಿನ ಮಾರಿಯಮ್ಮ, ಶ್ರೀ ಚೌಟಿಮಾರಿಯಮ್ಮ ಮತ್ತು ಕೋಟೆ ಮಾರಿಯಮ್ಮ ದೇವಾಲಯಗಳು ತೃತೀಯ ಸ್ಥಾನವನ್ನು ಹಂಚಿಕೊಂಡಿತ್ತು.


ಮಂಟಪ ಸಮಿತಿಗಳು ಪಡೆದ ಅಂಕಗಳು: ಪೇಟೆ ಶ್ರೀರಾಮ ಮಂದಿರ ೩೫, ದೇಚೂರು ಶ್ರೀ ರಾಮ ಮಂದಿರ ೬೦, ಶ್ರೀ ದಂಡಿನ ಮಾರಿಯಮ್ಮ ೭೯, ಶ್ರೀ ಚೌಡೇಶ್ವರಿ ೭೧, ಶ್ರೀ ಕಂಚಿ ಕಾಮಾಕ್ಷಿ ೭೬, ಚೌಟಿಮಾರಿಯಮ್ಮ ೭೮, ಶ್ರೀ ಕೋದಂಡ ರಾಮ ೬೦, ಕೋಟೆ ಮಾರಿಯಮ್ಮ ೭೮, ಶ್ರೀ ಕೋಟೆ ಗಣಪತಿ ೮೨, ಶ್ರೀ ಕರವಲೆ ಭಗವತಿ ೭೨ ಅಂಕ ಪಡೆಯಿತು.


ಗಮನ ಸೆಳೆದ ಚೌಡೇಶ್ವರಿ ಸೌಂಡ್ಸ್: ಪ್ರಥಮ ಬಾರಿಗೆ ಚೌಡೇಶ್ವರಿ ಬಾಲಕ ಭಕ್ತ ಮಂಡಳಿ ಕ್ರೈನ್ ಬಳಸಿ ಯುವಜನತೆಯ ಗಮನ ಸೆಳೆಯಿತು. ಕ್ರೈನ್‌ನಲ್ಲಿ ಇಳಿಬಿಟ್ಟ ಸ್ಪೀಕರ್‌ನೊಂದಿಗೆ ಧರೆಗೆ ಇಳಿಬಿಟ್ಟ ಬಣ್ಣಬಣ್ಣದ ಲೈಟ್ಸ್ ಆಕರ್ಷಣೀಯವಾಗಿತ್ತು. ಶೋಭಯಾತ್ರೆ ಸಂದರ್ಭದಲ್ಲಿ ಪ್ರತಿಯೊಂದು ತೇರಿನ ಮುಂಭಾಗ ವ್ಯಾನ್, ಪಿಕಪ್, ಟ್ರ್ಯಾಕ್ಟರ್‌ಗಳಲ್ಲಿ ೧೫ ಕ್ಕೂ ಹೆಚ್ಚಿನ ಸ್ಪೀಕರ್ ಬಳಸಿ ಡಿಜೆ ವ್ಯವಸ್ಥೆ ಮಾಡಲಾಗಿತ್ತು. ಯಾವ ಹಾಡಿಗೆ ಹೆಜ್ಜೆ ಹಾಕೋಣ ಎಂಬ ಪರಿಸ್ಥಿತಿ ಯುವಕರಲ್ಲಿ ಮೂಡಿದ್ದರೆ, ದೇವಾಲಯ ಸಮಿತಿ ತಮ್ಮ ವಾಹನದ ಮುಂಭಾಗ ಹೆಜ್ಜೆ ಹಾಕಲಿ ಎಂದು ಹೆಚ್ಚಿನ ಸೌಂಡ್, ಹಾಗೂ ಡಿಜೆ ಹಾಕಿ ತನ್ನತ್ತ ಸೆಳೆಯುವ ಪ್ರಯತ್ನ ಮಾಡುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net