

ಮಡಿಕೇರಿ:
ರಾಜ್ಯದಲ್ಲಿ ಕಾಣಿಸಿಕೊಂಡಿರುವ ಬರದ ಕರಿ ಛಾಯೆ ಮಡಿಕೇರಿ ದಸರಾ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳೇ ಅಧಿಕವಾಗಿದೆ. ಪ್ರತಿ ವರ್ಷವೂ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಚೇತರಿಕೆಯ ಟಾನಿಕ್ ನೀಡುವ ಮಡಿಕೇರಿ ದಸರಾ ಮಂಕಾದರೆ ಕೊಡಗಿನ ವಾಣಿಜ್ಯ ಚಟುವಟಿಕೆಗಳು ಏರುಪೇರಾಗುವ ಆತಂಕ ಸ್ಥಳೀಯರಲ್ಲಿ ಕಾಣಿಸಿಕೊಂಡಿದೆ. ಮಡಿಕೇರಿ ದಸರಾಕ್ಕೆ ೨ ಕೋಟಿ ರೂ.ಗಳ ಬೇಡಿಕೆಯನ್ನು ಸರ್ಕಾರದ ಮುಂದೆ ಇಟ್ಟಿದ್ದರೂ ಈ ಬಗ್ಗೆ ಸೋಮವಾರದ ಪೂರ್ವಭಾವಿ ಸಭೆಯಲ್ಲಿ ಸಚಿವರಿಂದ ಆಶಾದಾಯಕ ಭರವಸೆ ಸಿಗದಿರುವುದು ಕೂಡ ಚರ್ಚೆಗೆ ಕಾರಣವಾಗಿದೆ.
ಜೂನ್‌ನಲ್ಲಿ ಮಳೆಗಾಲ ಶುರುವಾಗುವುದರಿಂದ ನಂತರದ ೪-೫ ತಿಂಗಳು ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಸಾಮಾನ್ಯಕ್ಕಿಂತ ಕಡಿಮೆ ಇರುತ್ತದೆ. ಅಕ್ಟೋಬರ್‌ನಲ್ಲಿ ದಸರಾ ಆಚರಣೆ ಕಳೆಗಟ್ಟುವುದರಿಂದ ಪ್ರವಾಸಿಗರು ಇತ್ತ ಕಡೆ ಆಕರ್ಷಿತರಾಗಿ ಆಗಮಿಸುತ್ತಾರೆ. ದಸರಾ ಆಚರಣೆ ವಿಜೃಂಭಿಸಿದಷ್ಟೂ ಪ್ರವಾಸಿಗರ ಸಂಖ್ಯೆಯೂ ಅಧಿಕವಾಗಿ ಇರುತ್ತದೆ. ಮಳೆಗಾಲದಲ್ಲಿ ನಿಧಾನಗತಿಯಲ್ಲಿರುವ ಪ್ರವಾಸಿಗರ ಹರಿವು ದಸರಾ ನಂತರ ಹೆಚ್ಚುತ್ತಾ ಹೋಗಿ ವರ್ಷಾಂತ್ಯ ಮತ್ತು ಹೊಸ ವರ್ಷದ ಆರಂಭದ ಸಂದರ್ಭದಲ್ಲಿ ಗಿಜಿಗುಡಲಾರಂಭಿಸುತ್ತದೆ. ಫೆಬ್ರವರಿ, ಮಾರ್ಚ್‌ನಿಂದ ಯಥಾ ಪ್ರಕಾರ ಕೊಡಗಿನಲ್ಲಿ ಪ್ರವಾಸಿ ಸೀಸನ್ ಶುರುವಾಗುತ್ತದೆ. ಆದರೆ ಇದಕ್ಕೆ ಚಿಮ್ಮುಹಲಗೆ ರೀತಿಯಲ್ಲಿ ಕೆಲಸ ಮಾಡುವುದು ಮಡಿಕೇರಿ ದಸರಾ ಎನ್ನುವುದು ಪ್ರವಾಸೋದ್ಯಮಿಗಳ ಅಭಿಪ್ರಾಯ.
ರಾಜ್ಯಾದ್ಯಂತ ಬರ ಕಾಣಿಸಿಕೊಂಡಿರುವ ಕಾರಣಕ್ಕೆ ಮೈಸೂರು ದಸರಾವನ್ನು ಸರಳವಾಗಿ ಆಚರಿಸಲಾಗುವುದು ಎಂದು ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಇದರ ಪರಿಣಾಮ ಮಡಿಕೇರಿ ದಸರಾ ಮೇಲೂ ಉಂಟಾಗುವ ಸಾಧ್ಯತೆ ಅಲ್ಲಗೆಳೆಯುವಂತೆ ಇಲ್ಲ. ಜನೋತ್ಸವವಾಗಿ ಗುರುತಿಸಿಕೊಂಡಿರುವ ಮಡಿಕೇರಿ ದಸರಾ ಸರ್ಕಾರದ ಅನುದಾನ ಇಲ್ಲದೆ ವಿಜೃಂಭಣೆಯಿಂದ ನಡೆಯುವುದು ಕೂಡ ಅಸಾಧ್ಯದ ಮಾತು. ಈ ಹಿನ್ನೆಲೆಯಲ್ಲಿ ಮಡಿಕೇರಿ ದಸರಾ ಸಮಿತಿ ಪದಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ನೇತೃತ್ವದಲ್ಲಿ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ೨ ಕೋಟಿ ರೂ. ಅನುದಾನಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.
ಕಳೆದ ವರ್ಷ ಸರ್ಕಾರ ಮಡಿಕೇರಿ ದಸರಾಕ್ಕೆ ೧ ಕೋಟಿ ರೂ. ಅನುದಾನದ ಭರವಸೆ ಕೊಟ್ಟಿತ್ತು. ಹಾಗಾಗಿ ಈ ಮೊತ್ತಕ್ಕೆ ಅನುಗುಣವಾಗಿ ಬಜೆಟ್ ರೂಪಿಸಿ ಖರ್ಚು ಮಾಡಲಾಗಿತ್ತು. ಆದರೆ ಈತನಕ ೭೫ ಲಕ್ಷ ರೂ. ಮಾತ್ರ ಸರ್ಕಾರದಿಂದ ಬಂದಿದೆ. ೨೫ ಲಕ್ಷ ರೂ. ಬಾಕಿ ಇದ್ದು, ಮಾಡಿಸಿಕೊಂಡಿರುವ ಕೆಲಸಕ್ಕೆ ದಸರಾ ಸಮಿತಿ ಹಣ ಪಾವತಿಸಿದೆ ಸಾಲಗಾರನಾಗಿ ಉಳಿದುಕೊಳ್ಳುವಂತಾಗಿದೆ. ಈ ವರ್ಷ ಬಾಕಿ ೨೫ ಲಕ್ಷ ರೂ. ಬಿಡುಗಡೆಯ ಜತೆಗೆ ೨ ಕೋಟಿ ರೂ. ಅನುದಾನ ಕೇಳಲಾಗಿದೆ. ಆದರೆ ಬರದ ಕಾರಣ ನೀಡಿ ಸಿಎಂ ಸಿದ್ದರಾಮಯ್ಯ ಇಷ್ಟು ಮೊತ್ತವನ್ನು ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಸೋಮವಾರ ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ದಸರಾ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದ ದಸರಾ ಸಮಿತಿ ಪದಾಧಿಕಾರಿಗಳು ಸರಳ ದಸರಾದ ವಿರುದ್ಧವೇ ಮಾತನಾಡಿದ್ದಾರೆ. ದಸರಾವನ್ನು ವಿಜೃಂಭಣೆಯಿಂದ ಆಚರಿಸಿದರೆ ಕೊಡಗಿನ ಪ್ರವಾಸೋದ್ಯಮಕ್ಕೆ ಯಾವ ರೀತಿಯಲ್ಲಿ ಅನುಕೂಲ ಆಗುತ್ತದೆ ಮತ್ತು ಜಿಲ್ಲೆಯ ಆರ್ಥಿಕತೆಗೆ ಹೇಗೆ ಸಹಾಯವಾಗುತ್ತದೆ ಎನ್ನುವುದನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆದಿದೆ. ಆದರೂ ಸರ್ಕಾರದಿಂದ ಸಿಗಬಹುದಾದ ಅನುದಾನದ ಮೊತ್ತದ ಬಗ್ಗೆ ಸಚಿವರಿಂದ ಯಾವುದೇ ಸ್ಪಷ್ಟ ಭರವಸೆ ಸಿಕ್ಕಿಲ್ಲ.
ಬರ ಇರುವುದರಿಂದ ಖುಷಿಯಲ್ಲಿ ದಸರಾ ಮಾಡಲು ಕಷ್ಟ ಆಗಬಹುದು ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಹೇಳಿದರೆ, ದಸರಾವನ್ನು ಸಾಂಪ್ರದಾಯಿಕ ಹಾಗೂ ವ್ಯವಸ್ಥಿತವಾಗಿ ಆಚರಿಸಲು ಸರ್ಕಾರದಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದಷ್ಟೇ ಉಸ್ತುವಾರಿ ಸಚಿವರು ಹೇಳಿದ್ದಾರೆ. ತಾವು ಕೇಳಿದಷ್ಟು ಅಲ್ಲವಾದರೂ ಉತ್ತಮವಾದ ಮೊತ್ತದ ನಿರೀಕ್ಷೆಯಲ್ಲಿ ಇದ್ದ ದಸರಾ ಸಮಿತಿ ಪದಾಧಿಕಾರಿಗಳಿಗೆ ಸಚಿವರ ಅಡ್ಡಗೋಡೆ ಮೇಲೆ ದೀಪ ಇಟ್ಟಂಥ ಮಾತು ಇಕ್ಕಟ್ಟಿಗೆ ಸಿಲುಕಿಸಿದೆ. ಮುಂದಿನ ಸಿದ್ಧತೆಗಳ ಮೇಲೆ ಇದು ಪರಿಣಾಮ ಬೀರುವ ಸಾಧ್ಯತೆ ಇದೆ. ಇಷ್ಟೆಲ್ಲದರ ಮಧ್ಯೆಯೂ ಸಚಿವ ಎನ್.ಎಸ್. ಬೋಸರಾಜು ಮುಖ್ಯಮಂತ್ರಿಗೆ ಆಪ್ತರಾಗಿರುವುದರಿಂದ ಇವರ ಮೇಲೆ ದಸರಾ ಸಮಿತಿ ಇನ್ನೂ ಭರವಸೆ ಇಟ್ಟುಕೊಂಡಿದೆ.