ಸಾಮಾಜಿಕ ಸೇವೆಯಲ್ಲಿರುವ ಮಹಿಳೆಯರನ್ನು ಪ್ರೋತ್ಸಾಹಿಸಲು ಕರೆ

11mdkf1 - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ

ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮಹಿಳೆಯರನ್ನು ಪ್ರೋತ್ಸಾಹಿಸಬೇಕೆಂದು ಇನ್ನರ್ ವೀಲ್ ಜಿಲ್ಲೆ ೩೧೮ ರ ಅಧ್ಯಕ್ಷೆ ಕವಿತಾ ನಿಯಾತ್ ಮನವಿ ಮಾಡಿದರು.

ಮಡಿಕೇರಿ ಇನ್ನರ್ ವೀಲ್ ಸಂಸ್ಥೆಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ರೋಟರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಮಹಿಳೆಯರು ಅತ್ಯಂತ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ಉದ್ದೇಶಿತ ಗುರಿ ಸಾಧಿಸಲು ಮಹಿಳೆಯರು ಹೆಚ್ಚು ಕಟಿಬದ್ಧರಾಗಿರುತ್ತಾರೆ. ಇಂಥ ಸಂದರ್ಭ ಮಹಿಳೆಯರನ್ನು ಪ್ರೋತ್ಸಾಹಿಸಬೇಕೆ ವಿನಾ ಅವರ ಸ್ಥೆರ್ಯ ಕುಂದಿಸಬಾರದೆಂದರು.

ದೊಡ್ಡ ಯೋಜನೆ ಕೈಗೊಳ್ಳುವ ಸಂದರ್ಭ ಸಣ್ಣಪುಟ್ಟ ಲೋಪದೋಷ ಸಹಜ. ಲೋಪಗಳನ್ನೇ ದೊಡ್ಡದು ಮಾಡುವ ಬದಲಿಗೆ ಅವುಗಳನ್ನು ನಿರ್ಲಕ್ಷಿಸಿ ಉದ್ದೇಶಿತ ಗುರಿ ಸಾಧನೆಗೆ ಮುಂದಾಗುವುದು ಉತ್ತಮ. ಇನ್ನರ್ ವೀಲ್ ಸಂಸ್ಥೆ ಸದೃಢ ಮಹಿಳೆ - ಸದೃಢ ಜಗತ್ತು ಎಂಬ ಸಂದೇಶದಡಿ ಹಲವಾರು ಕಾರ್ಯ ಯೋಜನೆ ಯಶಸ್ವಿಯಾಗಿ ಜಾರಿಗೊಳಿಸಿದೆ ಎಂದರು.

ಮಡಿಕೇರಿ ಇನ್ನರ್ ವೀಲ್ ಸಂಸ್ಥೆ ಅಧ್ಯಕ್ಷೆ ಡಾ.ರೇಣುಕಾ ಸುಧಾಕರ್ ಮಾತನಾಡಿ, ಸದಸ್ಯೆಯರೆಲ್ಲರ ಸಹಕಾರದಿಂದ ಈ ವರ್ಷ ಇನ್ನರ್ ವೀಲ್ ಸಂಸ್ಥೆ ೫೦ ಕ್ಕೂ ಅಧಿಕ ಯೋಜನೆ ಜನಸಾಮಾನ್ಯರಿಗೆ ತಲುಪಿಸಿದೆ. ಸಮಾಜ ಸೇವಾ ಕಾರ್ಯಗಳಿಗೆ ಮಡಿಕೇರಿ ಇನ್ನರ್ ವೀಲ್ ಬದ್ಧವಾಗಿದೆ ಎಂದರು.

ಇನ್ನರ್ ವೀಲ್ ಸಂಸ್ಥೆಯ ವಾರ್ತಾ ಸಂಚಿಕೆಯನ್ನು ಮಡಿಕೇರಿ ರೋಟರಿ ಅಧ್ಯಕ್ಷ ಕಾಂಡಂಡ ಕಾರ್ಯಪ್ಪ ಬಿಡುಗಡೆಗೊಳಿಸಿದರು. ಮಡಿಕೇರಿ ಇನ್ನರ್ ವೀಲ್ ಸಂಸ್ಥೆಗೆ ದಿವ್ಯಾ ಅರೋರ, ಕಾಂಡಂಡ ಪೂಜಾ ಕಾರ್ಯಪ್ಪ, ತೆಕ್ಕಡೆ ಗುಲಾಬಿ ಜನಾರ್ಧನ್, ಶಾಂತೆಯಂಡ ನಮಿತಾ ವಿಕಾಸ್, ಮಣಾಲಿನಿ ಚಿಣ್ಣಪ್ಪ ಅವರನ್ನು ನೂತನ ಸದಸ್ಯರನ್ನಾಗಿ ಸೇರ್ಪಡೆಗೊಳಿಸಲಾಯಿತು.

ಇನ್ನರ್ ವೀಲ್ ಸಂಸ್ಥೆ ನಿಯೋಜಿತ ಜಿಲ್ಲಾ ಅಧ್ಯಕ್ಷೆ ಪೂರ್ಣಿಮಾ ರವಿ ಇದ್ದರು. ಮಡಿಕೇರಿ ಇನ್ನರ್ ವೀಲ್ ಕಾರ್ಯದರ್ಶಿ ಲಲಿತಾ ರಾಘವನ್ ವಾರ್ಷಿಕ ವರದಿ ಮಂಡಿಸಿದರು. ಸದಸ್ಯೆ ಸಷ್ಮಾ ಮಂದಣ್ಣ ಪ್ರಾರ್ಥಿಸಿದರು. ನಮಿತಾ ರೈ ವಂದಿಸಿದರು.

ರೋಟರಿ ಜಿಲ್ಲೆ ೩೧೮೧ ರ ಮಾಜಿ ಗವರ್ನರ್ ಡಾ.ರವಿ ಅಪ್ಪಾಜಿ, ವಲಯ ೬ ರ ಸಹಾಯಕ ಗವರ್ನರ್ ರತನ್ ತಮ್ಮಯ್ಯ, ರೋಟರಿ ಜಿಲ್ಲಾ ಪಬ್ಲಿಕ್ ಇಮೇಜ್ ಸಮಿತಿ ಅಧ್ಯಕ್ಷ ಎಚ್.ಟಿ. ಅನಿಲ್, ರೋಟರಿ ಮಿಸ್ಟಿಹಿಲ್ಸ್ ಅಧ್ಯಕ್ಷ ಪ್ರಸಾದ್ ಗೌಡ, ಕಾರ್ಯದರ್ಶಿ ಪ್ರಮೋದ್ ಕುಮಾರ್ ರೈ, ರೋಟರಿ ವುಡ್ಸ್ ಅಧ್ಯಕ್ಷ ಎಸ್.ಎಸ್. ಸಂಪತ್‌ಕುಮಾರ್, ರೋಟರಿ ಪ್ರಮುಖರಾದ ಡಾ.ಎಂ.ಜಿ. ಪಾಟ್ಕರ್, ಅನಂತಸುಬ್ಬರಾವ್, ಗೀತಾ ಗಿರೀಶ್ ಮತ್ತಿತರರು ಇದ್ದರು.

ಪದ್ಮಶ್ರೀ ರಾಣಿ ಮಾಚಯ್ಯ ಅವರಿಗೆ ಸನ್ಮಾನ
ಕೇಂದ್ರ ಸರ್ಕಾರದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಐಮುಡಿಯಂಡ ರಾಣಿ ಮಾಚಯ್ಯ ಅವರನ್ನು ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಣಿ ಮಾಚಯ್ಯ, ಉಮ್ಮತ್ತಾಟ್ ಕಲೆಯ ಸಂರಕ್ಷಣೆಗಾಗಿ ಯುವ ಪೀಳಿಗೆಗೆ ಈ ಶ್ರೀಮಂತ ಕಲೆಯನ್ನು ಪರಿಚಯಿಸಲು ೧೯೮೧ ರಿಂದ ಮುಂದಾದೆ. ಉಮ್ಮತ್ತಾಟ್ ಕಲಿಯಲು ಆಸಕ್ತಿ ತೋರಿದ ವಿದ್ಯಾರ್ಥಿನಿಯರು ಮತ್ತು ಅವರ ಪಾಲಕರ ಪ್ರೋತ್ಸಾಹದಿಂದ ಉಮ್ಮತ್ತಾಟ್ ದೇಶವ್ಯಾಪಿ ಪರಿಚಿತವಾಗಲು ಸಾಧ್ಯವಾಯಿತು ಎಂದು ಹೇಳಿದರು.
ಇದೇ ಸಂದರ್ಭ ಮರಗೋಡಿನ ಪ್ರಗತಿಪರ ಕೃಷಿಕ ಮಹಿಳೆ ಕಟ್ಟೆಮನೆ ಪ್ರೇಮಾ ಗಣೇಶ್, ನಾಪೋಕ್ಲುವಿನಲ್ಲಿ ಸಾಮಾಜಿಕ ಸೇವಾ ಯೋಜನೆ ಕೈಗೊಂಡಿರುವ ಬಾಳೆಯಡ ದಿವ್ಯ ಮಂದಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net