

ಮಡಿಕೇರಿ:
ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಎಲ್ಲಾ ಮಹನೀಯರು ಹಾಕಿಕೊಟ್ಟ ಮೇಲ್ಪಂಕ್ತಿಯಲ್ಲಿ ನಾವೆಲ್ಲ ಒಂದಾಗಿ ನಡೆಯಬೇಕಿದ್ದು, ಸ್ವಾತಂತ್ರ್ಯದ ಪರಿಕಲ್ಪನೆಯ ಸಮಗ್ರತೆಯನ್ನು ಅರ್ಥೈಸಿಕೊಂಡು ಭೇದ-ಭಾವವಿಲ್ಲದೆ ಹಾಗೂ ಸಮಾನತೆಯ ಬದ್ಧತೆಯೊಂದಿಗೆ ಒಟ್ಟಾಗಿ ಕೆಲಸ ಮಾಡೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು ಹೇಳಿದರು. ಇಲ್ಲಿನ ಕೋಟೆ ಆವರಣದಲ್ಲಿನ ಮಂಗಳವಾರ ನಡೆದ ೭೭ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಸ್ವಾತಂತ್ರ್ಯಕ್ಕಾಗಿ ಪ್ರಾಣ ಬಲಿದಾನಗೈದ ಮಹನೀಯರ ಆದರ್ಶವನ್ನು ಗೌರವಿಸಿ ಸಾಮರಸ್ಯದಿಂದ ಬಾಳ್ವೆ ನಡೆಸುವ ಜವಾಬ್ದಾರಿ ನಮ್ಮದಾಗಿದೆ. ಇದೇ ಸಂದರ್ಭದಲ್ಲಿ ನಮ್ಮ ದೇಶದ ಐಕ್ಯತೆ, ಸಮಗ್ರತೆ, ಶಾಂತಿ ಸಂಸ್ಕೃತಿಗಳ ರಕ್ಷಣೆಗೆ ಕೈಜೋಡಿಸುವುದಾಗಿ ಪಣತೊಡುತ್ತಾ, ಸ್ವಾತಂತ್ರ್ಯ ಹೋರಾಟದ ಶತಮಾನದ ಇತಿಹಾಸ ಇಂದಿನ ಅಭಿವೃದ್ಧಿಗೆ ಮುನ್ನೋಟವಾಗಲಿ ಎಂದು ಆಶಿಸಿದರು.
ಭಾರತ ನಿಜವಾದ ಅರ್ಥದಲ್ಲಿ ಸ್ವಾತಂತ್ರ್ಯ, ಸೌಹಾರ್ದತೆ, ಭ್ರಾತೃತ್ವದ ಅಡಿಗಲ್ಲಿನ ಮೇಲೆ ಸಮಾಜ ನಿರ್ಮಾಣವಾಯಿತು. ಈ ಮೂಲಕ ಸ್ವಾತಂತ್ರ್ಯ ಪಡೆಯುವಂತಾಯಿತು. ಸ್ವಾತಂತ್ರ್ಯ ಚಳವಳಿಯಲ್ಲಿ ಶ್ರಮಿಸಿದ ಕೊಡಗಿನ ಗುಡ್ಡೆಮನೆ ಅಪ್ಪಯ್ಯಗೌಡ, ಪಂದ್ಯಂಡ ಬೆಳ್ಯಪ್ಪ, ಸಿ.ಎಂ.ಪೂಣಚ್ಚ, ಕೊಡಂದೇರ ಪೂವಯ್ಯ, ಕೋದಂಡ ಅಪ್ಪಯ್ಯ, ಸಿ.ಎಂ.ವೆಂಕಪ್ಪಯ್ಯ, ಗುಂಡುಗುಟ್ಟಿ ಮಂಜುನಾಥಯ್ಯ, ಎಂ.ಎಂ.ಸಿದ್ದಿಕ್, ಎಚ್.ಆರ್.ಕೃಷ್ಣಯ್ಯ, ಕೊಳ್ಳಿಮಾಡ ಕರುಂಬಯ್ಯ, ಮಂಡೇಪಂಡ ಕಾರ್ಯಪ್ಪ, ಮುಕ್ಕಾಟಿರ ಭೋಜಪ್ಪ, ಮಲ್ಲಂಗಡ ಚಂಗಪ್ಪ, ಮಾರಯ್ಯ ಮೊದಲಾದ ಮಹಾ ನಾಯಕರುಗಳಿಗೆ ಇದೇ ಸಂದರ್ಭ ಭಕ್ತಿ ಪೂರ್ವಕ ನಮನಗಳನ್ನು ಸಲ್ಲಿಸಿದರು.
ಭಾರತ ಸ್ವಾತಂತ್ರ ಚಳವಳಿ ಸಂದರ್ಭದಲ್ಲಿ ಮಹಾತ್ಮಾ ಗಾಂಧೀಜಿ ಕೊಡಗಿಗೆ ಭೇಟಿ ನೀಡಿದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರು. ಇವರ ವಿಚಾರಗಳು ಹಾಗೂ ಚಿಂತನೆಗಳು ಕೊಡಗಿನ ಹಲವು ನಾಯಕರಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟದ ಕಿಡಿಯನ್ನು ಹಚ್ಚಲು ಪ್ರೇರೇಪಿಸಿತ್ತು. ಬಹು ಹಿಂದಿನಿಂದಲೂ ಕೊಡಗು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುವ ನಾಯಕರನ್ನು ಕೊಟ್ಟಿದೆ. ಅದೇ ಸಂದರ್ಭದಲ್ಲಿ ಹಲವರು ಭಾರತೀಯ ಸೈನ್ಯದಲ್ಲಿ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿ ದೇಶಕ್ಕಾಗಿ ಸೇವೆ ಸಲ್ಲಿಸಿದ ಸ್ಮರಣೀಯರನ್ನು ಸಹ ನೀಡಿದೆ. ಈ ಪೈಕಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ, ಜ. ಕೆ.ಎಸ್. ತಿಮ್ಮಯ್ಯ ಭಾರತೀಯ ಸೇನಾ ಇತಿಹಾಸದಲ್ಲಿ ಎಂದಿಗೂ ಮರೆಯಲಾಗದ ರತ್ನಗಳು. ಹೀಗೆ ಕೊಡಗು ಸಹ ಭಾರತದ ಸ್ವಾತಂತ್ರ್ಯ ಚಳವಳಿಯ ಒಂದು ಭಾಗವಾಗಿ ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿದೆ ಎಂದು ಅಭಿಪ್ರಾಯಪಟ್ಟರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವ ಸರ್ಕಾರ ಸಾರ್ವಜನಿಕರಿಗೆ ಹಲವು ಉಪಯುಕ್ತ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ಬಹುಜನರ ಹಿತ ಕಾಪಾಡುವಲ್ಲಿ ಮುಂದಾಗಿದೆ. ಶಕ್ತಿ ಯೋಜನೆ ಮುಖಾಂತರ ಜಿಲ್ಲೆಯಲ್ಲಿ ಆ. ೧೩ರವರೆಗೆ ೯,೦೮,೨೨೩ ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣ ಮಾಡಿದ್ದು, ಸುಮಾರು ೩.೩೪ ಕೋಟಿ ರೂ. ಭರಿಸಲಾಗಿದೆ. ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ ೫ ಕೆ.ಜಿ ಅಕ್ಕಿಯ ಬದಲಾಗಿ ಪ್ರತಿ ಕೆ.ಜಿಗೆ ೩೪ ರೂ. ನಂತೆ ಪ್ರತೀ ಫಲಾನುಭವಿಗೆ ತಿಂಗಳಿಗೆ ೧೭೦ ರೂ. ನಂತೆ ಡಿ.ಬಿ.ಟಿ ಮೂಲಕ ಜುಲೈ ತಿಂಗಳಲ್ಲಿ ೪.೨೪ ಕೋಟಿ ರೂ. ನಗದು ವರ್ಗಾವಣೆ ಮಾಡಲಾಗಿದೆ. ಗೃಹ ಲಕ್ಷ್ಮಿ ಯೋಜನೆ ಕೊಡಗು ಜಿಲ್ಲೆಯಲ್ಲಿ ೧,೩೧,೩೨೧ ಗುರಿ ನಿಗದಿ ಮಾಡಲಾಗಿದ್ದು ಆ. ೧೨ ರವರೆಗೆ ೧,೦೧,೬೬೭ ಮಂದಿ ಹೆಸರು ನೋಂದಾಯಿಸಿ, ಶೇ.೭೭.೧೦ ರಷ್ಟು ಪ್ರಗತಿ ಸಾಧಿಸಲಾಗಿದೆ. ಗೃಹಜ್ಯೋತಿ ಯೋಜನೆ ಅಡಿಯಲ್ಲಿ ಜಿಲ್ಲೆಯಲ್ಲಿ ಆ. ೧೩ ರವರೆಗೆ ೧,೨೯,೫೩೭ ಮಂದಿ ಹೆಸರು ನೋಂದಾಯಿಸಿದ್ದು, ಗೃಹಜ್ಯೋತಿಯ ಗ್ಯಾರಂಟಿಯ ವೆಚ್ಚ ರೂ ೨,೯೦,೪೫,೦೯೯ ರೂ. ಸರ್ಕಾರ ಭರಿಸಿದೆ ಎಂದು ಮಾಹಿತಿ ನೀಡಿದರು.
ಕೊಡಗು ಪ್ರವಾಸೋದ್ಯಮ ಅಭಿವೃದ್ಧಿಗೆ ಇಕೋ ಟೂರಿಸಂ ಯೋಜನೆಯನ್ನು ಜಾರಿಗೊಳಿಸಲು ಮತ್ತು ಕಾಫಿ ಬ್ರಾಂಡಿಂಗ್ ಮಾಡಲು ಸರ್ಕಾರ ಬಜೆಟ್‌ನಲ್ಲಿ ಘೋಷಣೆ ಮಾಡಿದೆ. ಗುಡ್ಡಗಾಡು ಪ್ರದೇಶದ ರೈತರ ಕೃಷಿ ಉತ್ಪನ್ನ ಮತ್ತು ಪರಿಕರಗಳ ಸಾಗಾಣಿಕೆಗೆ ನಾಲ್ಕು ಚಕ್ರದ ಪಿಕ್ ಆಫ್ ವ್ಯಾನ್ ಖರೀದಿಸಲು ೭ ಲಕ್ಷ ರೂ.ವರೆಗೆ ಸಾಲವನ್ನು ಶೇ.೪ ರಷ್ಟು ಬಡ್ಡಿ ದರದಲ್ಲಿ ವಿತರಿಸಲಾಗುತ್ತದೆ. ಪ್ರವಾಸೋದ್ಯಮ ಮತ್ತು ಉದ್ಯಮ ವಲಯಗಳನ್ನು ಉತ್ತೇಜಿಸಲು ಮತ್ತು ವಿಪತ್ತು ನಿರ್ವಹಣಾ ಸಮಯದಲ್ಲಿ ರಕ್ಷಣಾ ಕಾರ್ಯಗಳಿಗೆ ನೆರವಾಗುವ ಉದ್ದೇಶದಿಂದ ಕೊಡಗು ಜಿಲ್ಲೆಗೆ ಹೊಸ ಏರ್‌ಸ್ಟ್ರಿಪ್ ಅಳವಡಿಸುವ ಸಂಬಂಧ ಆಯವ್ಯಯದಲ್ಲಿ ಘೋಷಿಸಲಾಗಿದೆ. ಕಾಡಾನೆ ಹಾವಳಿ ತಡೆಗಟ್ಟಲು ಅರಣ್ಯದಂಚಿನಲ್ಲಿ ೮.೩೩ ಕಿ.ಮೀ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ೧೨.೫ ಕೋಟಿ ಹಣ ಕಾಯ್ದಿರಿಸಲಾಗಿರುತ್ತದೆ. ಸಚಿವ ಸಂಪುಟದಲ್ಲಿ ಕೊಡಗರು ಎಂಬ ಪದದ ಬದಲಾಗಿ ಕೊಡವರು ಎಂದು ಬದಲಿಸುವ ಮೂಲಕ ಕೊಡಗು ಜಿಲ್ಲೆಯ ಜನರ ಬಹು ವರ್ಷಗಳ ಬೇಡಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ನೂತನ ಸರ್ಕಾರ ಪರಿಹರಿಸಿದೆ ಎಂದರು.
ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ಎನ್.ಪಿ. ಅನಿತಾ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಜಿ.ಪಂ. ಸಿಇಒ ವರ್ಣಿತ್ ನೇಗಿ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಕೇಶವ ಕಾಮತ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಪೊನ್ನಚ್ಚನ ಶ್ರೀನಿವಾಸ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ನಂಜುಂಡೇಗೌಡ, ಉಪ ವಿಭಾಗಾಧಿಕಾರಿ ಡಾ.ಯತೀಶ್ ಉಲ್ಲಾಳ್, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ಪ್ರಸ್ತುತ ಸರ್ಕಾರದ ಸಾಧನೆ ಸಂಬಂಧ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಹೊರತಂದಿರುವ ಪ್ರಗತಿಪರ ಅಭಿವೃದ್ಧಿಗಾಗಿ ನುಡಿದಂತೆ ನಡೆದಿದ್ದೇವೆ ಕಿರುಹೊತ್ತಿಗೆಯನ್ನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.
ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿರುವ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಭೋದಕ ಆಸ್ಪತ್ರೆ, ಶ್ರೀಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರ, ಕುಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕಿ ಆಲಿಮ ಪಿ.ಹೆಚ್., ಕೃಷಿ ಕ್ಷೇತ್ರದ ಸಾಧಕ ಹೊದ್ದೂರು ಗ್ರಾಮದ ರವಿಶಂಕರ್ ಬಿ.ಪಿ. ಅವರುಗಳಿಗೆ ಈ ಸಂದರ್ಭದಲ್ಲಿ ಪ್ರಮಾಣ ಪತ್ರ ವಿತರಿಸಲಾಯಿತು.
ಸಭಾ ಕಾರ್ಯಕ್ರಮಕ್ಕೂ ಮೊದಲು ಆಕರ್ಷಕ ಪೆರೇಡ್ ನಡೆಸಲಾಯಿತು. ಡಿಎಆರ್ ಪೊಲೀಸ್ ಅಧಿಕಾರಿ ಚೆನ್ನನಾಯಕ ನೇತೃತ್ವದಲ್ಲಿ ನಡೆದ ಪೆರೇಡ್‌ನಲ್ಲಿ ಡಿಎಆರ್ ಪೊಲೀಸ್, ಸಿವಿಲ್ ಪೊಲೀಸ್, ಗೃಹರಕ್ಷಕ ದಳ, ಅರಣ್ಯ ಇಲಾಖೆ ಹಾಗೂ ನಗರದ ವಿವಿಧ ಶಾಲಾ ಕಾಲೇಜು ಸೇರಿದಂತೆ ೧೬ ತಂಡಗಳು ಪಾಲ್ಗೊಂಡಿದ್ದವು.