

ಮಡಿಕೇರಿ: ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆ.೧೮ ರಂದು ಕೊಡಗು ಭೇಟಿ ನೀಡಿದ್ದ ವೇಳೆ ನಡೆದ ಅಹಿತಕರ ಘಟನೆಗೆ ಸಂಬಂಧಿಸಿದ್ದಂತ ತನಿಖಾಧಿಕಾರಿಯನ್ನಾಗಿ ಚಾಮರಾಜನಗರ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್‌ರಾಜ್ ಅವರನ್ನು ನೇಮಿಸಲಾಗಿದೆ.
ಎಎಸ್ಪಿ ಮೂಲಕ ತನಿಖೆ ಮಾಡಲು ಆದೇಶಿಸಲಾಗಿದೆ. ತನಿಖಾ ವರದಿ ಬಂದ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದೆಂದು ದಕ್ಷಿಣ ವಲಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಮಧುಕರ್ ಪವಾರ್ ಹೇಳಿದ್ದಾರೆ. ನಿಷೇಧಾಜ್ಞೆ ಜಾರಿ ಹಿನ್ನೆಲೆಯಲ್ಲಿ ಕೊಡಗಿನಲ್ಲಿ ಕೈಗೆತ್ತಿಕೊಳ್ಳಬೇಕಾದ ಬಂದೋಬಸ್ತ್ ಕ್ರಮದ ಕುರಿತು ಮಂಗಳವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಆ.೧೮ ರಂದು ಪ್ರತಿಪಕ್ಷ ನಾಯಕರ ಭೇಟಿ ವೇಳೆ ಯಾರಿಂದ ತಪ್ಪಾಗಿದೆ, ಯಾರಿಂದ ಕರ್ತವ್ಯ ಲೋಪವಾಗಿದೆ ಎಂದು ಪರಿಶೀಲಿಸಲಾಗುವು
ದೆಂದು ಸ್ಪಷ್ಟ ಪಡಿಸಿದರು. ಆ.೨೪ ರಿಂದ ೨೭ ರವರೆಗೆ ಕೊಡಗು ಜಿಲ್ಲೆಯಾದ್ಯಂತ ಜಿಲ್ಲಾಧಿಕಾರಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಈ ವೇಳೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗುವುದೆಂದರು.
ಎಸ್ಪಿ ಕಚೇರಿಯಲ್ಲಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳೊಂದಿಗೆ ಬಂದೋಬಸ್ತ್ ಕುರಿತು ಚರ್ಚಿಸಲಾಗಿದೆ. ದಕ್ಷಿಣ ಕನ್ನಡ, ಮೈಸೂರು, ಹಾಸನ ಜಿಲ್ಲೆಯ ಗಡಿಭಾಗದಲ್ಲಿ ಚೆಕ್ ಪೋಸ್ಟ್‌ನಲ್ಲಿ ಬಂದೋಬಸ್ತ್ ಹೆಚ್ಚು ಮಾಡಲಾಗಿದೆ. ಅಹಿತಕರ ಘಟನೆ ನಡೆಯದ್ದಂತೆ ಅಗತ್ಯ ಬಂದೋಬಸ್ತ್ ಮಾಡಲಾಗುವುದೆಂದು ಐಜಿಪಿ ಹೇಳಿದರು.