

ಮಡಿಕೇರಿ: ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ವರ್ಷ ೫೦ ಸಾವಿರ ನೋಟ್ ಪುಸ್ತಕ ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ಕರ್ನಾಟಕ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ ಹೇಳಿದರು.
ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಿಸಿ ಮಾತನಾಡಿದರು.
ಕಳೆದ ೨೨ ವರ್ಷದಿಂದ ಸೋಮವಾರಪೇಟೆ ಭಾಗದಲ್ಲಿರುವ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕ ನೀಡುತ್ತಾ ಬಂದಿದ್ದೇನೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬದ ಮಕ್ಕಳಿಗೆ ಸಮವಸ್ತ್ರ, ಲ್ಯಾಪ್‌ಟ್ಯಾಪ್ ಕೂಡ ನೀಡಿದ್ದೇನೆ. ಮೊದಲ ಬಾರಿಗೆ ಮಡಿಕೇರಿ ಭಾಗದ ವಿದ್ಯಾರ್ಥಿಗಳಿಗೂ ನೋಟ್ ಪುಸ್ತಕ ವಿತರಿಸುತ್ತಿರುವುದಾಗಿ ಹೇಳಿದರು.
ಕಡುಬಡನತದಲ್ಲಿ ಬೆಳೆದ ನನಗೆ ನೋಟ್ ಪುಸ್ತಕ ಖರೀದಿಸಲು ಕಷ್ಟವಿತ್ತು. ಕುಗ್ರಾಮದಲ್ಲಿ ಬಡನತದಲ್ಲಿ ಹುಟ್ಟಿ ಬೆಳೆದ ನಾನು ಪ್ರಸ್ತುತ ಆರ್ಥಿಕವಾಗಿ ಸಬಲನಾಗಿದ್ದೇನೆ. ಬೆಂಗಳೂರಿನಲ್ಲಿರುವ ಖಾಸಗಿ ಸಂಸ್ಥೆಯಲ್ಲಿ ೨೫ ವರ್ಷದಿಂದ ಕೆಲಸ ಮಾಡುತ್ತಿದ್ದು, ನನ್ನ ದುಡಿಮೆಯ ಶೇ.೨೫ ರಷ್ಟು ಹಣವನ್ನು ಅಗತ್ಯ ಇರುವವರಿಗೆ ಉದಾರವಾಗಿ ನೀಡುತ್ತಿದ್ದೇನೆ ಎಂದರು.
ಈಗಾಗಲೇ ೨೫ ಶಾಲೆಯ ವಿದ್ಯಾರ್ಥಿಗಳಿಗೆ ೩೫ ಸಾವಿರ ನೋಟ್ ಪುಸ್ತಕ ವಿತರಿಸಲಾಗಿದೆ. ಶನಿವಾರ ಮತ್ತು ಸೋಮವಾರ ಮಡಿಕೇರಿ ಹಾಗೂ ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿರುವ ಸರ್ಕಾರಿ ಶಾಲೆಗಳಿಗೆ ೧೮ ಸಾವಿರ ನೋಟ್ ಪುಸ್ತಕ ವಿತರಿಸುತ್ತಿದ್ದೇನೆಂದು ಹರಪಳ್ಳಿ ರವೀಂದ್ರ ಹೇಳಿದರು.
ಸರ್ಕಾರಿ ಶಾಲೆಯ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಮುತುವರ್ಜಿ ವಹಿಸಿ ಉಚಿತವಾಗಿ ನೋಟ್ ಪುಸ್ತಕ ನೀಡುತ್ತಿರುವ ಕೊಡುಗೈ ದಾನಿ ಹರಪಳ್ಳಿ ರವೀಂದ್ರ ಅವರ ಕಾರ್ಯ ಶ್ಲಾಘನೀಯ. ಸರ್ಕಾರಿ ವಿದ್ಯಾಸಂಸ್ಥೆ ಹಾಗೂ ಶಿಕ್ಷಕರ ಬಗ್ಗೆ ಸದಾಭಿಪ್ರಾಯ ಹೊಂದಿದ್ದಾರೆಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲರಾದ ನಳಿನಿ ಹೇಳಿದರು.
ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಸದಸ್ಯೆ ರಶೀದಾ ಬಾನು, ಮಡಿಕೇರಿ ತಾಲೂಕು ಬಿಆರ್‌ಸಿ ಮಂಜುಳಾ, ಹಿರಿಯ ಶಿಕ್ಷಕಿ ಸುಮಲತಾ ಮತ್ತಿತರರು ಇದ್ದರು.