ಗೌಳಿಬೀದಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಸಂಭ್ರಮ

25mdka4 - Copy
Published on

ಮಡಿಕೇರಿ: ಒಂದೆಡೆ ಯುವಕರಿಂದ ನೀರಿನ ಹೊಡೆತ… ಮತ್ತೊಂದೆಡೆ ನೀರಿನೇಟನ್ನು ಬೇಧಿಸಿ ಮೊಸರು ಕುಡಿಕೆ ಒಡೆಯುವ ಯುವಕರು.. ನೀರಿನ ಹೊಡೆತಗಳ ನಡುವೆಯೂ ಕೊನೆಗೆ ಸ್ಪರ್ಧಿಗಳು ಮೊಸರು ಕುಡಿಕೆ ಓಡೆಯುವಲ್ಲಿ ಯಶಸ್ವಿಯಾಗುತ್ತಾರೆ. ಹೀಗೆ ಶ್ರೀ ಕೃಷ್ಣನ ಬಾಲ್ಯದ ಲೀಲೆ ನೆನಪಿಸಿಕೊಳ್ಳುವ ಓಕುಳಿಯಾಟ ನಡೆದದ್ದು ಮಡಿಕೇರಿಯ ಗೌಳಿಬೀದಿಯ ಶ್ರೀಕಂಚಿ ಕಾಮಾಕ್ಷಿ ದೇವಾಲಯ ಆವರಣದಲ್ಲಿ.

ಗೌಳಿ ಸಮುದಾಯದವರು ಹೆಚ್ಚಾಗಿ ವಾಸವಿರುವ ಗೌಳಿಬೀದಿಯ ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಒಡೆಯುವ ಸ್ಪರ್ಧೆ ನಡೆಯಿತು. ಗೌಳಿ ಸಮುದಾಯದವರು ಅನಾದಿ ಕಾಲದಿಂದಲೂ ವಿಶೇಷವಾಗಿ ಆಚರಿಸಿ ಕೊಂಡು ಬರುತ್ತಿರುವಂತೆ ಶ್ರೀ ಕೃಷ್ಣ ಜಯಂತಿಯನ್ನು ದೇವಾಲಯ ಸಮಿತಿಯಿಂದ ವಿಶಿಷ್ಟವಾಗಿ ಆಚರಿಸಲಾಯಿತು.

ಈ ವರ್ಷ ಮೊಸರು ಕುಡಿಕೆ ಒಡೆಯುವ ಸ್ಪರ್ಧಿಗಳಾಗಿ ಶ್ರೀಜೇಶ್ ಮತ್ತು ಮಹೇಶ್ ಭಾಗವಹಿಸಿದರು. ಮೊದಲು ದೇವಾಲಯದಲ್ಲಿ ಶ್ರೀ ಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಇಬ್ಬರು ಯುವಕರು ಮೊಸರು ಕುಡಿಕೆ ಒಡೆಯಲು ಮುಂದಾಗುತ್ತಾರೆ. ಸುತ್ತಲೂ ಇರುವ ಯುವಕರು ಸ್ಪರ್ಧಿಗಳಿಗೆ ಮೊಸರು ಕುಡಿಕೆ ಒಡೆಯುವುದನ್ನು ತಡೆಯಲು ರಭಸವಾಗಿ ನೀರೆರಚುತ್ತಾರೆ. ಆದರೆ, ಯುವಕರು ನೀರಿನೇಟನ್ನು ಲೆಕ್ಕಿಸದೆ ವಾದ್ಯಕ್ಕೆ ಸರಿಯಾಗಿ ಹೆಜ್ಜೆ ಹಾಕುತ್ತಾ ಮೊಸರು ಕುಡಿಕೆ ಓಡೆಯುವಲ್ಲಿ ಯಶಸ್ವಿಯಾಗುತ್ತಾರೆ. ಕೊನೆಗೆ ವಿಜೇತರಾದ ಯುವಕರಿಬ್ಬರಿಗೂ ದೇವಾಲಯದಲ್ಲಿ ಸಾಂಪ್ರದಾಯಕ ಬಹುಮಾನ ನೀಡಿ ಗೌರವಿಸಲಾಯಿತು.

ದೇವಾಲಯದಲ್ಲಿ ಆಯೋಜಿಸಿದ್ದ ಪುಟಾಣಿ ಮಕ್ಕಳ ಶ್ರೀ ಕೃಷ್ಣ ಛದ್ಮವೇಷ ಹಾಗೂ ನೃತ್ಯ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net