

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಪ್ರಕೃತಿ ವಿಕೋಪ ಹಾಗೂ ಕೋವಿಡ್‌ನಿಂದ ಕಳೆಗುಂದಿದ್ದ ಜನೋತ್ಸವ ಮಡಿಕೇರಿ- ಗೋಣಿಕೊಪ್ಪ ದಸರಾ ಉತ್ಸವ ಈ ಬಾರಿ ಅದ್ದೂರಿ ಆಚರಣೆಗೆ ಸಿದ್ಧತೆ ಪ್ರಾರಂಭವಾಗಿದೆ. ನವರಾತ್ರಿ ಉತ್ಸವ ಕೊಡಗಿನಲ್ಲಿ ಈ ಹಿಂದಿನಂತೆ ನಡೆಯಲಿದೆ ಎಂಬ ಸಂಭ್ರಮ ಎಲ್ಲೆಡೆ ಕಂಡು ಬರುತ್ತಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಡಿಕೇರಿ ದಸರಕ್ಕೆ ೧ ಕೋಟಿ ಹಾಗೂ ಗೋಣಿಕೊಪ್ಪ ದಸರಕ್ಕೆ ೫೦ ಲಕ್ಷ ರೂಪಾಯಿ ಅನುದಾನ ಮಂಜೂರು ಮಾಡಿದ್ದಾರೆ. ಗೋಣಿಕೊಪ್ಪ ದಸರಕ್ಕೆ ಈ ಬಾರಿ ಗರಿಷ್ಠ ಅನುದಾನ ಮಂಜೂರಾಗಿರುವುದು ದಕ್ಷಿಣ ಕೊಡಗಿನ ದಸರಾ ಸಂಭ್ರಮ ಹೆಚ್ಚಿಸುವಂತೆ ಮಾಡಿದೆ.
ಮಡಿಕೇರಿ ದಸರಾ ಪ್ರಯುಕ್ತ ಗಾಂಧಿ ಮೈದಾನದ ಬಯಲು ರಂಗಮಂದಿರದಲ್ಲಿ ಹಾಗೂ ಗೋಣಿಕೊಪ್ಪ ಪ್ರಾಥಮಿಕ ಶಾಲಾ ಮೈದಾನದ ಬಯಲು ರಂಗ ಮಂದಿರದಲ್ಲಿ ಪ್ರತಿನಿತ್ಯ ವೈವಿಧ್ಯಮ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಹಲವು ವರ್ಷದಿಂದ ಕಲಾ ಪ್ರದರ್ಶನಕ್ಕೆ ಅವಕಾಶವಿಲ್ಲದರಿಂದ ಕಲಾವಿದರು ನಿರಾಸೆಗೊಂಡಿದ್ದರು. ಸಾಂಸ್ಕೃತಿಕ ವೈಭವ ಸವಿಯಲು ಕಲಾಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.
ಜನೋತ್ಸವಕ್ಕೆ ಕ್ರೀಡೆ, ಕವಿಗೋಷ್ಠಿ, ಮಹಿಳಾ ದಸರಾ, ಮಕ್ಕಳ ದಸರಾ, ಜನಪದ ದಸರಾ ವಿಶೇಷ ಮೆರಗು ನೀಡಲಿದೆ. ಯುವಜನರನ್ನು ಆಕರ್ಷಿಸುವ ಯುವ ದಸರಾ ಈ ವರ್ಷ ಆಯೋಜಿಸಲಾಗುತ್ತಿದೆ. ವಿಜಯದಶಮಿಯಂದು ರಾತ್ರಿ ಮಡಿಕೇರಿ ಹಾಗೂ ಗೋಣಿಕೊಪ್ಪ ಮುಖ್ಯಬೀದಿಯಲ್ಲಿ ಮಂಟಪಗಳ ಭವ್ಯ ಶೋಭಾಯಾತ್ರೆ ನಡೆಯಲಿದೆ.
**
ಈ ಬಾರಿ ಮಡಿಕೇರಿ ದಸರಾ ಅದ್ದೂರಿಯಾಗಿ ಆಯೋಜಿಸಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಕಲಾವಿದರು ಹಾಗೂ ಕಲಾತಂಡದಿಂದ ಅರ್ಜಿ ಆಹ್ವಾನಿಸಲಾಗಿದೆ. ನವರಾತ್ರಿ ದಿನ ಪ್ರತಿನಿತ್ಯ ಗಾಂಧಿ ಮೈದಾನದಲ್ಲಿ ಸಾಂಸ್ಕೃತಿಕ ಕಲಾಪ್ರದರ್ಶನ ನಡೆಯಲಿದೆ. ಕ್ರೀಡೆ, ಯುವ ದಸರಾ, ಮಹಿಳಾ ದಸರಾ, ಮಕ್ಕಳ ದಸರಾ, ಜನಪದ ದಸರಾ ಜನೋತ್ಸವಕ್ಕೆ ಮೆರಗು ನೀಡಲಿದೆ. ರಾಜೇಶ್ ಯಲ್ಲಪ್ಪ, ಪ್ರಧಾನ ಕಾರ್ಯದರ್ಶಿ, ಮಡಿಕೇರಿ ನಗರ ದಸರಾ ಸಮಿತಿ.
**
ಪ್ರಕೃತಿ ವಿಕೋಪ, ಕೋವಿಡ್ ಹಿನ್ನೆಲೆಯಲ್ಲಿ ಮಡಿಕೇರಿ ದಸರಾ ಕಳೆಗುಂದಿತ್ತು. ಈ ವರ್ಷ ಅದ್ದೂರಿ ದಸರಾ ಮೂಲಕ ಗತವೈಭವ ಮರಳು ವಂತೆ ಮಾಡಲಾಗುವುದು. ವಿಜಯದಶಮಿಯಂದು ರಾತ್ರಿ ಮಡಿಕೇರಿ ಮುಖ್ಯಬೀದಿಯಲ್ಲಿ ನಡೆಯುವ ದಶಮಂಟಪಗಳ ಶೋಭಾ ಯಾತ್ರೆಗೆ ಸಿದ್ಧತೆ ನಡೆಯುತ್ತಿದೆ. ಅದ್ದೂರಿ ಕಲಾಕೃತಿಗಳು ಸಹಸ್ರಾರಾರು ಸಂಖ್ಯೆಯಲ್ಲಿ ಸೇರುವ ಜನರನ್ನು ರಂಜಿಸಲಿದೆ. ಮನು ಮಂಜುನಾಥ್, ಅಧ್ಯಕ್ಷರು, ದಶಮಂಟಪ ಸಮಿತಿ, ಮಡಿಕೇರಿ ನಗರ ದಸರಾ ಸಮಿತಿ.
**
ಹಿರಿಯರು ರೂಪಿಸಿಕೊಟ್ಟಿರುವ ಆಚರಣೆ ಪೋಷಿಸಿಕೊಳ್ಳಬೇಕಿದೆ. ಧಾರ್ಮಿಕ ಕಾರ್ಯದೊಂದಿಗೆ ವೈವಿಧ್ಯಮಯ ಕಾರ್ಯಕ್ರಮ ಮೂಲಕ ಗೋಣಿಕೊಪ್ಪ ದಸರಾಕ್ಕೆ ಮೆರಗು ನೀಡಲಾಗುವುದು. ಕ್ರೀಡೆ, ಮಕ್ಕಳಿಗೆ ಪ್ರೋತ್ಸಾಹ, ಮಹಿಳಾ ಕಾರ್ಯಕ್ರಮ, ಸ್ತಬ್ದಚಿತ್ರ, ಮಂಟಪ ಶೋಭಾ ಯಾತ್ರೆ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗುವುದು. ಬಿ.ಎನ್. ಪ್ರಕಾಶ್, ಅಧ್ಯಕ್ಷರು, ಕಾವೇರಿ ದಸರಾ ಸಮಿತಿ, ಗೋಣಿಕೊಪ್ಪ.
**
ಗೋಣಿಕೊಪ್ಪ ದಸರಾಕ್ಕೆ ೫೦ ಲಕ್ಷ ರೂ. ಬಿಡುಗಡೆ ಮಾಡಿರುವುದರಿಂದ ಎಲ್ಲ ಉಪ ಸಮಿತಿಗಳಿಗೂ ಬಲ ಬಂದಂತಾಗಿದೆ. ದಸರಾ ಯಶಸ್ವಿ ಯ ಭಾಗವಾಗಿರುವ ಉಪ ಸಮಿತಿಗಳಿಗೆ ಹೆಚ್ಚಿನ ಅನುದಾನ ಸಿಗಲಿದೆ. ಮಹಿಳೆಯರನ್ನು ಒಟ್ಟು ಸೇರಿಸಿ, ಒಂದೇ ವೇದಿಕೆಯಲ್ಲಿ ಮಹಿಳಾ ದಸರಾ ಆಚರಿಸುತ್ತಿರುವುದು ಸ್ವಾಗತರ್ಹ. ನಾವೆಲ್ಲರೂ ದೇವಿ ಆರಾಧನೆಯೊಂದಿಗೆ ಪಾಲ್ಗೊಳ್ಳುತ್ತೇವೆ. ಎಂ. ಮಂಜುಳಾ, ಗೃಹಿಣಿ, ಗೋಣಿಕೊಪ್ಪ.
**
ನಾಲ್ಕು ವರ್ಷಗಳಿಂದ ದಸರಾ ಇಲ್ಲದೆ ಕಲಾಭಿಮಾನಿಗಳಿಗೂ ನಿರಾಶೆಯಾಗಿತ್ತು. ಮಳೆ ವಿರಾಮ ನೀಡಲಿ. ಮಹಿಳಾ ದಸರಾ ಸೇರಿದ್ದಂತೆ ವೈವಿಧ್ಯಮಯ ಕಾರ್ಯಕ್ರಮ ಆಯೋಜಿಸಲು ದಸರಾ ಸಮಿತಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಜನೋತ್ಸವದಲ್ಲಿ ಒಂದೆಡೆ ಸೇರಿ ಸಂಭ್ರಮಿಸಲು ನಾಡಿನ ಜನತೆಗೆ ಅವಕಾಶ ಸಿಗಲಿದೆ. ವರಲಕ್ಷ್ಮಿ, ಗೃಹಿಣಿ, ಗೋಣಿಕೊಪ್ಪ.
**
ಹಲವು ವರ್ಷಗಳಿಂದ ದಸರಾ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿಲ್ಲ. ಕೋವಿಡ್ ಭಯ ಇಲ್ಲದರಿಂದ ಈ ವರ್ಷ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಅವಕಾಶ ಸಿಗುತ್ತಿರುವುದು ಸಂತೋಷದ ವಿಚಾರ. ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ ಕಲ್ಪಿಸಬೇಕು. ದಸರಾ ನಡೆಯುತ್ತಿರುವುದರಿಂದ ವ್ಯಾಪಾರಿಗಳಿಗೂ ಲಾಭವಾಗಲಿದೆ. ಸುನಿಲ್, ವರ್ತಕರು, ಗೋಣಿಕೊಪ್ಪ .
**
ಮಡಿಕೇರಿ ದಸರಾ ವಿಭಿನ್ನವಾಗಿ, ವಿಶಿಷ್ಟವಾಗಿ ನಡೆಯುತ್ತೆ. ರಾತ್ರಿ ಹೊತ್ತಿನಲ್ಲಿ ದಶಮಂಟಪಗಳ ಶೋಭಾಯಾತ್ರೆ ಅದ್ದೂರಿಯಾಗಿ ನಡೆಯುವ ಆ ವೈಭವ ಸವಿಯುವ ಕಾತುರ ನಮ್ಮಲಿದೆ. ೪ ವರ್ಷಗಳಿಂದ ಕಳೆದುಕೊಂಡಿರುವುದನ್ನು ಮತ್ತೆ ಪಡೆಯಲು ಮತ್ತಷ್ಟು ಅದ್ದೂರಿ ಆಚರಣೆ ನಡೆಯಲಿ. ಅನುಷಾ ಅರ್ಜುನ್, ಗೃಹಿಣಿ, ಕುಶಾಲನಗರ.
**
ಮಡಿಕೇರಿ ಹಾಗೂ ಗೋಣಿಕೊಪ್ಪ ದಸರಾ ತನ್ನದೇ ಆದ ಧಾರ್ಮಿಕ ಆಚರಣೆಗೆ ಹೆಸರು ವಾಸಿಯಾಗಿದೆ. ಸರ್ಕಾರದ ನಿಯಮ ಪಾಲಿಸಿ, ಅದ್ದೂರಿಯಾಗಿಯೇ ದಸರಾ ನಡೆಯಲಿ. ಶಬ್ದ ಮಾಲಿನ್ಯಕ್ಕೆ ಅವಕಾಶ ಬೇಡ. ಧಾರ್ಮಿಕ ಆಚರಣೆಗೆ ಆದ್ಯತೆ ಇರಲಿ. ದಯಾನಂದ, ಕೃಷಿಕರು, ಮಸಗೋಡು.