

ಉಡುಪಿ: ಮಡಿಕೇರಿಯಿಂದ ನಾಪತ್ತೆಯಾಗಿದ್ದ ಇಬ್ಬರು ಬಾಲಕಿಯರು ಮಲ್ಪೆ ಸಮುದ್ರ ತೀರದಲ್ಲಿ ಶನಿವಾರ ತಡರಾತ್ರಿ ನೀರುಪಾಲಾಗಿದ್ದು, ಒಬ್ಬಾಕೆ ಮೃತಪಟ್ಟಿದ್ದಾಳೆ.
ಮಾನ್ಯ (16) ಮೃತ ಬಾಲಕಿ. ಇನ್ನೋರ್ವ ಬಾಲಕಿ ಯಶಸ್ವಿನಿ ಎಂಬಾಕೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಮಡಿಕೇರಿಯ ಖಾಸಗಿ ಪಿಯು ಕಾಲೇಜಿನಲ್ಲಿ ಓದುತ್ತಿದ್ದ ಮಾನ್ಯ ಮತ್ತು ಯಶಸ್ವಿನಿ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದರು. ಈ ಬಗ್ಗೆ ಸ್ಥಳಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರು ಶನಿವಾರ ಮಲ್ಪೆ ಬೀಚ್ ನೋಡಲು ಆಗಮಿಸಿದವರು ತಡರಾತ್ರಿವರೆಗೆ ಸುತ್ತಾಡುತ್ತಾ ನಂತರ ನೀರಿಗೆ ಹಾರಿದ್ದಾರೆ.
ಈ ಬಗ್ಗೆ ಮಾಹಿತಿ ತಿಳಿದ ಮುಳುಗು ತಜ್ಞ ಈಶ್ವರ್ ಮಲ್ಪೆ ಸ್ಥಳಕ್ಕೆ ಧಾವಿಸಿ ಇಬ್ಬರನ್ನು ನೀರಿನಿಂದ ಮೇಲಕ್ಕೆತ್ತಿದ್ದಾರೆ. ಇದರಲ್ಲಿ ಮಾನ್ಯ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಯಶಸ್ವಿನಿಯನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.