

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಕಾಲೇಜು ಹಾಗೂ ವಿದ್ಯಾರ್ಥಿಗಳ ನಡುವಿನ ಸಂಬಂಧ ಶಾಶ್ವತವಾಗಿರಬೇಕಾದರೆ ಹಳೆಯ ವಿದ್ಯಾರ್ಥಿಗಳು ಕಾಲೇಜಿನ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಬೇಕೆಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ಎಂ. ರವಿ ಕಾಳಪ್ಪ ಹೇಳಿದರು.
ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಸಭಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದ ವಾರ್ಷಿಕ ಮಹಾಸಭೆ ಹಾಗೂ ಸಂತೋಷ ಕೂಟ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ನಂತರ ತಾವು ಓದಿದ ಕಾಲೇಜಿನ ಅಭಿವೃದ್ಧಿಗೆ ಸಹಕರಿಸುವುದು ಜವಾಬ್ದಾರಿಯಾಗಿದೆ. ತಂಡ ರಚಿಸಿಕೊಂಡು ಹಳೆಯ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಮೂಲಕ ಸಂಘದ ಸದಸ್ಯತ್ವ ಹೆಚ್ಚಿಸಬೇಕೆಂದು ಸಲಹೆ ನೀಡಿದರು. ಕಾರ್ಯಪ್ಪ ಕಾಲೇಜು ಕೊಡಗಿನ ಅತ್ಯಂತ ಹಳೆಯ ಕಾಲೇಜು ಆಗಿದ್ದು, ಅಭಿವೃದ್ಧಿ ಕಾರ್ಯಕ್ಕೆ ಹಳೆಯ ವಿದ್ಯಾರ್ಥಿಗಳು ಕೈಜೋಡಿಸಬೇಕೆಂದು ಮನವಿ ಮಾಡಿ ದರು. ಕೊಡಗಿನ ಉತ್ತಮ ಪರಿಸರದಲ್ಲಿ ನಾವಿದ್ದು, ನಶಿಸಿ ಹೋಗುತ್ತಿರುವ ಜೀವಿಗಳು ಹಾಗೂ ಗಿಡಮೂಲಿಕೆ ಸಂರಕ್ಷಿಸಲು ಪಣತೊಡಬೇಕೆಂದರು.
ಮಂಗಳೂರು ವಿಶ್ವದ್ಯಾನಿಲಯ ಕುಲಸಚಿವ ಡಾ.ಸಿ.ಕೆ.ಕಿಶೋರ್‌ಕುಮಾರ್ ಮಾತನಾಡಿ, ದೇಶಕ್ಕೆ ಕೊಡುಗೆ ನೀಡಿದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಹೆಸರಿನಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘ ನಡೆಯುತ್ತಿರುವುದು ಪುಣ್ಯದ ಕೆಲಸ. ಮಂಗಳೂರು ವಿಶ್ವದ್ಯಾನಿಲಯದ ಹೆಮ್ಮೆಯ ಕಾಲೇಜು ಎಂದು ಹರ್ಷ ವ್ಯಕ್ತಪಡಿಸಿದರು.
ಮಡಿಕೇರಿಯ ಆರ್ಥೋಪೆಡಿಕ್ ಸರ್ಜನ್ ಡಾ.ರವಿ ಅಪ್ಪಾಜಿ ಮಾತನಾಡಿ, ವಿದ್ಯಾರ್ಥಿಗಳಿಗೆ ತಾವು ಓದಿದ ವಿದ್ಯಾಸಂಸ್ಥೆಯ ಮೇಲೆ ಅಭಿಮಾನ ಇರಬೇಕು. ಆಗ ಮಾತ್ರ ಕಾಲೇಜಿನ ಉಳಿವು ಮತ್ತು ಅಭಿವೃದ್ಧಿ ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರ್ಯಪ್ಪ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷೆ ಡಾ.ಪಾರ್ವತಿ ಅಪ್ಪಯ್ಯ, ಶಿಕ್ಷಣ ಸಂಸ್ಥೆ ಗಳಲ್ಲಿ ಹಳೆಯ ದ್ಯಾರ್ಥಿಗಳ ಪಾತ್ರ ಮಹತ್ತರವಾದದ್ದು. ಹಳೆಯ ವಿದ್ಯಾರ್ಥಿಗಳು ಒಗ್ಗೂಡಿ ವಿದ್ಯೆ ಕಲಿತ ಕಾಲೇಜಿನ ಅಭಿವೃದ್ಧಿಗೆ ಪಣ ತೊಡಬೇಕೆಂದರು.
ಸಂಘದ ಉಪಾಧ್ಯಕ್ಷ ನಾಟೋಳಂಡ ಡಿ.ಚರ್ಮಣ, ನಿರ್ದೇಶಕರಾದ ಕಾವೇರಿ ನಂಜಪ್ಪ, ರಾಣಿ ಮಾಚಯ್ಯ, ಬಿ.ಕೆ. ಪೂಣಚ್ಚ, ಬಿ.ಎನ್.ತಿಮ್ಮಯ್ಯ ಇದ್ದರು.
ಎಂಬಿಎ ಮತ್ತು ಟೂರಿಸಂನಲ್ಲಿ ಪ್ರಥಮ ರ‌್ಯಾಂಕ್ ಪಡೆದ ಲಿಪಿಶ್ರೀ, ರಾಷ್ಟ್ರೀಯ ಹಾಕಿ ಆಟಗಾರ್ತಿ ಕರವಟ್ಟಿರ ದೀಪ್ತಿ, ಅಂತಾರಾಷ್ಟ್ರೀಯ ರಸಾಯನಶಾಸ್ತ್ರ ವಿಜ್ಞಾನಿಗಳ ಪಟ್ಟಿಯಲ್ಲಿ ಹೆಸರು ಪಡೆದ ಡಾ.ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.
ಕೊಡಗಿನ ಪರಿಸರದ ಮೇಲೆ ಪ್ರವಾಸೋದ್ಯಮದ ಪರಿಣಾಮಗಳು ವಿಷಯದ ಕುರಿತು ಕನ್ನಡ, ಹಿಂದಿ, ಇಂಗ್ಲೀಷ್‌ನಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಭಾಷಣ, ಪ್ರಬಂಧ ಹಾಗೂ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಸಂಘದ ಸದಸ್ಯರಿಗೆ ನಿರ್ದೇಶಕ ಬಿ.ಕೆ. ನಂಜಪ್ಪ ರಸಪ್ರಶ್ನೆ ಸ್ಪರ್ಧೆ ನಡೆಸಿದರು. ಬೊಳ್ಳಜಿರ ಬಿ.ಅಯ್ಯಪ್ಪ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಶೋಭಾ ಸುಬ್ಬಯ್ಯ ಪ್ರಾರ್ಥಿಸಿದರು. ಸುಶ್ಮಿತಾ ಸ್ವಾಗತಿಸಿದರು. ನಿಖಿಲ್ ನಾಚಪ್ಪ ನಿರೂಪಿಸಿ, ಗ್ರೀಷ್ಮಾ ವಂದಿಸಿದರು.