

ಮಡಿಕೇರಿಯ ಚಳಿಯ ವಾತಾವರಣ ಮಧ್ಯೆ ಕಾರ್ಕಳದ ಯಕ ್ಷರಂಗಾಯಣ ಪ್ರಸ್ತುತ ಪಡಿಸಿದ ಕರಾವಳಿ ಸೃಷ್ಟಿಯ ಕತೆ ಹೇಳುವ ಪರಶುರಾಮ ನಾಟಕ ರಂಗಾಸಕ್ತರ ಮೆಚ್ಚುಗೆಗೆ ಪಾತ್ರವಾಯಿತು. ಡಾ. ಜೀವನ್ ರಾಂ ಸುಳ್ಯ ನಿರ್ದೇಶನದಲ್ಲಿ ಪೈಪೋಟಿಗೆ ಬಿದ್ದಂತೆ ಅಭಿನಯಿಸಿದ ಕಲಾವಿದರು ಸುಮಾರು ೨ ಗಂಟೆ ಕಾಲ ಸಂತ ಜೋಸೆಫರ ವಿದ್ಯಾಸಂಸ್ಥೆ ಸಭಾಂಗಣ ತುಂಬಾ ತುಂಬಿದ್ದ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಸಫಲರಾದರು. ’
ಕಾಂತಾರ ಸಿನಿಮಾದ ವರಾಹರೂಪಂ ಗೀತೆ ರಚನೆಕಾರ ಶಶಿರಾಜ್ ಕಾವೂರು ಪರಶುರಾಮ ನಾಟಕ ರಚಿಸಿದ್ದಾರೆ. ಪುರಾಣದ ಎಳೆ ಇಟ್ಟುಕೊಂಡು ರಚನೆಯಾಗಿರುವ ನಾಟಕದಲ್ಲಿ ವರ್ತಮಾನದ ಸಂಗತಿಗಳಾದ ನದಿ ತಿರುವು ಯೋಜನೆ, ಗೋಹತ್ಯೆ, ಜಾತಿ ಪದ್ಧತಿ, ನಮ್ಮನ್ನಾಳುವವರ ದುರಾಡಳಿತ, ಭ್ರಷ್ಟ ವ್ಯವಸ್ಥೆಯ ವಿರುದ್ಧ ಆಕ್ರೋಶ ಸೂಕ್ಷ್ಮವಾಗಿ ಕಾಣಿಸಿಕೊಳ್ಳುತ್ತದೆ. ಪರಶುರಾಮ ಸೃಷ್ಟಿಯ ತುಳುನಾಡು, ಅಲ್ಲಿಯ ಭೂತಾರಾಧನೆಯ ಹಿನ್ನೆಲೆಯ ಅರಿವನ್ನೂ ಮೂಡಿಸುತ್ತದೆ.
ಕಲಾವಿದರ ಅಭಿನಯಕ್ಕೆ ರಂಗಸಜ್ಜಿಕೆ, ಬೆಳಕು ವಿನ್ಯಾಸ, ಧ್ವನಿ ವ್ಯವಸ್ಥೆಯೂ ಪೂರಕವಾಗಿ ಇದ್ದ ಕಾರಣ ನಾಟಕ ಎಲ್ಲೂ ಬೇಸರ ಹುಟ್ಟಿಸಲಿಲ್ಲ. ಕೊನೆಯ ತನಕವೂ ಕುಳಿತಿದ್ದ ಪ್ರೇಕ್ಷಕರ ಸಂಖ್ಯೆಯೇ ಇದಕ್ಕೆ ಸಾಕ್ಷಿ ಆಗಿತ್ತು.