

ಮಡಿಕೇರಿ: ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೆರಳುತ್ತಿದ್ದ ಕಾರಿಗೆ ಮೊಟ್ಟೆ ಎಸೆದ ಪ್ರಕರಣವನ್ನು ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕೆಂದು ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಆಗ್ರಹಿಸಿದ್ದಾರೆ.
ಮೊಟ್ಟೆ ಎಸೆದ ವ್ಯಕ್ತಿ ಯಾವ ಪಕ್ಷಕ್ಕೆ ಸೇರಿದ್ದಾನೆಂಬ ಬಗ್ಗೆ ಚರ್ಚೆ ನಡೆಯುತ್ತದೆ. ಈ ಪ್ರಕರದ ಸತ್ಯಾಸತ್ಯತೆ ಜನತೆಗೆ ತಿಳಿಸಲು ಹಾಲಿ ನ್ಯಾಯಾಧೀಶರ ನೇತೃತ್ವದಲ್ಲೇ ತನಿಖೆ ನಡೆಸಬೇಕೆಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಮಳೆಯಿಂದ ತೊಂದರೆಗೆ ಸಿಲುಕಿರುವ ಜನರ ಕಷ್ಟ ಕೇಳಲು, ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸಲು ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಕೊಡಗಿಗೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಅವರಿಗೆ ತಡೆವೊಡ್ಡುವ ಕೆಲಸ ನಡೆದಿದೆ. ಬಡವರಿಗೆ ಪರಿಹಾರ ಕೊಡುವ ಕಾಳಜಿ ಸರ್ಕಾರಕ್ಕಿಲ್ಲ ಎಂದು ಟೀಕಿಸಿದರು.
ಜಿಲ್ಲಾಡಳಿತ ಸೂಕ್ತ ಭದ್ರತೆ ಒದಗಿಸಬೇಕಾಗಿತ್ತು. ಪೊಲೀಸ್ ಗುಪ್ತಚಾರ ವಿಭಾಗದವರು ಗಲಾಟೆಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸ ಬೇಕಿತ್ತು. ಕಾರಿಗೆ ಮೊಟ್ಟೆ ಎಸೆಯುವ ಮೂಲಕ ಕೊಡಗಿನ ಸಂಸ್ಕೃತಿ, ಸೌಹಾರ್ದ ವಾತಾವರಣ ಹಾಗೂ ಸ್ನೇಹಚಾರಕ್ಕೆ ಪಟ್ಟಭದ್ರರು ಮಸಿ ಬಳಿದಿದ್ದಾರೆಂದು ಅಸಮಾಧಾನ ವ್ಯಕ್ತ ಪಡಿಸಿದರು.
ಜಿಲ್ಲಾಢಳಿತದ ನಿಷ್ಕ್ರೀಯತೆ ಎದ್ದು ಕಾಣುತ್ತದೆ. ಸಂಪೂರ್ಣ ವೈಫಲ್ಯ ಸಾಧಿಸುತ್ತದೆ. ಪಟ್ಟಭದ್ರರ ಕೈಯಲ್ಲಿ ಜಿಲ್ಲಾಡಳಿತ ಸೇರಿಕೊಂಡಿದೆ. ಸರ್ಕಾರ ವಿಫಲವಾಗಿರುವುದರಿಂದ ಪ್ರತಿಪಕ್ಷ ನಾಯಕರಿಗೆ ಅಪಮಾನ ಮಾಡುವ ಕೃತ್ಯ ಕೊಡಗಿನಲ್ಲಿ ನಡೆದಿದೆ. ಆ.೧೮ ರಂದು ಜಿಲ್ಲಾಡಳಿತ ಮೊದಲ ತಪ್ಪು ಮಾಡಿತ್ತು. ೨೬ ರಂದು ಮಡಿಕೇರಿ ಚಲೋ ತಡೆಯುವ ಉದ್ದೇಶದಿಂದ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸುವುದರ ಮೂಲಕ ಎರಡನೇ ತಪ್ಪು ಮಾಡಿದೆ ಎಂದರು.
ಬಿಜೆಪಿ ಮುಖಂಡರು- ಜಿಲ್ಲಾಡಳಿತ ಮಾತುಕತೆ ಮಾಡಿ ನಿಷೇಧಾಜ್ಞೆ ಜಾರಿಗೊಳಿಸಿದೆ. ಕಾಂಗ್ರೆಸ್ ಸದಾ ಕಾನೂನಿಗೆ ಗೌರವ ನೀಡುತ್ತದೆ. ನಿಷೇಧಾಜ್ಞೆ ತೆರವುಗೊಳಿಸಿದ ಬಳಿಕ ಮುಂದಿನ ಹೋರಾಟದ ರೂಪುರೇಷೆ ಬಗ್ಗೆ ಚರ್ಚಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಪ್ರತಿಭಟನೆ ಮೂಲಕ ವೈಫಲ್ಯತೆ ಎತ್ತಿ ತೋರಿಸಲಾಗುವುದೆಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಚಂದ್ರಮೌಳಿ, ಉಪಾಧ್ಯಕ್ಷ ವಿನಯಕುಮಾರ್ ಸೊರಕೆ, ಮಾಜಿ ಸಚಿವ ಬಿ.ಎ. ಜೀವಿಜಯ, ಮಾಜಿ ಶಾಸಕ ಕೆ. ವೆಂಕಟೇಶ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ ಗೋಷ್ಠಿಯಲ್ಲಿದ್ದರು.
**
ಗುಡ್ಡೆಹೊಸೂರಿನಲ್ಲಿ ಮೊಟ್ಟೆ ಎಸೆದ ಸಂಪತ್ ಮಡಿಕೇರಿ ಶಾಸಕರೊಂದಿಗೆ ಇರುವ ಹಲವು ಫೋಟೋಗಳಿವೆ. ಆತ ಕಾಂಗ್ರೆಸ್ ಕಾರ್ಯಕರ್ತ ನಲ್ಲ. ಪಕ್ಷದ ಯಾವ ಸಭೆ- ಸಮಾರಂಭದಲ್ಲಿಯೂ ಪಾಲ್ಗೊಂಡಿಲ್ಲ. ಮೊಟ್ಟೆ ಎಸೆದ ಬಳಿಕ ಆತನನ್ನು ಕಾಂಗ್ರೆಸ್ ಕಾರ್ಯಕರ್ತ ಎಂದು ಬಿಂಬಿಸುವ ಪ್ರಯತ್ನ ನಡೆದಿದೆ. ತೀತೀರ ಧರ್ಮಜ ಉತ್ತಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷರು.
**
ಮೊಟ್ಟೆ ಎಸೆಯಲು ಒಬ್ಬನನ್ನು ಬಿಜೆಪಿ ನಗರಸಭೆ ಸದಸ್ಯನನ್ನು ನಾಮಕರಣ ಮಾಡಿದೆ. ಎಸ್ಪಿ ಭರವಸೆ ನೀಡಿದ್ದಂತೆ ಮೊಟ್ಟೆ ಎಸೆದ ಎಲ್ಲರನ್ನು ಬಂಧಿಸಬೇಕು. ಬಿಜೆಪಿಯಂತೆ ನಾವು ಸಂಘರ್ಷಕ್ಕೆ ಮುಂದಾಗಿದ್ದಲ್ಲಿ ಪರಿಸ್ಥಿತಿ ಏನಾಗುತ್ತಿತ್ತು. ನಾಯಕರ ಸೂಚನೆಯಂತ ನಮ್ಮ ಕಾರ್ಯ ಕರ್ತರು ಅತ್ಯಂತ ತಾಳ್ಮೆಯಿಂದ ಇದ್ದಾರೆ. ಮೊಟ್ಟೆ ಎಸೆದಿರುವುದು ಪೂರ್ವಯೋಜಿತ ಕೃತ್ಯ. ಎಚ್.ಎಸ್. ಚಂದ್ರಮೌಳಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ.