ಕರೊನಾ ನಿವಾರಣೆಗೆ ಧನ್ವಂತರಿ ಯಾಗ

17adarshkdga4
Published on

ಮಡಿಕೇರಿ: ಕೊಡಗು ಜಿಲ್ಲಾ ಬ್ರಾಹ್ಮಣರ ಸಂಘದ ವತಿಯಿಂದ ಮೂರ್ನಾಡು ಗಾಂಧಿನಗರದ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಕರೊನಾ ರೋಗ ನಿವಾರಣಾರ್ಥವಾಗಿ ಧನ್ವಂತರಿ ಯಾಗ ನಡೆಸಲಾಯಿತು.

ಸಂಘದ ಅಧ್ಯಕ್ಷ ಡಾ.ಮಹಾಭಲೇಶ್ವರ್ ಭಟ್ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಪೂಜೆ, ಪುನಸ್ಕಾರ, ಹೋಮಗಳು ನಡೆದವು. ಪೊನ್ನಂಪೇಟೆಯ ಜನಾರ್ದನ್ ಭಟ್, ಮೂರ್ನಾಡಿನ ವಿಘ್ನೇಶ್ ಭಟ್, ಅಮಿತ್ ಭಟ್ ಹಾಗೂ ಬಿಳಿಗೇರಿಯ ಸುಬ್ರಹ್ಮಣ್ಯ ಭಟ್ ಹೋಮವನ್ನು ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ಮಹಾಭಲೇಶ್ವರ್ ಭಟ್, ಕರೊನಾ ಎನ್ನುವ ಕಣ್ಣಿಗೆ ಕಾಣಿಸದ ವೈರಸ್ ವಿಶ್ವದಾದ್ಯಂತ ಹರಡಿ ಮಾನವ ಕುಲದ ಜೀವನ ಹಾಗೂ ಜೀವವನ್ನು ಕಿತ್ತು ತಿನ್ನುತ್ತಿದೆ. ಇಂತಹ ರೋಗಕ್ಕೆ ವಿಜ್ಞಾನಿಗಳು, ವೈದ್ಯರು ಸಾಕಷ್ಟು ಪ್ರಯತ್ನ ಪಟ್ಟು ಔಷಧ ಕಂಡು ಹಿಡಿಯಲು ಹೆಣಗಾಡುತ್ತಿರುವ ಈ ಸಮಯದಲ್ಲಿ ಪುರಾಣ ಪುರುಷನಾದ ಔಷಧೀಯ ಅಧಿಪತಿ ಧನ್ವಂತರಿಯನ್ನು ಆರಾಧಿಸಿ, ಪೂಜಿಸಿ ಅವರ ಕೃಪೆಗೆ ಪಾತ್ರರಾಗಬೇಕಾಗಿದೆ ಎಂದು ತಿಳಿಸಿದರು.

ಎಲ್ಲ ಹಿಂದು ಧಾರ್ಮಿಕ ಕೇಂದ್ರಗಳಲ್ಲಿಯೂ ಧನ್ವಂತರಿ ಯಾಗ ಮತ್ತು ಜಪವನ್ನು ಮಾಡಬೇಕು. ಅದರಲ್ಲೂ ಬ್ರಾಹ್ಮಣ ಸಮುದಾಯ ಅರ್ಚಕರು ಹಾಗೂ ಜಿಲ್ಲಾದ್ಯಂತ ಇರುವ ಸಂಘದ ಸದಸ್ಯರು ಸ್ವಯಂ ಪ್ರೇರಿತರಾಗಿ ಈ ಕಾರ್ಯವನ್ನು ನಡೆಸುವಂತೆ ಕರೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net