

ಮಡಿಕೇರಿ: ಬಡವರ ಬಂಧು ಯೋಜನೆಯಡಿ ಸಾಲ ವಿತರಣೆ ಮಾಡಲು ಫಲಾನುಭವಿಗಳ ಆಯ್ಕೆ ಸಮಿತಿಗೆ ಜಿಲ್ಲಾಧಿಕಾರಿಯನ್ನು ಅಧ್ಯಕ್ಷರನ್ನಾಗಿ ಮಾಡಿರುವ ಕ್ರಮವನ್ನು ಮರುಪರಿಶೀಲನೆ ಮಾಡಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಗುರುವಾರ ನಗರದ ಡಿಸಿಸಿ ಬ್ಯಾಂಕ್‌ನಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಡಿ.ಸಿ.ಗೆ ಈಗಾಗಲೇ ಸಾಕಷ್ಟು ಒತ್ತಡದ ಕೆಲಸಗಳಿವೆ. ಹೀಗಾಗಿ ಹೊಸ ಆದೇಶದ ಬಗ್ಗೆ ಗಮನಹರಿಸಲಾಗುತ್ತದೆ. ಜತೆಗೆ ಈ ಹಿಂದೆ ಇದ್ದಂತೆ ಫಲಾನುಭವಿಗಳ ಆಯ್ಕೆಯಲ್ಲಿ ಡಿಸಿಸಿ ಬ್ಯಾಂಕಿಗೂ ಅಧಿಕಾರ ನೀಡುವ ನಿಟ್ಟಿನಲ್ಲಿ ತೀರ್ಮಾನ ತೆಗೆದು ಕೊಳ್ಳಲಾಗುವುದು ಎಂದರು.
ಆಯಾ ಜಿಲ್ಲಾಧಿಕಾರಿ ಫಲಾನುಭವಿಗಳನ್ನು ಆಯ್ಕೆ ಮಾಡಲಿ. ಅಂತಿಮವಾಗಿ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಚರ್ಚಿಸಿ ಶೀಘ್ರ ನಿರ್ಧಾರ ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕ್‌ನಿಂದ ರೈತರಿಗೆ ಸಾಲ ವಿತರಣೆ, ಕಾಯಕ ಯೋಜನೆಯಡಿ ವಿತರಿಸಲಾದ ಸಾಲ ಹಾಗೂ ವಸೂಲಾತಿ ವಿಷಯಗಳ ಬಗ್ಗೆ ಸಚಿವರು ಮಾಹಿತಿ ಪಡೆದುಕೊಂಡರು.
ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ರೈತರಿಗೆ ಡಿಸಿಸಿ ಬ್ಯಾಂಕಿನಿಂದ ಸಾಲ ಪಡೆದುಕೊಳ್ಳಲು ಕಂದಾಯ ಇಲಾಖೆಯ ದೃಢೀಕರಣದ ಅಗತ್ಯವಿದೆ. ಈ ನಿಟ್ಟಿನಲ್ಲಿ ಕಂದಾಯ ಅಧಿಕಾರಿಗಳು ಸೂಕ್ತ ಸಂದರ್ಭದಲ್ಲಿ ಧೃಢೀಕರಣ ನೀಡಿ ರೈತರು ಸಾಲ ಪಡೆಯಲು ಸಹಕರಿಸುವಂತೆ ತಿಳಿಸಿದರು.