ಮಡಿಕೇರಿ ದಸರದಲ್ಲಿ ಮಹಿಳಾ ದಸರಾ ಸಂಭ್ರಮ

30mdks7 - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಜನೋತ್ಸವ ಮಡಿಕೇರಿ ದಸರದಲ್ಲಿ ಶುಕ್ರವಾರ ಮಹಿಳಾ ದಸರಾ ಸಂಭ್ರಮ. ಗಾಂಧಿ ಮೈದಾನದಲ್ಲಿ ಆಯೋಜಿಸಿದ್ದ ವಿವಿಧ ಸ್ಪರ್ಧೆಯಲ್ಲಿ ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಬಲೂನ್‌ಗೆ ಗುಂಡು ಹೊಡೆಯುವುದು, ಮದರಂಗಿ ಹಾಕುವುದು, ಛದ್ಮವೇಷ ಸ್ಪರ್ಧೆ ನಡೆಯಿತು.

ಮಹಿಳೆಯರು ವಿವಿಧ ಉತ್ಪನ್ನಗಳ ಮಾರಾಟ ಮಳಿಗೆ ತೆರೆದಿದ್ದರು. ಗೃಹ ಬಳಕೆ ವಸ್ತುಗಳು, ಆಹಾರ ಪದಾರ್ಥಗಳನ್ನು ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆ ಮಾಡಿದ್ದರು.

ಸಭಾ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ಅವರ ಧರ್ಮಪತ್ನಿ ರೂಪಶ್ರೀ ಸತೀಶ್ ಚಾಲನೆ ನೀಡಿ ಮಾತನಾಡಿ, ಮೈಸೂರು ಮತ್ತು ಮಡಿಕೇರಿ ದಸರಾ ಒಂದೊಂದು ವಿಶೇಷತೆಯಿಂದ ಕೂಡಿದೆ. ಮಡಿಕೇರಿ ದಸರಾ ಪ್ರತಿಯೊಬ್ಬರನ್ನು ಆಕರ್ಷಿಸುತ್ತಿದೆ ಎಂದು ಹೇಳಿದರು.

ಮುಖ್ಯಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿಯೂ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಸಾಧನೆ ಮಾಡುತ್ತಿದ್ದಾರೆಂದರು. ಮಹಿಳೆಯರು ಯಾರಿಗೂ ಕೂಡ ಕಮ್ಮಿ ಇಲ್ಲ. ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಕೊಡಗಿನ ಮಹಿಳೆಯರು ಪ್ರತಿ ಕ್ಷೇತ್ರದಲ್ಲೂ ತಮ್ಮನ್ನು ಗುರುತಿಸಿಕೊಳ್ಳುವುದರ ಮೂಲಕ ಮಾದರಿಯಾಗಿದ್ದಾರೆಂದರು. ಮಹಿಳೆಯರು ತಮಗೆ ಸಿಗುವ ಅವಕಾಶ ಸದುಪಯೋಗ ಪಡಿಸಿಕೊಂಡು ಸಾಧನೆ ಮಾಡುವಂತಾಗಬೇಕು. ಈ ಬಾರಿ ಮಡಿಕೇರಿ ದಸರಾ ವಿಜೃಂಭಣೆಯಿಂದ ನಡೆಯುತ್ತಿದೆ. ಮೈಸೂರು ದಸರಾ ಮಾದರಿ ಮಡಿಕೇರಿ ದಸರಾ ನಡೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

ನಗರಸಭೆ ಮಾಜಿ ಸದಸ್ಯೆ ಮೋಂತಿ ಗಣೇಶ್ ಮಾತನಾಡಿ, ಮಹಿಳೆಯರು ತಮ್ಮ ಮಕ್ಕಳಿಗೆ ದೇಶಭಕ್ತಿ ಹಾಗೂ ಸಮಾಜದ ಒಳಿತಿಗೆ ಸಹಕಾರಿ ಯಾಗುವಂತಹ ಒಳ್ಳೆಯ ಗುಣ ಬೆಳೆಸುವಂತಾಗಬೇಕೆಂದರು. ಜಿಲ್ಲೆಯೂ ಪ್ರವಾಸೋದ್ಯಮಕ್ಕೆ ಹೆಸರಾದ ಜಿಲ್ಲೆಯಾಗಿದೆ. ಆ ನಿಟ್ಟಿನಲ್ಲಿ ಜಿಲ್ಲೆಯ ಪರಿಸರ ಕಾಪಾಡುವುದು ಎಲ್ಲರ ಆದ್ಯ ಕರ್ತವ್ಯ. ಮಹಿಳೆಯರು ಪರಿಸರ ಶುಚಿತ್ವದ ಬಗ್ಗೆ ಹೆಚ್ಚಿನ ಒತ್ತು ನೀಡಿ ಪರಿಸರ ಸಂರಕ್ಷಣೆ ಯಲ್ಲಿ ಕೈಜೋಡಿಸುವಂತಾಗಬೇಕೆಂದರು.

ನಗರಸಭೆ ಮಾಜಿ ಪೌರಾಯುಕ್ತೆ ಬಿ.ಬಿ. ಪುಷ್ಪಾವತಿ ಮಾತನಾಡಿ, ನವರಾತ್ರಿ ಉತ್ಸವ ಮಹಿಳಾ ಪ್ರಧಾನ ಆಚರಣೆಯಾಗಿದೆ. ದಸರಾ ಆಚರಣೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಜವಾಬ್ದಾರಿ ಇರುತ್ತದೆ ಎಂದರು. ಮುಂದಿನ ವರ್ಷಗಳಲ್ಲಿ ಮಹಿಳಾ ದಸರಾಕ್ಕೆ ಹೆಚ್ಚಿನ ಅನುದಾನ ಮೀಸಲಿಡಬೇಕೆಂದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಆಹ್ವಾನಿಸುವಂತಾಗಬೇಕು. ಇದು ಮಹಿಳೆಯರಿಗೆ ಸ್ಫೂರ್ತಿ ದಾಯಕವಾಗಲಿದೆ ಎಂದು ಹೇಳಿದರು.

ಮಡಿಕೇರಿ ಕೊಡವ ಸಮಾಜ ನಿರ್ದೇಶಕಿ ಕನ್ನಂಡ ಕವಿತಾ ಬೊಳ್ಳಪ್ಪ ಮಾತನಾಡಿ, ಮೈಸೂರು ದಸರಾ ವಿಶ್ವವಿಖ್ಯಾತ ದಸರಾ ಉತ್ಸವವಾಗಿದೆ. ಅದೇ ರೀತಿ ಮಡಿಕೇರಿ ದಸರಾ ಕೂಡ ದೇಶದಲ್ಲಿಯೇ ಹೆಸರು ವಾಸಿಯಾಗಿದೆ. ಶಕ್ತಿ ದೇವತೆಗಳ ಆರಾಧನೆಯೊಂದಿಗೆ ನಡೆಯುವ ಕರಗೋತ್ಸವ ಎಲ್ಲರ ಆಕರ್ಷಣೀಯ ಎಂದರು.

ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಸುರಯ್ಯ ಅಬ್ರಾರ್ ಮಾತನಾಡಿ, ಜಿಲ್ಲೆಯಲ್ಲಿ ಮಹಿಳೆಯರು ಪ್ರತಿಯೊಂದು ಕ್ಷೇತ್ರ ದಲ್ಲಿ ತೊಡಗಿಸಿಕೊಳ್ಳಲು ಬಹಳಷ್ಟು ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

ನಗರಸಭೆ ವ್ಯವಸ್ಥಾಪಕಿ ಸುಜಾತ ಮಾತನಾಡಿ, ಕಳೆದೆರಡು ವರ್ಷಗಳಿಂದ ಕಳೆಗುಂದಿದ ಮಡಿಕೇರಿ ದಸರಾ ಈ ಬಾರಿ ವಿಜೃಂಭಣೆಯಿಂದ ನಡೆಯುತ್ತಿದೆ. ಮಹಿಳೆಯರು ರಾಜಕೀಯ, ಕ್ರೀಡೆ, ಸಾಹಿತ್ಯ ಸೇರಿದ್ದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆಂದರು. ಮಡಿಕೇರಿ ನಗರಸಭೆ ಉಪಾಧ್ಯಕ್ಷೆ ಸವಿತಾ ರಾಕೇಶ್, ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತೆ ನಯನ ಮಾತನಾಡಿದರು. ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಕೆಂಚೆಟ್ಟಿರ ರೇಷ್ಮಾ ದೇವಯ್ಯ, ಶೋಭಾ ಮುತ್ತಪ್ಪ (ಕ್ರೀಡಾ ಕ್ಷೇತ್ರ), ಲಕ್ಷ್ಮಿ (ಪೌರಕಾರ್ಮಿಕರು), ನಿರ್ಮಲ (ಅಂಗನವಾಡಿ ಕಾರ್ಯಕರ್ತೆ), ಎಂ.ಪಿ.ಕನಿಕೆ (ಆಶಾ ಕಾರ್ಯಕರ್ತೆ) ಅವರನ್ನು ಸನ್ಮಾನಿಸಲಾಯಿತು.

ಕಡ್ಲೇರ ತುಳಸಿ ಮೋಹನ್ ಪ್ರಾರ್ಥಿಸಿದರು. ಸವಿತಾ ರಾಕೇಶ್ ಸ್ವಾಗತಿಸಿದರು. ಅನಿತಾ ನಿರೂಪಿಸಿದರು, ಶೈಲಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net