ಕಾರ್ಯಕ್ರಮ ಸ್ಥಗಿತಗೊಳಿಸಿದ ಕೊಡವ ಪೊಮ್ಮಕ್ಕ

1mdka6 - Copy
Published on

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಜನೋತ್ಸವ ಮಡಿಕೇರಿ ದಸರದಲ್ಲಿ ಶುಕ್ರವಾರ ರಾತ್ರಿ ಮಹಿಳಾ ದಸರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಆಗಮಿಸಿದ್ದ ಕೊಡವ ಪೊಮ್ಮಕ್ಕಡ ಕೂಟದ ಕಲಾವಿದೆಯರು ಅರ್ಧಕ್ಕೆ ಕಾರ್ಯಕ್ರಮ ಸ್ಥಗಿತಗೊಳಿಸಿ ತೆರಳಿದರು. ಕೂಟದ ಅಧ್ಯಕ್ಷೆ ಕನ್ನಂಡ ಕವಿತಾ ಬೊಳ್ಳಪ್ಪ ಹಾಗೂ ಕಲಾವಿದೆಯರಿಗೆ ನಿರೂಪಕಿ ಜಯಲಕ್ಷ್ಮಿ ಅವಮಾನ ಮಾಡಿದ್ದಾರೆಂದು ಕಾರ್ಯಕ್ರಮ ಮೊಟಕುಗೊಳಿಸಿ ನಿರ್ಗಮಿಸಿದರು.

ತನ್ನ ಹಾಗೂ ತನ್ನ ತಂಡದ ಕಲಾವಿದರಿಗೆ ಅವಮಾನ ಮಾಡಲಾಗಿದೆ ಎಂದು ಕವಿತಾ ಬೊಳ್ಳಪ್ಪ ನೇತೃತ್ವದಲ್ಲಿ ಕಲಾವಿದೆಯರು ಶನಿವಾರ ಮಡಿಕೇರಿ ನಗರ ದಸರಾ ಸಮಿತಿ ಪ್ರಮುಖರ ಎದುರು ತಮ್ಮ ಆಕ್ಷೇಪ ವ್ಯಕ್ತ ಪಡಿಸಿದರು. ದಸರಾ ಸಮಿತಿ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಕಾರ್ಯಾಧ್ಯಕ್ಷ ಕೆ.ಎಸ್. ರಮೇಶ್, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಬಿ.ಎಂ. ಹರೀಶ್ ಅಣ್ವೇಕರ್ ಕ್ಷಮೆಯಾಚಿಸುವುದರ ಮೂಲಕ ಪ್ರಕರಣ ಇತಿಗೊಳಿಸುವ ಪ್ರಯತ್ನ ನಡೆಸಿದ್ದಾರೆ.

ಭಾನುವಾರ ಆಯೋಜಿಸಿರುವ ಜಾನಪದ ಉತ್ಸವದಲ್ಲಿ ಕೊಡವ ಪೊಮ್ಮಕ್ಕಡ ಕೂಟದ ಕಲಾವಿದೆಯರು ಉಮ್ಮತ್ತಾಟ್ ನೃತ್ಯ ಪ್ರದರ್ಶನ ನೀಡಬೇಕಾಗಿದೆ. ತಾವು ಕಾರ್ಯಕ್ರಮ ಪ್ರದರ್ಶನ ನೀಡಬೇಕಾದ್ದಲ್ಲಿ ನಿರೂಪಕಿ ಜಯಲಕ್ಷ್ಮಿ ಅವರಿಗೆ ನಿರೂಪಣೆ ಜವಾಬ್ದಾರಿ ನೀಡಬಾರ ದೆಂದು ಪಟ್ಟು ಹಿಡಿದಿದ್ದಾರೆ.

ಮಡಿಕೇರಿ ಶಾಸಕರನ್ನು ಮಾಜಿ ಶಾಸಕರೆಂದು ಹೇಳಿದ್ದು ಸೇರಿದ್ದಂತೆ ಉದ್ಘಾಟನಾ ಕಾರ್ಯಕ್ರಮದ ನಿರೂಪಣೆಯಲ್ಲಿ ಆದ ಅಭಾಸದಿಂದ ನಿರೂಪಕಿ ಜಯಲಕ್ಷ್ಮಿ ತೀವ್ರ ಒತ್ತಡದಲ್ಲಿದ್ದರು. ಈ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭ ಕಣ್ಣೀರು ಹಾಕುತ್ತಿ
ದ್ದರು. ಆ ವೇಳೆ ಸಮಾಧಾನ ಪಡಿಸಲು ಹೋದ ನನ್ನನ್ನು ನಿಮ್ಮಿಂದ ಕಾರ್ಯಕ್ರಮ ಫುಲ್ ಪ್ಲಾಫ್ ಆಯಿತ್ತು. ನೀವು ಇಲ್ಲಿಂದ ಹೋಗಿ ಎಂದು ಹೇಳುವುದರ ಮೂಲಕ ನಮಗೆ ಅವಮಾನ ಮಾಡಿದ್ದಾರೆಂದು ಕನ್ನಂಡ ಕವಿತಾ ಬೊಳ್ಳಪ್ಪ ದೂರಿದ್ದಾರೆ.

ನಿರೂಪಕರ ಜವಾಬ್ದಾರಿ ಹೊತ್ತಿದ್ದ ಮೂವರು ವೇದಿಕೆ ಬದಿ ಕೂತಿದ್ದೇವು. ನಿರೂಪಣೆ ಜವಾಬ್ದಾರಿ ಇಲ್ಲದಿದ್ದರೂ ಕವಿತಾ ಬೊಳ್ಳಪ್ಪ ನಿರೂಪಕರ ಸ್ಥಾನದಲ್ಲಿ ಕೂತಿದ್ದರು. ಕವಿತಾ ಬೊಳ್ಳಪ್ಪ ಹಾಕಿದ ಒತ್ತಡದಿಂದ ನಾನು ಹಿಂದೂ ಮಲಯಾಳಿ ಸಂಘದ ಕಾರ್ಯಕ್ರಮಕ್ಕೆ ಆಹ್ವಾನ ನೀಡುವ ಬದಲು ಕೊಡವ ಪೊಮ್ಮಕ್ಕಡ ಕೂಟದಿಂದ ಕಾರ್ಯಕ್ರಮ ನೀಡುವಂತೆ ಕರೆಯಬೇಕಾಯಿತು. ನಿಗದಿತ ಕಾರ್ಯಕ್ರಮ ಬದಲಾಯಿಸಿದಕ್ಕೆ ಮತ್ತೊಬ್ಬ ನಿರೂಪಕರಾದ ಎಚ್.ಟಿ. ಅನಿಲ್ ಆಕ್ಷೇಪ ವ್ಯಕ್ತ ಪಡಿಸಿದರೆಂದು ನಿರೂಪಕಿ ಜಯಲಕ್ಷ್ಮಿ ಹೇಳುತ್ತಾರೆ.

ನಿಮ್ಮಿಂದ ಗೊಂದಲ ಆಗುತ್ತಿದೆ ಎಂದು ನಿರೂಪಕರ ಆಸನದಲ್ಲಿ ಆಸೀನರಾಗಿದ್ದ ಕವಿತಾ ಬೊಳ್ಳಪ್ಪ ಅವರಿಗೆ ಹೇಳಿರುವುದು ನಿಜ. ಆದರೆ, ನಾನು ಎಲ್ಲಿಯೂ ಕೊಡವ ಪದ ಬಳಸಿಲ್ಲ. ಹೀಗಿದ್ದರೂ, ನನ್ನಿಂದ ಕೊಡವರಿಗೆ ಅಪಮಾನ ಆಗಿದೆ ಎಂದು ಜಾತಿ ಉಲ್ಲೇಖಿಸಿ ಹೇಳುತ್ತಿರು
ವುದು ತುಂಬಾ ಬೇಸರವುಂಟು ಮಾಡಿದೆ ಎಂದು ನಿರೂಪಕಿ ಜಯಲಕ್ಷ್ಮಿ ಬೇಸರ ವ್ಯಕ್ತ ಪಡಿಸಿದ್ದಾರೆ.

ಕೊಡವರಿಗೆ ಮಾಡಿದ ಅಪಮಾನಕ್ಕೆ ಸ್ಪಷ್ಟನೆ ನೀಡಿ
ಮಡಿಕೇರಿ ನಗರ ದಸರಾ ಸಮಿತಿ ಕೊಡವ ಸಮುದಾಯವನ್ನು ನಿರಂತರವಾಗಿ ಅಪಮಾನಿಸುತ್ತಿರುವುದರ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಹಿರಿಯರಾದ ಎಂ.ಎಸ್. ನಾಣಯ್ಯ ಮಡಿಕೇರಿ ನಗರ ದಸರಾ ಸಮಿತಿವನ್ನು ಆಗ್ರಹಿಸಿದ್ದಾರೆ.

ಮಡಿಕೇರಿ ದಸರಾ ಉತ್ಸವ ಸರ್ಕಾರದ ಅನುದಾನ ಮತ್ತು ಪ್ರಾಯೋಜಕತ್ವದಲ್ಲಿ ನಡೆಯುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ, ಮಡಿಕೇರಿ ಜನತೆ ಸಹಭಾಗಿತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದೆ. ಸೆ.೩೦ ರಂದು ನಡೆದ ಮಹಿಳಾ ದಸರಾ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಭಾ ಕಾರ್ಯಕ್ರಮದಲ್ಲಿ ಅಭಾಸವನ್ನುಂಟು ಮಾಡಲಾಗಿದೆ ಎಂದು ಗಮನ ಸೆಳೆಯಲಾಗಿದೆ.

ಮಡಿಕೇರಿಯ ಜನಪ್ರಿಯ ಶಾಸಕರನ್ನು ಮಾಜಿ ಶಾಸಕರೆಂದು ಹೇಳುವುದರ ಮೂಲಕ ನಿರೂಪಕರು ಅಪಮಾನಿಸಿದ್ದಾರೆ. ಈ ಪ್ರಮಾದ ಸರಿ ಪಡಿಸದೇ ಮೌನವಾಗಿದ್ದುದು ಪೂರ್ವ ನಿಯೋಜಿತವಾಗಿ ಕೊಡವ ಸಮುದಾಯಕ್ಕೆ ಸೇರಿದ ಶಾಸಕರನ್ನು ಅಪಮಾನಿಸಲು ಸಿದ್ಧರಾಗಿದ್ದನ್ನು ನಿರೂಪಿಸಿದೆ ಎಂದು ಆಕ್ಷೇಪ ವ್ಯಕ್ತ ಪಡಿಸಲಾಗಿದೆ.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅನೇಕ ಅಭಾಸ ಜರುಗಿದೆ. ಇದಕ್ಕೆ ಕೊಡವ ಪೊಮ್ಮಕ್ಕಡ ಕೂಟವೇ ಕಾರಣ ಎಂದು ಕಾರ್ಯಕ್ರಮ ನಿರೂಪಕಿ ಜಯಲಕ್ಷ್ಮಿ, ಕೊಡವ ಪೊಮ್ಮಕ್ಕಡ ಕೂಟ ಅಧ್ಯಕ್ಷೆ ಕನ್ನಂಡ ಕವಿತಾ ಬೊಳ್ಫಪ್ಪ ಹಾಗೂ ಕೂಟದ ಮಹಿಳಾ ಸದಸ್ಯರನ್ನು ಬಹಿರಂಗವಾಗಿ ನಿಂದಿಸಿ, ಹೊರ ನಡೆಯಿರಿ ಎಂದು ಬೆದರಿಸಿದ್ದಾರೆ. ಆ ಸಮಯದಲ್ಲಿ ದಸರಾ ಸಮಿತಿ ಹಾಗೂ ಸಾಂಸ್ಕೃತಿಕ ಸಮಿತಿ ಪದಾಧಿಕಾರಿಗಳು ಮೌನವಾಗಿ ಸಮ್ಮತಿಸಿರುವುದು ಕಂಡು ಬಂದಿದ್ದು, ಕೊಡವ ಸಮುದಾಯವನ್ನು ಕಡೆಗಣಿಸಿ ಅಪಮಾನಿಸುತ್ತಿರುವುದು ನಿಚ್ಚಳವಾಗಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಲಾಗಿದೆ.

ಈ ಹಿಂದೆ ಕೂಡ ಕೊಡವ ಜನಾಂಗಕ್ಕೆ ಸೇರಿದವರು ಎಂಬ ಕಾರಣಕ್ಕಾಗಿ ಕಾರ್ಯಕ್ರಮ ನಿರೂಪಕರಾದ ಮಾದೇಟಿರ ಬೆಳ್ಯಪ್ಪ, ತೆನ್ನೀರ ಮೈನ ವಿರುದ್ಧ ಸಂಚು ನಡೆಸಿದ್ದು ಕೂಡ ಜಗಜ್ಜಾಹೀರಾಗಿದೆ. ಜನೋತ್ಸವ ಮಡಿಕೇರಿ ದಸರಾ ಕೆಲವು ಪಟ್ಟಬದ್ದ ಹಿತಾಸಕ್ತಿಗಳ ಕುತಂತ್ರದಿಂದ ಅವರ ಕುಟುಂಬದವರ ಮತ್ತು ಹಿತೈಷಿಗಳ ಉತ್ಸವವಾಗಿ ಮಾರ್ಪಾಡಾಗಿದೆ. ಇದನ್ನು ನಾವು ಬಲವಾಗಿ ಖಂಡಿಸುವುದಾಗಿ ಹೇಳಿದರು.

ಮಡಿಕೇರಿ ದಸರಾ ಸಮಿತಿ ಬಹಿರಂಗವಾಗಿ ಬೇಷರತ್ತು ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಕೊಡವ ಸಮುದಾಯದವರು ಪ್ರತಿಭಟನೆ ನಡೆಸ ಬೇಕಾಗುತ್ತದೆ. ನಮ್ಮ ನೆಲದಲ್ಲಿಯೇ ನಮ್ಮನ್ನು ಅಪಮಾನಿಸುವ ಉದ್ದಟತನವನ್ನು ನಾವು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ.

**
ಸಭಾ ಕಾರ್ಯಕ್ರಮ ನಡೆಯುವ ಸಂದರ್ಭ ನಾನು ವೇದಿಕೆಯಲ್ಲಿ ಇರಲಿಲ್ಲ. ಹೀಗಿದ್ದರೂ, ಸಭಾ ಕಾರ್ಯಕ್ರಮ ವೇಳೆ ಉಂಟಾದ ಅಭಾಸ ಕ್ಕೆ ನನ್ನನ್ನು ಹೊಣೆ ಮಾಡುತ್ತಿರುವುದು ಸರಿಯಲ್ಲ. ದಸರಾ ಸಮಿತಿ ಪ್ರಮುಖರು ಕ್ಷಮೆಯಾಚಿಸಿದ್ದು, ಜಾನಪದ ಉತ್ಸವದಲ್ಲಿ ಕಾರ್ಯಕ್ರಮ ನೀಡಲು ಆಹ್ವಾನಿಸಿದ್ದಾರೆ. ಕನ್ನಂಡ ಕವಿತಾ ಬೊಳ್ಳಪ್ಪ, ಅಧ್ಯಕ್ಷೆ, ಕೊಡವ ಪೊಮ್ಮಕ್ಕಡ ಕೂಟ, ಮಡಿಕೇರಿ.

**
ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಸಂಘಟಿಕರು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಮಹಿಳಾ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲ ನಿಗದಿತ ಕಾರ್ಯಕ್ರಮ ಮಾಡಲು ಕವಿತಾ ಬೊಳ್ಳಪ್ಪ ಬಿಡಲಿಲ್ಲ. ಅವರು ಹಾಕಿದ ಒತ್ತಡದಿಂದ ಗೊಂದಲ ಉಂಟಾಯಿತು. ಈಗ ಕೊಡವರಿಗೆ ಅಪಮಾನ ಮಾಡಲಾಗಿದೆ ಎಂದು ನನ್ನ ಮೇಲೆ ಅಪವಾದ ಮಾಡುತ್ತಿರುವುದು ವಿಷಾದನೀಯ. ಜಯಲಕ್ಷ್ಮಿ, ನಿರೂಪಕಿ, ಮಡಿಕೇರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net