

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ನಾಲ್ಕು ಶಕ್ತಿ ದೇವತೆಗಳ ಕರಗಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸುವುದರ ಮೂಲಕ ಜನೋತ್ಸವ ಮಡಿಕೇರಿ ದಸರಾ ಉತ್ಸವಕ್ಕೆ ಸೋಮವಾರ ಸಂಜೆ ಚಾಲನೆ ನೀಡಲಾಯಿತು. ಪಂಪಿನಕೆರೆಯಲ್ಲಿ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ಪೆನ್‌ಷನ್‌ಲೈನಲ್ಲಿರುವ ಶ್ರೀ ದಂಡಿನ ಮಾರಿಯಮ್ಮ, ಕೋಟೆ ಮಾರಿಯಮ್ಮ, ಗೌಳಿಬೀದಿಯಲ್ಲಿರುವ ಶ್ರೀ ಕಂಚಿ ಕಾಮಾಕ್ಷಿ ದೇವರ ಕರಗಕ್ಕೆ ಪೂಜೆ ಸಲ್ಲಿಸಲಾಯಿತು.
ಮೋಡ ಮುಸುಕಿದ ಆಹಾದ್ಲಕರ ವಾತಾವರಣದಲ್ಲಿ ಜನೋತ್ಸವಕ್ಕೆ ಚಾಲನೆ ಸಿಕ್ಕಿದೆ. ಪ್ರಕೃತಿ ವಿಕೋಪ, ಕೋವಿಡ್ ಹಿನ್ನೆಲೆಯಲ್ಲಿ ಕಳೆಗುಂದಿದ್ದ ಜನೋತ್ಸವಕ್ಕೆ ಧಾರ್ಮಿಕ ಕೈಂಕರ್ಯದೊಂದಿಗೆ ಅದ್ದೂರಿ ಚಾಲನೆ ಸಿಕ್ಕಿದೆ. ಕರಗ ಪೂಜೆ ಸಂದರ್ಭ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿ ದ್ದು ವಿಶೇಷ. ಪ್ರತಿಯೊಂದು ಕರಗದ ಮುಂದೆ ಜನರೇಟರ್ ಸಹಿತ ಬೆಳಕಿನ ವ್ಯವಸ್ಥೆ ಮಾಡಲಾಗಿತ್ತು.
ನಾಲ್ಕು ಶಕ್ತಿ ದೇವತೆಗಳ ದೇವಾಲಯದಿಂದ ಮಧ್ಯಾಹ್ನ ೩ ಗಂಟೆ ಬಳಿಕ ಕರಗಗಳನ್ನು ಪಂಪಿನಕೆರೆಗೆ ಮೆರವಣಿಗೆ ಮೂಲಕ ಕೊಂಡೊಯ್ಯ ಲಾಯಿತು. ಸಾಂಪ್ರದಾಯಿಕ ವಾಲಗದೊಂದಿಗೆ ಕರಗ ಹೊತ್ತು ಸಾಗುವವರು ಹಾಗೂ ದೇವಾಲಯ ಪ್ರಮುಖರು ತೆರಳಿದರು. ಪಂಪಿನಕೆರೆ ಯಲ್ಲಿ ಕರಗ ಅಲಂಕಾರ ಮಾಡಿದ ಬಳಿಕ ಸಂಜೆ ೬ ಗಂಟೆ ಹೊತ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಸತತ ೫೦ನೇ ವರ್ಷ ದಂಡಿನ ಮಾರಿಯಮ್ಮ ಕರಗ ಹೊತ್ತಿರುವ ಉಮೇಶ್ ಪೂಜಾರಿ ಅವರನ್ನು ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ಸನ್ಮಾನಿಸಿ ದರು. ೧೪ನೇ ಪ್ರಾಯದಲ್ಲಿ (೧೯೭೩) ಮೊದಲ ಕರಗ ಹೊತ್ತ ಉಮೇಶ್ ಅವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭ ದಲ್ಲಿಯೂ ದೇವಿ ಕೈಂಕರ್ಯ ಮಾತ್ರ ಬಿಡಲಿಲ್ಲ.
ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ಕರಗವನ್ನು ಸತತ ೪೮ನೇ ಬಾರಿ ಹೊತ್ತಿರುವ ಪಿ.ಪಿ. ಚಾಮಿ, ಕೋಟೆ ಮಾರಿಯಮ್ಮ ಕರಗವನ್ನು ಸತತ ೩೦ನೇ ವರ್ಷ ಹೊತ್ತಿರುವ ಪಿ.ಬಿ. ಅನೀಶ್ ಕುಮಾರ್, ಪಿ.ಬಿ. ಉಮೇಶ್ ಸುಬ್ರಮಣಿ, ೧೫ನೇ ವರ್ಷ ಕಂಚಿ ಕಾಮಾಕ್ಷಿ ಕರಗ ಹೊತ್ತಿ
ರುವ ನವೀನ್‌ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಮಡಿಕೇರಿ ಡಿವೈಎಸ್ಪಿ ಗಜೇಂದ್ರ ಪ್ರಸಾದ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಕರಗ ಹಾದುಹೋಗುತ್ತಿದ್ದ ಮಾರ್ಗದಲ್ಲಿ ವಾಹನ ಸಂಚಾರ ಸಂಪೂರ್ಣ ನಿಷೇಧಿಸಲಾಗಿತ್ತು.
ಮೊದಲ ಪೂಜೆ
ಪಂಪಿನಕೆರೆಯಲ್ಲಿ ಸಾಂಪ್ರದಾಯಿಕ ಪೂಜೆ ನೆರವೇರಿದ ಬಳಿಕ ಕರಗ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮಂಟಪದಿಂದ ಹೊರ ಬಂದ ಕರಗಗಳಿಗೆ ಮಡಿವಾಳ ಸಮುದಾಯದವರು ಕರಗಕ್ಕೆ ಮೊದಲ ಪೂಜೆ ಸಲ್ಲಿಸಿದರು. ಕರಗ ಹಾದು ಹೋಗುವ ಮಾರ್ಗದಲ್ಲಿ ಮಡಿ ಹಾಕು ವುದರ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು.
ದಾಸವಾಳದ ಮಡಿಕಟ್ಟೆಯಲ್ಲಿರುವ ವೀರಭದ್ರ ಮುನೇಶ್ವರ ದೇವಾರ ಪೂಜಾ ಕೈಂಕರ್ಯ ನೆರವೇರಿಸುವ ಮಡಿವಾಳ ಸಮುದಾಯದ ಪಿ.ಜಿ. ಮಂಜನಾಥ್, ಪಿ.ಜಿ. ಕಮಲ್, ಪಿ.ಜಿ. ಸುಕುಮಾರ್, ಅಶೋಕ್, ವಿಷ್ಣು, ಕಿಶೋರ್ ನೇತೃತ್ವದಲ್ಲಿ ಕುಟುಂಬ ಸದಸ್ಯರು ಮೊದಲ ಪೂಜೆ ಸಲ್ಲಿಸಿದರು.
ಕರಗ ಪೂಜೆಗೆ ಸಂಭ್ರಮ
ಪಂಪಿನಕೆರೆಯಲ್ಲಿ ಪೂಜೆ ಸಲ್ಲಿಸಿದ ಬಳಿಕ ನಾಲ್ಕು ಶಕ್ತಿ ದೇವತೆಗಳ ಕರಗಗಳು ಮೆರವಣಿಗೆ ಮೂಲಕ ಪೇಟೆ ಶ್ರೀ ರಾಮಮಂದಿರಕ್ಕೆ ಆಗಮಿಸಿತು. ಮಹಾದೇವಪೇಟೆ ಮಾರ್ಗದಲ್ಲಿ ಕರಗ ಹಾದುಬರುತ್ತಿದ್ದಂತೆ ಮನೆ- ಮನೆಗಳಲ್ಲಿ ಕರಗಕ್ಕೆ ಪೂಜೆ ಸಲ್ಲಿಸಲಾಯಿತು. ಶ್ರೀ ಚೌಡೇಶ್ವರಿ ದೇವಾಲಯ ಮುಂಭಾಗದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಪಂಪಿನಕೆರೆಯಿಂದ ಮಹಾದೇವಪೇಟೆ ಮಾರ್ಗದ ರಸ್ತೆ ಬದಿಯಲ್ಲಿರುವ ಮನೆಗಳ ಮುಂಭಾಗದಲ್ಲಿ ಮಹಿಳೆಯರು, ಯುವತಿಯರು ರಂಗೋಲಿ ಬಿಡಿಸುವುದರ ಮೂಲಕ ಕರಗ ಸ್ವಾಗತಕ್ಕೆ ಅಣಿಗೊಳಿಸಿದ್ದರು. ಮಹಿಳೆಯುರು, ಮಕ್ಕಳು ಸೇರಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಮನೆ ಮುಂಭಾಗದಲ್ಲಿ ಕರಗ ಸ್ವಾಗತಕ್ಕೆ ಶ್ರದ್ಧಾಭಕ್ತಿಯಿಂದ ಸೇರಿದ್ದರು.
ಗಣ್ಯರ ಉಪಸ್ಥಿತಿ
ಕರಗ ಪೂಜೆ ವೇಳೆ ಪಂಪಿನಕೆರೆಯಲ್ಲಿ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ಜಿ. ಬೋಪಯ್ಯ, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಮಡಿಕೇರಿ ಶಾಸಕರು, ಮಡಿಕೇರಿ ನಗರ ದಸರಾ ಸಮಿತಿ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಕಾರ್ಯಾಧ್ಯಕ್ಷ ಕೆ.ಎಸ್. ರಮೇಶ್, ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ, ದಶಮಂಟಪ ಸಮಿತಿ ಅಧ್ಯಕ್ಷ ಮನು ಮಂಜುನಾಥ್, ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ, ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಎಂ.ಎ. ಅಯ್ಯಪ್ಪ, ಪೌರಾಯುಕ್ತ ವಿಜಯ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ ಮತ್ತಿತರರು ಇದ್ದರು.