

ಮಡಿಕೇರಿ: ಮಡಿಕೇರಿ ದಸರಾ ಜನೋತ್ಸವದಲ್ಲಿ ಪ್ರಮುಖ ಪಾತ್ರ ವಹಿಸಿರುವ ೪ ಶಕ್ತಿ ದೇವತೆಗಳ ಕರಗ ದೇವಾಲಯಗಳಿಗೆ ದಶಮಂಟಪಗಳಿಗೆ ನೀಡು ವಷ್ಟೇ ಅನುದಾನ ನೀಡಬೇಕೆಂದು ಶ್ರೀಕಂಚಿ ಕಾಮಾಕ್ಷಿಯಮ್ಮ ದೇವಾಲಯ ಸಮಿತಿು ಅಧ್ಯಕ್ಷ ಜಿ.ವಿ. ರವಿಕುಮಾರ್ ಒತ್ತಾಯಿಸಿದ್ದಾರೆ.
ಇಂದು ಎಲ್ಲಾ ವಸ್ತುಗಳ ಬೆಲೆ ದುಬಾರಿಯಾಗಿರುವುದರಿಂದ ಕರಗ ಉತ್ಸವದ ವೆಚ್ಚ ಕೂಡ ಅಧಿಕವಾಗುತ್ತಿದೆ. ಇತಿಹಾಸದ ಕುರುಹಾಗಿ ಉಳಿದುಕೊಂಡಿರುವ ಕರಗ ದೇವಾಯಗಳಿಗೆ ದಶಮಂಟಪಗಳಿಗೆ ಸಮಾನವಾದ ಅನುದಾನ ಹಂಚಿಕೆ ಮಾಡಬೇಕೆಂದು ಮನವಿ ಮಾಡಿ ದ್ದಾರೆ.
ಶ್ರೀ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ಶ್ರೀ ಕಂಚಿ ಕಾಮಾಕ್ಷಿಯಮ್ಮ, ಶ್ರೀ ದಂಡಿನ ಮಾರಿಯಮ್ಮ ಹಾಗೂ ಶ್ರೀ ಕೋಟೆ ಮಾರಿಯಮ್ಮ ಕರಗ ಉತ್ಸವಗಳಿಂದಲೇ ದಸರಾ ಧಾರ್ಮಿಕ ಆಚರಣೆ ಕಳೆಕಟ್ಟುತ್ತವೆ. ಅಲ್ಲದೆ ಕರಗಗಳ ನಗರ ಸಂಚಾರ ಮತ್ತು ವಿಶೇಷ ಪೂಜೆಗೆ ತನ್ನದೇ ಆದ ಇತಿಹಾಸ ಇದೆ. ಕರಗಗಳ ಮೂಲಕವೇ ಆರಂಭವಾದ ದಸರಾ ಮಹೋತ್ಸವ ಇದೀಗ ದಶಮಂಟಪಗಳ ಆಕರ್ಷಣೆಯೆಡೆಗೆ ಸಾಗಿದೆ.
೪ ಕರಗಗಳು ನಗರ ಸಂಚಾರ ಮಾಡುವುದಲ್ಲದೆ, ಈ ದೇವಾಯಗಳಲ್ಲಿ ದಶ ದಿನಗಳ ಕಾಲ ವಿಶೇಷ ಅಲಂಕಾರ ಮತ್ತು ಪೂಜೆ ನಡೆಯು ತ್ತವೆ. ದೇವಾಲಯಗಳಿಗೆ ಸುಣ್ಣ ಬಣ್ಣ ಬಳಿಯುವುದು, ವಿದ್ಯುತ್ ದೀಪಾಲಂಕಾರ, ಹೂವಿನ ಅಲಂಕಾರ, ವಾದ್ಯ ವೃಂದ, ಕರಗಗಳಿಗೆ ಹೂವು ಮತ್ತಿತರ ಅಲಂಕಾರ ಸೇರಿದಂತೆ ೫ ಲಕ್ಷ ರೂ. ವೆಚ್ಚವಾಗುತ್ತಿದೆ.
ವರ್ಷದಿಂದ ವರ್ಷಕ್ಕೆ ಖರ್ಚು ಅಧಿಕವಾಗುತ್ತಿದ್ದು, ಆರ್ಥಿಕ ಸಂಕಷ್ಟದ ನಡುವೆ ಸಾರ್ವಜನಿಕರಿಂದ ವಂತಿಗೆ ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ದೇವಾಲಯ ಸಮಿತಿಗಳು ಸರ್ಕಾರದ ಅನುದಾನವನ್ನೇ ಅವಲಂಬಿಸಿದ್ದು, ದಶಮಂಟಪಗಳಿಗೆ ನೀಡುವಷ್ಟೇ ಅನುದಾವನ್ನು ಕರಗ ದೇವಾಲಯಗಳಿಗೂ ನೀಡಬೇಕೆಂದು ರವಿಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.