

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಜನೋತ್ಸವ ಮಡಿಕೇರಿ ದಸರಾ ಸಂದರ್ಭ ದಸರಾ ಸಾಂಸ್ಕೃತಿಕ ಸಮಿತಿಯಿಂದ ಅಕ್ಟೋಬರ್ ೨ ರಂದು ಕೊಡಗು ಜಿಲ್ಲಾ ಜಾನಪದ ಪರಿಷತ್ ಸಹಯೋಗದಲ್ಲಿ ಜಾನಪದ ದಸರಾ ಉತ್ಸವ ಆಯೋಜಿಸಲಾಗಿದೆ. ಈ ಸಂದರ್ಭ ಜಿಲ್ಲೆಯ ಜಾನಪದ ಕಲಾತಂಡಗಳಿಂದ ಪ್ರದರ್ಶನ, ಕ್ರೀಡೆ ಹಾಗೂ ವಸ್ತುಪ್ರದರ್ಶನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಕೊಡಗು ಜಿಲ್ಲಾ ಜಾನಪ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಹಾಗೂ ಉತ್ಸವ ಸಂಚಾಲಕ ಎಸ್.ಐ. ಮುನೀರ್ ಅಹ್ಮದ್ ಈ ಕುರಿತಾಗಿ ಜಂಟಿಯಾಗಿ ಮಾಹಿತಿ ನೀಡಿದ್ದಾರೆ.
ಮಡಿಕೇರಿ ದಸರಾದಲ್ಲಿ ೨ನೇ ಬಾರಿ ಜಾನಪದ ದಸರಾ ಉತ್ಸವ ಆಯೋಜಿತವಾಗಿದೆ. ಅಕ್ಟೋಬರ್ ೨ ರಂದು ಬೆಳಗ್ಗೆ ೧೦ ಗಂಟೆಯಿಂದ ಮಧ್ಯಾಹ್ನ ೨ ಗಂಟೆಯವರೆಗೆ ಜಾನಪದ ಉತ್ಸವ ನಡೆಯಲಿದೆ. ರಾತ್ರಿ ೭ ಗಂಟೆಯಿಂದ ೧೦ ಗಂಟೆಯವರೆಗೆ ವೈವಿಧ್ಯಮಯ ಜಾನಪದ ಕಲಾ ಪ್ರದರ್ಶನ ಆಯೋಜಿತವಾಗಿದೆ.
ಜಿಲ್ಲೆಯ ಜಾನಪದ ತಂಡಗಳಿಂದ ಕಲಾ ಪ್ರದರ್ಶನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಸಮೂಹ ಜಾನಪದ ಗಾಯನ, ಸಮೂಹ ಜಾನಪದ ನತ್ಯ ಪ್ರದರ್ಶನ ನೀಡಲಿಚ್ಚಿಸುವ ತಂಡಗಳು ಸೆ. ೨೨ ರೊಳಗಾಗಿ ತಮ್ಮ ಅರ್ಜಿಯನ್ನು ಸಂಚಾಲಕರು, ಮಡಿಕೇರಿ ಜಾನಪದ ದಸರಾ ಉತ್ಸವ , ಕೇರಾಫ್ ಶಕ್ತಿ ದಿನಪತ್ರಿಕೆ, ಕೈಗಾರಿಕಾ ಬಡಾವಣೆ, ಮಡಿಕೇರಿ -೫೭೧೨೦೧ ಇಲ್ಲಿಗೆ ಕಳುಹಿಸಬೇಕು. ತಾವು ನೀಡುವ ಕಾರ್ಯಕ್ರಮದ ಪ್ರಾಕಾರ, ಕಾರ್ಯಕ್ರಮದ ಅವಧಿ, ಮೊಬೈಲ್ ಸಂಖ್ಯೆ ನಮೂದಿಸಿರಬೇಕು. ಹೆಚ್ಚಿನ ಮಾಹಿತಿಗೆ ಮುನೀರ್ ಅಹ್ಮದ್ ( ೯೮೮೬೧೮೧೬೧೩) ಅವರನ್ನು ಸಂಪರ್ಕಿಸಬಹುದು.
ಜಾನಪದ ಕ್ರೀಡೆ
ವೈವಿಧ್ಯಮಯ ಜಾನಪದ ಕ್ರೀಡೆಗಳನ್ನು ವಿದ್ಯಾರ್ಥಿ ವಿಭಾಗ (ಪ್ರಾಥಮಿಕ, ಪ್ರೌಢ ಮತ್ತು ಪಿಯು ವಿಭಾಗ) ಹಾಗೂ ಸಾರ್ವಜನಿಕ ವಿಭಾಗ ದಲ್ಲಿ ಆಯೋಜಿಸಲ್ಪಟ್ಟಿದೆ. ಚಿನ್ನಿದಾಂಡು, ಚನ್ನಮಣೆ, ಲಗೋರಿ, ಬುಗುರಿಯಾಟ, ಗೋಲಿಯಾಟ, ಹಗ್ಗ ಜಗ್ಗಾಟ, ಗೋಣಿಚೀಲ ಕಾಲಿಗೆ ಕಟ್ಟಿ ಓಡುವುದು ಈ ಕ್ರೀಡೆಗಳಲ್ಲಿ ಸ್ಪರ್ಧೆ ಆಯೋಜಿತವಾಗಿದೆ. ಕ್ರೀಡೆಯಲ್ಲಿ ಪಾಲ್ಗೊಳ್ಳಲು ಇಚ್ಚಿಸುವವರು ನೋಂದಾಯಿಸಲು ಮತ್ತು ಹೆಚ್ಚಿನ ವಿವರಗಳಿಗೆ ಸಿದ್ದರಾಜು (೯೪೪೯೪೦೫೬೦೯), ಬೋಪಣ್ಣ (೯೧೧೦೮೭೪೨೪೪) ಅವರನ್ನು ಸಂಪರ್ಕಿಸಬಹುದು.
ಜಾನಪದ ವಸ್ತು ಪ್ರದರ್ಶನ
ಜಿಲ್ಲೆಯ ಜನ ಸಂಗ್ರಹಿಸಿರುವ ಜಾನಪದ ಪರಿಕರಗಳ ಪ್ರದರ್ಶನಕ್ಕೂ ಅವಕಾಶ ಕಲ್ಪಿಸಲಾಗಿದೆ. ಪುರಾತನ ಕಾಲದ ಅಪೂರ್ವ ಜಾನಪದೀಯ ಮೌಲ್ಯವಿರುವ ಪರಿಕರ, ವಸ್ತುಗಳನ್ನು ಅ.೨ ರಂದು ಬೆಳಗ್ಗೆ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಆಯೋಜಿತ ಜಾನಪದ ದಸರಾ ಸಂದರ್ಭ ಪ್ರದರ್ಶನಕ್ಕೆ ಇರಿಸಬಹುದು. ವಸ್ತು ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಇಚ್ಚಿಸಿರುವವರು ಹೆಸರು ನೋಂದಾಯಿಸಲು ಮತ್ತು ಹೆಚ್ಚಿನ ಮಾಹಿತಿಗೆ ಹರೀಶ್ ಕಿಗ್ಗಾಲು (೭೦೧೯೦೯೫೩೮೭) ಅವರನ್ನು ಸಂಪರ್ಕಿಸಬಹುದು.