ಮಡಿಕೇರಿ ದಸರಾ ಅನುದಾನ ಹಂಚಿಕೆ ಬಿಕ್ಕಟ್ಟು

8mdks2
Published on

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಜನೋತ್ಸವ ಮಡಿಕೇರಿ ದಸರಾ ಉತ್ಸವಕ್ಕೆ ರಾಜ್ಯ ಸರ್ಕಾರ ೧ ಕೋಟಿ ರೂಪಾಯಿ ಮಂಜೂರು ಮಾಡಿದೆ. ಈ ಅನುದಾನ ಹಂಚಿಕೆಗೆ ಸಂಬಂಧಿಸಿದ್ದಂತೆ ಬಿಕ್ಕಟ್ಟು ಮೂಡಿದೆ. ದಶ ಮಂಟಪ- ನಾಲ್ಕು ಕರಗಗಳಿಗೆ ಹೆಚ್ಚು ಅನುದಾನ ನೀಡಬೇಕೆಂಬ ಬೇಡಿಕೆ ಪ್ರಬಲವಾಗಿ ವ್ಯಕ್ತ ವಾಗುತ್ತಿದೆ. ಏತನ್ಮಧ್ಯೆ, ಘೋಷಿತ ಅನುದಾನವೂ ಕಡಿತವಾಗುವ ಸಾಧ್ಯತೆ ಕಂಡು ಬರುತ್ತಿದೆ.

ಮಂಟಪಗಳಿಗೆ ತಲಾ ೩.೩೦ ಲಕ್ಷ ಹಾಗೂ ಕರಗಗಳಿಗೆ ೨ ಲಕ್ಷ ರೂ. ನೀಡಲಾಗುವುದೆಂದು ಮಡಿಕೇರಿ ನಗರ ದಸರಾ ಸಮಿತಿ ಕಾರ್ಯಾಧ್ಯಕ್ಷ ಕೆ.ಎಸ್. ರಮೇಶ್ ಸಭೆಯಲ್ಲಿ ಘೋಷಿಸಿದ್ದರು. ಮಂಟಪ- ಕರಗಗಳಿಗೆ ಒಟ್ಟು ೬೦ ಲಕ್ಷ ರೂ. ನೀಡಬೇಕೆಂದು ದಶಮಂಟಪ ಸಮಿತಿ ಅಧ್ಯಕ್ಷ ಮನು ಮಂಜುನಾಥ್ ಪಟ್ಟುಹಿಡಿದಿದ್ದರು.

ಕಳೆದ ವರ್ಷ ರಾಜ್ಯ ಸರ್ಕಾರ ಮಡಿಕೇರಿ ದಸರಕ್ಕೆ ಬಿಡುಗಡೆ ಮಾಡಿದ್ದ ೧ ಕೋಟಿ ರೂ. ಅನುದಾನದ ಪೈಕಿ ಶಾಸಕರ ಸೂಚನೆಯನ್ವಯ ೭೫ ಲಕ್ಷ ರೂ. ಅನ್ನು ಗಾಂಧಿ ಮೈದಾನದಲ್ಲಿ ಸಭಾಂಗಣ ನಿರ್ಮಾಣಕ್ಕೆ ವಿನಿಯೋಗಿಸಲಾಗುತ್ತಿದೆ. ಪ್ರಸ್ತುತ ಕಾಮಗಾರಿ ನಡೆಯುತ್ತಿದ್ದು, ಸೆ.೨೫ ರೊಳಗೆ ಸಭಾಂಗಣ ನಿರ್ಮಾಣ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಬಯಲು ರಂಗಮಂದಿರದಲ್ಲಿ ವೇದಿಕೆ ನಿರ್ಮಿಸಲು ಈ ವರ್ಷ ರಾಜ್ಯ ಸರ್ಕಾರ ಮಂಜೂರು ಮಾಡಿರುವ ೧ ಕೋಟಿ ರೂ. ಅನುದಾನದಲ್ಲಿ ೨೫ ಲಕ್ಷ ರೂ. ವಿನಿಯೋಗಿಸಲು ಶಾಸಕರು ನಿರ್ಧರಿಸಿದ್ದಾರೆ. ೭೫ ಲಕ್ಷ ರೂ. ದಸರಕ್ಕೆ ವಿನಿಯೋಗಿಸುವಂತೆ ಶಾಸಕರು ಈಗಾಗಲೇ ಕಾರ್ಯಾ ಧ್ಯಕ್ಷರಿಗೆ ಸೂಚನೆ ನೀಡಿದ್ದಾರೆ. ಮಂಟಪಗಳಿಗೆ ೨ ಲಕ್ಷ ರೂ. ನೀಡುವಂತೆ ಸೂಚನೆ ನೀಡಿದ್ದಾರೆ.

ಹೆಚ್ಚಿನ ಅನುದಾನದ ನಿರೀಕ್ಷೆಯಲ್ಲಿದ್ದ ಮಂಟಪಗಳಿಗೆ ಇದು ಅನುದಾನ ಕಡಿತ ವಿಚಾರ ಆಘಾತಕಾರಿ ಸುದ್ದಿಯಾಗಲಿದೆ. ಶುಕ್ರವಾರ ದಸರಾ ಸಮಿತಿ ಪ್ರಮುಖರು ಸೇರಿ ಚರ್ಚಿಸುತ್ತೇವೆ. ಇದರೊಂದಿಗೆ ಶಾಸಕರನ್ನು ಖುದ್ದು ಭೇಟಿ ಮಾಡಿ ಅನುದಾನ ಹಂಚಿಕೆ ಕುರಿತಂತೆ ಚರ್ಚಿಸ ಲಾಗುವುದೆಂದು ಮಡಿಕೇರಿ ನಗರ ದಸರಾ ಸಮಿತಿ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.

**
ಮಂಟಪಗಳಿಗೆ ೩.೫೦ ಲಕ್ಷ, ಕರಗಗಳಿಗೆ ೨.೨೫ ಲಕ್ಷ ರೂ. ನೀಡುವ ಭರವಸೆಯನ್ನು ಮಡಿಕೇರಿ ನಗರ ದಸರಾ ಸಮಿತಿ ಕಾರ್ಯಾಧ್ಯಕ್ಷ ಕೆ.ಎಸ್. ರಮೇಶ್ ನೀಡಿದ್ದಾರೆ. ಕಲಾಕೃತಿ ಸಿದ್ಧ ಪಡಿಸಲು ಹೆಚ್ಚು ಹಣ ಖರ್ಚಾಗುತ್ತದೆ. ಅನುದಾನ ಕಡಿತ ಮಾಡಿದ್ದಲ್ಲಿ ಪ್ರತಿಭಟನೆ ಮಾಡ ಬೇಕಾಗುತ್ತದೆ. ಮನು ಮಂಜುನಾಥ್, ಅಧ್ಯಕ್ಷರು, ದಶಮಂಟಪ ಸಮಿತಿ.

**
ರಾಜ್ಯ ಸರ್ಕಾರ ಮಂಜೂರು ಮಾಡಿರುವ ೧ ಕೋಟಿ ರೂ. ಅನುದಾನದಲ್ಲಿ ೨೫ ಲಕ್ಷ ರೂ. ವೇದಿಕೆ ನಿರ್ಮಾಣಕ್ಕೆ ನೀಡಬೇಕೆಂದು ಶಾಸಕರು ಹೇಳಿದ್ದಾರೆ. ೭೫ ಲಕ್ಷ ರೂ. ಅನುದಾನ ಹಂಚಿಕೆ ಮಾಡಬೇಕಾಗಿದ್ದು, ಈ ಬಗ್ಗೆ ಶಾಸಕರೊಂದಿಗೆ ಚರ್ಚಿಸಲಾಗುವುದು. ಕೆ.ಎಸ್. ರಮೇಶ್, ಕಾರ್ಯಾಧ್ಯಕ್ಷರು, ಮಡಿಕೇರಿ ನಗರ ದಸರಾ ಸಮಿತಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net