ಮಡಿಕೇರಿ ದಸರಕ್ಕೆ ೨ ಕೋಟಿ ರೂ. ಬಿಡುಗಡೆಗೆ ಆಗ್ರಹ

MANTHAR GOWDA
Published on

ಮಡಿಕೇರಿ: ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವಕ್ಕೆ ರಾಜ್ಯ ಸರ್ಕಾರ ೨ ಕೋಟಿ ರೂ.ಬಿಡುಗಡೆ ಮಾಡಬೇಕೆಂದು ಕಾಂಗ್ರೆಸ್ ಮುಖಂಡ ಡಾ.ಮಂಥರ್ ಗೌಡ ಒತ್ತಾಯಿಸಿದ್ದಾರೆ.

ಬೆಲೆ ಏರಿಕೆ ಮತ್ತು ಜಿಎಸ್‌ಟಿ ಹೊರೆ ನಡುವೆ ಹಬ್ಬ ಆಚರಿಸಬೇಕಾದ ದುಸ್ಥಿತಿ ಬಂದೊದಗಿದ್ದು, ಪ್ರಸ್ತುತ ಬಿಡುಗಡೆ ಮಾಡಿರುವ ೧ ಕೋಟಿ ರೂ. ಅತ್ಯಂತ ಅಲ್ಪ ಮೊತ್ತವಾಗಿದೆ ಎಂದು ಹೇಳಿಕೆಯಲ್ಲಿ ಟೀಕಿಸಿದ್ದಾರೆ.

ಪ್ರವಾಸೋದ್ಯಮ ಮೂಲಕ ಗಮನ ಸೆಳೆದು ಅನೇಕರಿಗೆ ಉದ್ಯೋಗ ಕಲ್ಪಿಸಿಕೊಟ್ಟಿರುವ ಮಡಿಕೇರಿ ನಗರಕ್ಕೆ ಮತ್ತಷ್ಟು ಪ್ರವಾಸಿಗರನ್ನು ಆಕರ್ಷಿ ಸಲು ಮತ್ತು ಐತಿಹಾಸಿಕ ದಸರಾ ಮಹೋತ್ಸವ ಅದ್ಧೂರಿಯಾಗಿ ಆಚರಿಸಲು ಮತ್ತಷ್ಟು ಅನುದಾನದ ಅಗತ್ಯವಿದೆ. ಆರ್ಥಿಕ ಹೊಡೆತದಿಂದ ಜನರು ಕೂಡ ಕಷ್ಟದಲ್ಲಿರುವುದರಿಂದ ದಸರಾ ಸಮಿತಿಗಳು ಸಾರ್ವಜನಿಕವಾಗಿ ಹಣ ಸಂಗ್ರಹಿಸಿ ದಸರಾ ಹಬ್ಬ ಆಚರಿಸಲು ಅಸಾಧ್ಯವಾಗಿದ್ದು, ಸರ್ಕಾರವೇ ದಸರಾ ಸಮಿತಿಗಳಿಗೆ ಹಣ ನೀಡಬೇಕೆಂದು ಒತ್ತಾಯಿಸಿದರು.

ಕೆಲವು ವರ್ಷಗಳಿಂದ ಅತಿವೃಷ್ಟ್ಟಿ ಮತ್ತು ಕೋವಿಡ್ ಕಾರಣದಿಂದ ಮಡಿಕೇರಿ ದಸರಾ ಸೀಮಿತ ವೆಚ್ಚದಲ್ಲಿ ನಡೆಸಲಾಗಿತ್ತು. ಆದರೆ, ಇದೀಗ ಪರಿಸ್ಥಿತಿ ಸುಧಾರಿಸಿದ್ದು, ಜನ ಅದ್ಧೂರಿ ದಸರಾ ಆಚರಣೆ ನಿರೀಕ್ಷಿಸುತ್ತಿದ್ದಾರೆ. ಶಾಸಕರು ಈ ಬಗ್ಗೆ ಕಾಳಜಿ ವಹಿಸಿ ಹೆಚ್ಚುವರಿ ೧ ಕೋಟಿ ರೂ. ಬಿಡುಗಡೆಗೆ ಸರ್ಕಾರದ ಮೇಲೆ ಒತ್ತಡ ಹೇರಿ ೨ ಕೋಟಿ ರೂ. ದೊರೆಯುವಂತೆ ನೋಡಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ದಸರಾ ಆಚರಣೆಗಾಗಿ ಸರ್ಕಾರದಿಂದ ಬಿಡುಗಡೆಯಾಗುವ ಅನುದಾವನ್ನು ದಸರಾಕ್ಕಷ್ಟೇ ಖರ್ಚು ಮಾಡಬೇಕು ಹೊರತು ಇತರ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಬಾರದು. ರಸ್ತೆ, ಚರಂಡಿ, ತಡೆಗೋಡೆ, ಕಾಂಕ್ರೀಟ್ ಗ್ಯಾಲರಿ ನಿರ್ಮಾಣಕ್ಕೆ ನಗರಸಭೆಯಲ್ಲಿ ಪ್ರತ್ಯೇಕ ಅನುದಾನ ಇರುವುದರಿಂದ ದಸರಾ ಅನುದಾನ ಬಳಸುವುದು ಸರಿಯಲ್ಲ. ಹಾಗೊಂದು ವೇಳೆ ಬಳಸಿದರೆ ಅದು ದಸರಾ ಸಮಿತಿಗಳಿಗೆ ಮಾಡುವ ಅನ್ಯಾಯವಾಗಲಿದೆ. ಬೆಲೆ ಏರಿಕೆ ಹಿನ್ನೆಲೆ ದಶಮಂಟಪಗಳು ಮತ್ತು ಕರಗಗಳಿಗೆ ಅಧಿಕ ಹಣದ ಅಗತ್ಯತೆ ಇರುತ್ತದೆ. ಸತತ ೧೦ ದಿನಗಳ ಕಾಲ ವೈಭವದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ದೊಡ್ಡ ಮೊತ್ತದ ಆರ್ಥಿಕ ಶಕ್ತಿ ಬೇಕಾಗುತ್ತದೆ ಎಂದರು.

ಜಿಲ್ಲೆಯ ಶಾಸಕರು ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದು ಹೆಚ್ಚುವರಿ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಮತ್ತು ಪ್ರತಿವರ್ಷ ಬಜೆಟ್‌ನಲ್ಲಿ ೨ ಕೋಟಿ ರೂ. ಮೀಸಲಿಡಬೇಕು. ಕೊಡಗಿನಲ್ಲಿ ಉದ್ಭವಿಸುವ ಕಾವೇರಿ ನದಿಯಿಂದ ರಾಜ್ಯದ ಆರ್ಥಿಕ ಬಲ ಹೆಚ್ಚುತ್ತಿದೆ. ನದಿ ಪ್ರವಾಹದಿಂದ ಅನೇಕ ಕಷ್ಟನಷ್ಟ ನಡುವೆ ಜಿಲ್ಲೆಯ ಜನ ಜೀವನ ಸಾಗಿಸುತ್ತಿದ್ದಾರೆ. ವರ್ಷಕ್ಕೊಂದು ದಸರಾ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಮಡಿಕೇರಿಗೆ ಹೆಚ್ಚಿನ ಅನುದಾನ ನೀಡುವುದರಿಂದ ಸರ್ಕಾರದ ಬೊಕ್ಕಸಕ್ಕೆ ಯಾವುದೇ ನಷ್ಟವಾಗುವು ದಿಲ್ಲವೆಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net