ಗಾಂಧಿ ಮೈದಾನದತ್ತ ಸುಳಿಯದ ಪ್ರೇಕ್ಷಕ ಸಮೂಹ

28mdks5 - Copy
Published on

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ನಾಲ್ಕು ವರ್ಷ ಬಳಿಕ ಜನೋತ್ಸವ ಮಡಿಕೇರಿ ದಸರಾ ಅದ್ದೂರಿಯಾಗಿ ಆಯೋಜಿಸಲ್ಪಟ್ಟಿದೆ. ಹೀಗಿದ್ದರೂ, ಮೊದಲ ದಿನದ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಲು ಪ್ರೇಕ್ಷಕರು ನಿರೀಕ್ಷಿತ ಸಂಖ್ಯೆಯಲ್ಲಿ ಗಾಂಧಿ ಮೈದಾನದತ್ತ ಆಗಮಿಸಲಿಲ್ಲ. ಇದು ಮಡಿಕೇರಿ ನಗರ ದಸರಾ ಸಮಿತಿ ಪ್ರಮುಖರಲ್ಲಿ ಬೇಸರವುಂಟು ಮಾಡಿತು.

ಪ್ರಕೃತಿ ವಿಕೋಪ, ಕೋವಿಡ್ ಹಿನ್ನೆಲೆಯಲ್ಲಿ ಮಡಿಕೇರಿ ದಸರಾ ಸಂಭ್ರಮ ಕಳೆಗುಂದಿತ್ತು. ಕಳೆದ ವರ್ಷ ಧಾರ್ಮಿಕ ಕೈಂಕರ್ಯಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಕೋವಿಡ್ ನಿಬರ್ಂಧದ ನಡುವೆಯೂ ಹೆಚ್ಚಿನ ಸಂಖ್ಯೆಯಲ್ಲಿ ವಿಜಯದಶಮಿಯಂದು ಜನ ಮಡಿಕೇರಿಯಲ್ಲಿ ಸೇರಿದ್ದರು.

ಗಾಂಧಿ ಮೈದಾನದ ಬಯಲು ರಂಗ ಮಂದಿರದಲ್ಲಿ ನಿರ್ಮಿಸಿರುವ ಭವ್ಯ ವೇದಿಕೆಯಲ್ಲಿ ಮಂಗಳವಾರ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಂಜೆ ೬.೩೦ ಕ್ಕೆ ಪ್ರಾರಂಭವಾಗಬೇಕಾಗಿದ್ದ ಸಭಾ ಕಾರ್ಯಕ್ರಮ ೭.೩೦ ಕ್ಕೆ ಪ್ರಾರಂಭವಾಯಿತು. ೮.೨೦ ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರಾರಂಭಗೊಂಡಿತು.

ಕುಶಶಾಲನಗರದ ಕುಂದನ ನೃತ್ಯಾಲಯ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ ಖ್ಯಾತಿಯ ಚೈತಾಲಿ ಚಿಲಾತ ಹಾಗೂ ವಿರಾಜಪೇಟೆಯ ನಾಟ್ಯ ಮಯೂರಿ ನೃತ್ಯ ಶಾಲೆಯ ಕಲಾವಿದರು ವೈವಿಧ್ಯಮ ಭರತನಾಟ್ಯ ಪ್ರದರ್ಶಿಸಿದರು. ವಿಕಲಚೇತನರಾಗಿರುವ ಹುಬ್ಬಳ್ಳಿಯ ಚೈತಾಲಿ ಚೆಲಾತ, ಸಭಾಂಗಣದಲ್ಲಿದ್ದ ತಾಯಿ ನೀಡುವ ಮಾರ್ಗದರ್ಶನಕ್ಕೆ ತಕ್ಕಂತೆ ಭರತನಾಟ್ಯ ಮಾಡುವುದರ ಮೂಲಕ ಪ್ರೇಕ್ಷಕರ ಮನಗೆದ್ದರು.

ಕೊಡಗಿನ ಹಿರಿಯ ಗಾಯಕರಾದ ರವಿ ಭೂತನಕಾಡು ಹಾಗೂ ಬಿ.ಎ. ಗಣೇಶ್ ತಮ್ಮ ಕಂಠ ಮಾಧುರ‌್ಯದ ಮೂಲಕ ಕಡಿಮೆ ಸಂಖ್ಯೆಯಲ್ಲಿ ದ್ದ ಪ್ರೇಕ್ಷಕರನ್ನು ರಂಜಿಸಿದರು. ರಾತ್ರಿ ೧೦.೪೫ ರ ಹೊತ್ತಿಗೆ ಮೊದಲ ದಿನದ ಕಾರ್ಯಕ್ರಮ ಮುಕ್ತಾಯಗೊಂಡಿತು. ಸ್ಥಳೀಯ ಸುದ್ದಿ ವಾಹಿನಿ ಗಳು ಸಾಂಸ್ಕೃತಿಕ ಕಾರ್ಯಕ್ರಮ ನೇರ ಪ್ರಸಾರ ಮಾಡದರಿಂದ ಮನೆಯಲ್ಲಿ ಕೂತು ಕಾರ್ಯಕ್ರಮ ವೀಕ್ಷಿಸುವ ಅವಕಾಶವೂ ಸಿಗಲಿಲ್ಲ.
ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ್ ತಮ್ಮ ಪತ್ನಿ, ಪುತ್ರಿ, ಪುತ್ರನೊಂದಿಗೆ ಮೊದಲ ದಿನದ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿದರು. ಉದ್ಘಾಟನಾ ಸಮಾರಂಭ ಮುಗಿದ ಬಳಿಕ ಮನೆಗೆ ತೆರಳಿದ ಜಿಲ್ಲಾಧಿಕಾರಿ ತಮ್ಮ ಕುಟುಂಬ ಸದಸ್ಯರೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಲು ಗಾಂಧಿ ಮೈದಾನಕ್ಕೆ ಆಗಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net