

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ನಾಲ್ಕು ವರ್ಷ ಬಳಿಕ ಅದ್ದೂರಿಯಾಗಿ ಆಯೋಜಿಸಲಾಗಿದ್ದ ಜನೋತ್ಸವ ಮಡಿಕೇರಿ ದಸರಾ ಶುಕ್ರವಾರ ಮುಂಜಾನೆ ಬನ್ನಿ ಕಡಿಯುವುದರ ಮೂಲಕ ಸಂಪನ್ನಗೊಂಡಿದೆ. ಪಂಪಿನಕೆರೆಯಲ್ಲಿ ನಾಲ್ಕು ಶಕ್ತಿ ದೇವತೆಗಳ ಕರಗ ಪೂಜೆಯೊಂದಿಗೆ ಪ್ರಾರಂಭವಾದ ಜನೋತ್ಸವ ಗುರುವಾರ ರಾತ್ರಿ ದಶಮಂಟಪಗಳ ಶೋಭಾಯಾತ್ರೆ ಮೂಲಕ ಸಂಭ್ರಮ ಮುಗಿಲು ಮುಟ್ಟುವಂತೆ ಮಾಡಿತು.
ಪ್ರಕೃತಿ ವಿಕೋಪ, ಕೋವಿಡ್ ಹಿನ್ನೆಲೆಯಲ್ಲಿ ೨೦೧೮ ರಿಂದ ಸಡಗರ- ಸಂಭ್ರಮದೊಂದಿಗೆ ಜನೋತ್ಸವ ಆಯೋಜಿಸಲು ಸಾಧ್ಯವಾಗಿರಲಿಲ್ಲ. ಗತವೈಭವಕ್ಕೆ ಮರಳುವ ರೀತಿ ಜನೋತ್ಸವ ಆಯೋಜಿಸಲಾಗಿತ್ತು. ಹಲವು ಗೊಂದಲ, ಭಿನ್ನಾಭಿಪ್ರಾಯ ನಡುವೆಯೂ ಜನೋತ್ಸವದಲ್ಲಿ ಜನ ಸಂಭ್ರಮಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಂಬಂಧಿಸಿದ್ದಂತೆ ಒಂದಿಷ್ಟು ಗೊಂದಲ ಏರ್ಪಟ್ಟಿತ್ತು. ನಿರೂಪಕರ ಎಡವಟ್ಟಿನ ಬಗ್ಗೆ ಕಲಾವಿದರಿಂದ ಆಕ್ಷೇಪವೂ ವ್ಯಕ್ತವಾಯಿತು. ಸಾಂಸ್ಕೃತಿಕ ಸಮಿತಿ ಜವಾಬ್ದಾರಿ ಹೊತ್ತುಕೊಂಡ ಕೆಲವರು ಸ್ವಾರ್ಥ ಮನೋಭಾವ ಪ್ರದರ್ಶಿಸಿದ್ದು ಒಂದಿಷ್ಟು ಗೊಂದಲಕ್ಕೆ ಕಾರಣವಾಯಿತ್ತೆಂಬ ಟೀಕೆ ವ್ಯಕ್ತವಾಗಿದೆ.
ನವರಾತ್ರಿ ಉತ್ಸವದ ಪ್ರತಿನಿತ್ಯ ಸಭಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಡಿಕೇರಿ ನಗರ ದಸರಾ ಸಮಿತಿ ಪ್ರಮುಖರು ನಿರ್ಧರಿಸಿ ಆಹ್ವಾನ ಪತ್ರದಲ್ಲಿ ಗಣ್ಯರ ಹೆಸರು ಹಾಕಿದ್ದರು. ಆದರೆ, ಸಾಕಷ್ಟು ಗಣ್ಯರಿಗೆ ಕಾರ್ಯಕ್ರಮದ ಆಹ್ವಾನವನ್ನೇ ನೀಡಿರಲಿಲ್ಲ. ನಮಗೆ ಕಾರ್ಯ ಕ್ರಮದ ಅರಿವು ಇಲ್ಲದೆ ಮೇಲೆ ಹೋಗುವುದು ಹೇಗೆಂದು ಕೇಳುತ್ತಿದ್ದರು.
ದಶಮಂಟಪ ಶೋಭಾಯಾತ್ರೆ ವೀಕ್ಷಿಸಲು ೨ ರಿಂದ ೩ ಲಕ್ಷ ಜನ ಆಗಮಿಸುತ್ತಾರೆಂಬ ನಿರೀಕ್ಷೆಯಲ್ಲಿ ಮಡಿಕೇರಿ ನಗರ ದಸರಾ ಸಮಿತಿ ಪ್ರಮುಖರು ಇದ್ದರು. ಆದರೆ, ನಿರೀಕ್ಷಿತ ಜನ ಆಗಮಿಸಿರಲಿಲ್ಲ. ಕಾವೇರಿ ಕಲಾಕ್ಷೇತ್ರ ಮುಂಭಾಗ, ಮಡಿಕೇರಿ ನಗರ ಪೊಲೀಸ್ ಠಾಣೆ ಮುಂಭಾಗ, ಹಳೆಯ ಖಾಸಗಿ ಬಸ್ ನಿಲ್ದಾಣ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮುಂಭಾಗ, ಜನರಲ್ ಕೆ.ಎಸ್. ತಿಮ್ಮಯ್ಯ ವೃತ್ತದಲ್ಲಿ ಜನಸಾಗರ ಸೇರಿತ್ತು.
ಯುವ ದಸರಾ, ಮಹಿಳಾ ದಸರಾ ದಿನ ಮಳೆ ಸುರಿದಿದ್ದರಿಂದ ದಶಮಂಟಪ ಶೋಭಾಯಾತ್ರೆಗೂ ಮಳೆ ಆತಂಕ ಕಾಡಿತ್ತು. ಆದರೆ, ಗುರುವಾರ ಪೂರ್ಣ ಪ್ರಮಾಣದಲ್ಲಿ ಮಳೆ ಬಿಡುವು ನೀಡಿದ್ದರಿಂದ ಶೋಭಾಯಾತ್ರೆಗೆ ಮಳೆ ಅಡ್ಡಿಯಾಗಲಿಲ್ಲ. ಆದರೆ, ಶುಕ್ರವಾರ ಮುಂಜಾನೆ ಸುರಿದ ಮಳೆಯಿಂದ ಒಂದಿಷ್ಟು ಸಮಸ್ಯೆ ಅನುಭವಿಸುವಂತಾಯಿತು.
ಪೀಪಿ ಹಾವಳಿ
ಶೋಭಾಯಾತ್ರೆಯಲ್ಲಿ ಪೀಪಿ ಹಾವಳಿ ಮಿತಿಮೀರಿತ್ತು. ಎಲ್ಲೆಡೆ ಮೊಳಗುತ್ತಿದ್ದ ಪೀಪಿ ಧ್ವನಿ ಸಾಕಷ್ಟು ಜನರಿಗೆ ಕಿರಿಕಿರಿ ಉಂಟು ಮಾಡಿತ್ತು. ದೊಡ್ಡವರು ಕೂಡ ಪೀಪಿ ಖರೀದಿಸಿ, ಮಕ್ಕಳಂತೆ ಊದುತ್ತಾ ಸಾಗುತ್ತಿದ್ದರು. ಪೀಪಿ ಧ್ವನಿಯಿಂದ ಕಿರಿಕಿರಿ ಅನುಭವಿಸಿದವರು ಮುಂದಿನ ವರ್ಷ ಪೀಪಿ ಬ್ಯಾನ್ ಮಾಡಬೇಕೆಂದು ಒತ್ತಾಯಿಸುತ್ತಿದ್ದರು.
ಜನಜಂಗುಳಿ ನಡುವೆ ಪರದಾಟ
ಮಡಿಕೇರಿ ನಗರ ಪೊಲೀಸ್ ಠಾಣೆ ಮುಂಭಾಗದಲ್ಲಿ ಅಪಾರ ಸಂಖ್ಯೆಯಲ್ಲಿ ಜನಸ್ತೋಮ ಸೇರಿತ್ತು. ಇಲ್ಲಿ ಕೋಟೆ ಮಹಾಗಣಪತಿ ದೇವಾಲಯದ ಮಂಟಪ ತೀರ್ಪುಗಾರಿಕೆ ನಡೆಯಿತು. ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದಂತೆ ಜನಜಂಗುಳಿ ನಡುವೆ ಸಿಲುಕಿದವರು ಪರಿತಪಿಸುವಂತಾಯಿತು. ಮಹಿಳೆಯರು, ಮಕ್ಕಳು, ವೃದ್ಧರು ಸೇರಿದ್ದಂತೆ ಸಾಕಷ್ಟು ಜನ ಉಸಿರಾಡಲು ಪರಿತಪಿಸುವಂತಾಗಿತ್ತು. ಕಾಲ್ತುಳಿತಕ್ಕೆ ಸಿಲುಕಿದ ಮಹಿಳೆಯೊಬ್ಬರು ತೀವ್ರ ಅಸ್ವಸ್ತರಾಗಿದ್ದರು. ಪೊಲೀಸರ ಸಹಾಯದಿಂದ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.
ಕ್ರೀಡಾಂಗಣದಲ್ಲಿ ವಾಹನ
ಜನರಲ್ ಕೆ.ಎಸ್. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ವಾಹನ ನಿಲುಗಡೆಗೆ ಅವಕಾಶ ನೀಡಬಾರದೆಂದು ಪ್ರತಿವರ್ಷ ಕ್ರೀಡಾಪಟುಗಳು ಒತ್ತಾಯಿಸುತ್ತಾ ಬಂದಿದ್ದಾರೆ. ವಾಹನ ನಿಲುಗಡೆಗೆ ಜಿಲ್ಲಾಡಳಿತ ಅಧಿಕೃತವಾಗಿ ಗುರುತಿಸಿದ ಸ್ಥಳದಲ್ಲಿ ಜಿಲ್ಲಾ ಕ್ರೀಡಾಂಗಣ ಇರಲಿಲ್ಲ. ಹೀಗಿ ದ್ದರೂ, ಗುರುವಾರ ರಾತ್ರಿ ಶೋಭಾಯಾತ್ರೆ ವೀಕ್ಷಿಸಲು ಆಗಮಿಸಿದವರ ವಾಹನಗಳು ಜಿಲ್ಲಾ ಕ್ರೀಡಾಂಗಣದಲ್ಲಿ ನಿಲ್ಲಿಸಲಾಗಿತ್ತು. ಜಿಲ್ಲಾ ಕ್ರೀಡಾಂಗಣದಲ್ಲಿ ವಾಹನಗಳ ಸಂಭ್ರಮವಿತ್ತೆಂದು ಹಿರಿಯ ಕ್ರೀಡಾಪಟು ಚುಮ್ಮಿ ದೇವಯ್ಯ ವ್ಯಂಗ್ಯವಾಡಿದ್ದಾರೆ.
ಸಂಗೀತ ರಸಸಂಜೆ
ಖ್ಯಾತ ಹಿನ್ನೆಲೆ ಗಾಯಕಿ ಎಚ್.ಜಿ. ಚೈತ್ರ ನೇತೃತ್ವದ ತಂಡದಿಂದ ರಾತ್ರಿ ೧ ಗಂಟೆಯಿಂದ ಶುಕ್ರವಾರ ಮುಂಜಾನೆವರೆಗೆ ಗಾಂಧಿ ಮೈದಾನದಲ್ಲಿ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಿತು. ಅದಕ್ಕೂ ಮುನ್ನ ಬಹುಭಾಷಾ ನಟಿ ಹರ್ಷಿಕಾ ಪೂಣಚ್ಚ ನೇತೃತ್ವದಲ್ಲಿ ನೃತ್ಯ, ಡಿಜೆ ಪ್ರದರ್ಶನ ಗೊಂಡಿತು.
ಮುದ್ರಾ ಸ್ಕೂಲ್ ಆಫ್ ಡ್ಯಾನ್ಸ್ ತಂಡದಿಂದ ನೃತ್ಯ ವೈಭವ, ಯುವ ಗಾಯಕ ಶರಣ್ ಅಯ್ಯಪ್ಪ, ಡಾ.ವೈಷ್ಣವಿ ಕಿಣಿ ಅವರಿಂದ ಸಂಗೀತ ಮಂಜರಿ, ಅನ್ವಿತ ಕುಮಾರ್ ತಂಡದಿಂದ ಗೀತ ಗಾಯನ ನಡೆಯಿತು. ಶರಣ್ ಅಯ್ಯಪ್ಪ ಗಾಯನದ ಮೂಲಕ ಪುನೀತ್ ರಾಜ್‌ಕುಮಾರ್‌ಗೆ ಗೌರವ ಸಲ್ಲಿಸಿದರು. ಈ ವೇಳೆ ಪ್ರೇಕ್ಷಕರು ತಮ್ಮ ಮೊಬೈಲ್ ಟಾರ್ಚ್ ಲೈಟ್ ಆನ್ ಮಾಡಿದ್ದರು.
ಉಸ್ತುವಾರಿ ಶುಭ ಹಾರೈಕೆ
ತಮ್ಮ ಪತ್ನಿ, ಪುತ್ರ, ಪುತ್ರಿಯೊಂದಿಗೆ ಮಧ್ಯರಾತ್ರಿ ಮಡಿಕೇರಿಗೆ ಆಗಮಿಸಿದ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ವಿಜಯದಶಮಿ ಸಭಾ ಕಾರ್ಯಕ್ರಮದಲ್ಲಿ ಕೇವಲ ಶುಭಾ ಹಾರೈಕೆಗೆ ತಮ್ಮ ಭಾಷಣ ಸೀಮಿತಗೊಳಿಸುವುದರ ಮೂಲಕ ಅಚ್ಚರಿ ಮೂಡಿಸಿದರು. ಸಚಿವರ ಹಾದಿ ಯಲ್ಲೇ ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಕೂಡ ಶುಭ ಹಾರೈಸಿದರು.
ಕರ್ನಾಟಕ ಜೀವ ವೈವಿಧ್ಯ ನಿಗಮ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ, ಮಡಿಕೇರಿ ನಗರ ದಸರಾ ಸಮಿತಿ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಮಾತನಾಡಿದರು. ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ, ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಎಂ.ಎ. ಅಯ್ಯಪ್ಪ, ಮಡಿಕೇರಿ ನಗರ ದಸರಾ ಸಮಿತಿ ಉಪಾಧ್ಯಕ್ಷೆ ಸವಿತಾ ರಾಕೇಶ್, ಕಾರ್ಯಾಧ್ಯಕ್ಷ ಕೆ.ಎಸ್. ರಮೇಶ್, ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ, ಖಜಾಂಚಿ ಶ್ವೇತಾ ಪ್ರಶಾಂತ್, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಬಿ.ಎಂ. ಹರೀಶ್ ಮತ್ತಿತರರು ಇದ್ದರು.
೪೦ ತಂಡದ ಕಾರ್ಯಕ್ರಮ
ಜನೋತ್ಸವ ಮಡಿಕೇರಿ ದಸರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ೨೫೦ ತಂಡಗಳು ಸಾಂಸ್ಕೃತಿಕ ಸಮಿತಿಗೆ ಅರ್ಜಿ ಸಲ್ಲಿಸಿದ್ದವು. ಈ ಪೈಕಿ ೪೦ ತಂಡಗಳಿಗೆ ಅವಕಾಶ ನೀಡಲಾಗಿತ್ತು. ಒತ್ತಡದ ನಡುವೆಯೂ ಬಿ.ಎಂ. ಹರೀಶ್ ಅಣ್ವೇಕರ್ ನೇತೃತ್ವದ ಸಾಂಸ್ಕೃತಿಕ ಸಮಿತಿ ಉತ್ತಮ ರೀತಿ ಕಾರ್ಯಕ್ರಮ ಆಯೋಜಿಸಿದೆ ಎಂದು ಸಾಂಸ್ಕೃತಿಕ ಸಮಿತಿ ಸಲಹೆಗಾರ ಎಚ್.ಟಿ. ಅನಿಲ್ ಹೇಳಿದರು.