ಆರ್‌ಎಸ್‌ಎಸ್ ಆಜ್ಞೆಯಂತೆ ಕಾರ್ಯನಿರ್ವಹಿಸುತ್ತಿರುವ ಕೊಡಗು ಜಿಲ್ಲಾಡಳಿತ

d.s. nirvanappa
Published on

ಮಡಿಕೇರಿ: ಕೊಡಗು ಜಿಲ್ಲೆಗೆ ಸಿದ್ದರಾಮಯ್ಯ ಕಾಲಿಡಬಾರದೆಂಬಂತೆ ಪ್ರತಿಭಟನೆ ನಡೆಸಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೊಲೆ. ಜಿಲ್ಲಾಡಳಿತ ಆರ್‌ಎಸ್‌ಎಸ್ ಆಜ್ಞೆಯಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಸಿಪಿಐ(ಎಂಎಲ್) ರೆಡ್ ಸ್ಟಾರ್ ರಾಜ್ಯ ಸಮಿತಿ ಸದಸ್ಯ ಡಿ.ಎಸ್. ನಿರ್ವಾಣಪ್ಪ ಆರೋಪಿಸಿದ್ದಾರೆ.

ಮುಖ್ಯಮಂತ್ರಿಗೆ ನೀಡುವ ಭದ್ರತೆ ಪ್ರತಿಪಕ್ಷ ನಾಯಕರಿಗೂ ನೀಡಬೇಕಾಗುತ್ತದೆ. ಬೆರಳೆಣಿಕೆಯಷ್ಟು ಜನ ಪ್ರತಿಭಟನೆ ನಡೆಸುತ್ತಿದ್ದರೂ, ಅಹಿತಕರ ಘಟನೆ ನಡೆಯುವುದನ್ನು ತಡೆಯಲು ಪೊಲೀಸರಿಗೆ ಸಾಧ್ಯವಾಗಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತ ಪಡಿಸಿದರು.

ಮಳೆಯಿಂದ ಆಗಿರುವ ಹಾನಿ ಪರಿಶೀಲಿಸಲು ಸಿದ್ದರಾಮಯ್ಯ ಕೊಡಗಿಗೆ ಆಗಮಿಸಿದ್ದರು. ಕೆಲವು ಕಿಡಿಗೇಡಿಗಳು ಅಡ್ಡಹಾಕಿ ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ. ಮೊಟ್ಟೆ ಎಸೆದಿರುವುದು ಸರಿಯಲ್ಲ. ಕೊಡಗಿನ ಅಭಿವೃದ್ಧಿ ಬಯಸುವವರು ಇಂತಹ ಹೀನಕೃತ್ಯಕ್ಕೆ ಇಳಿಯುವುದಿಲ್ಲ. ಕೊಡಗು ಪೊಲೀಸರು ಸಂಪೂರ್ಣ ನಿಷ್ಕ್ರೀಯರಾಗಿದ್ದಾರೆಂದು ದೂಷಿಸಿದರು.

೨೫ ವರ್ಷದಿಂದ ಶಾಸಕರಾಗಿರುವವರು ಕ್ಷೇತ್ರದಲ್ಲಿನ ಅಭಿವೃದ್ಧಿ, ಕುಂದುಕೊರತೆಗಳ ಬಗ್ಗೆ ಮುತುವರ್ಜಿ ವಹಿಸಲಿಲ್ಲ. ಕೋಮು ಗಲಭೆ ಸೃಷ್ಟಿಸುವುದು, ಸಂಘರ್ಷಕ್ಕೆ ಅವಕಾಶ ಮಾಡಿಕೊಟ್ಟು ರಾಜಕೀಯ ಲಾಭ ಪಡೆಯುತ್ತಾ ಬಂದಿದ್ದಾರೆ. ದಲಿತರು, ಆದಿವಾಸಿಗಳು ಹೀನಾಯ ಪರಿಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ. ಸ್ವಂತ ಮನೆ ಕಟ್ಟಿಕೊಡಲು ಸಾಧ್ಯವಾಗದೇ ಪ್ರತಿವರ್ಷ ಪ್ಲಾಸ್ಟಿಕ್ ಹೊದಿಕೆ ನೀಡುತ್ತಿದ್ದಾರೆಂದು ಟೀಕಿಸಿದರು.

ಸಂಪತ್ ಯಾವ ಪಕ್ಷದಲ್ಲಿಯೂ ಶಾಶ್ವತವಾಗಿ ಇರಲಿಲ್ಲ. ತುಂಡು ಗುತ್ತಿಗೆ ಮಾಡುತ್ತಿರುವ ಈತ ಶಾಸಕರ ಹತ್ತಿರ ಹೋಗುತ್ತಿರುತ್ತಾನೆ. ಗುತ್ತಿಗೆ
ದಾರರು ಶಾಸಕರ ಹಾಗೂ ಬಿಜೆಪಿ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ. ಶಾಸಕರು ಇವರಿಂದ ಹೀನಕೃತ್ಯ ಮಾಡಿಸುತ್ತಿದ್ದಾರೆಂದು ಡಿ.ಎಸ್. ನಿರ್ವಾಣಪ್ಪ ಆರೋಪಿದರು.

ಸಂಘ ಪರಿವಾರದ ಕೆಲವು ಕಿಡಿಗೇಡಿಗಳು ಹೀನಕೃತ್ಯ ಮಾಡಿದ್ದಾರೆ. ಕೊಡಗು ಸಂಘ ಪರಿವಾರ, ಒಂದು ಪಕ್ಷದ ಸ್ವತ್ತಲ್ಲ. ಸರ್ವ ಜನಾಂಗದ ಶಾಂತಿಯ ತೋಟವಾಗಿರುವ ಕೊಡಗು ಎಲ್ಲರಿಗೂ ಸೇರಿದ್ದು. ಆರ್‌ಎಸ್‌ಎಸ್ ಚಟುವಟಿಕೆ ನಡೆಸಲು ಇರುವ ಜಿಲ್ಲೆಯೂ ಅಲ್ಲ. ಗೂಂಡಾ ಗಳ ಜಿಲ್ಲೆಯೂ ಅಲ್ಲ ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಸ್.ಆರ್. ಮಂಜುನಾಥ್ ಹೇಳಿದರು. ಜಿಲ್ಲಾ ಸಮಿತಿ ಸದಸ್ಯರಾದ ಎಚ್.ಇ. ಸಣ್ಣಪ್ಪ, ಎಚ್.ಡಿ. ಜಯಣ್ಣ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net