

ಮಡಿಕೇರಿ: ಕಾಫಿ ಮತ್ತು ಸಂಬಾರ ಬೆಳೆಗಳ ಕುರಿತು ಸಾಮರ್ಥ್ಯ ಅಭಿವೃದ್ಧಿ ಕಾರ್ಯಾಗಾರ ಹೊಟೇಲ್ ಮಯೂರ ವ್ಯಾಲಿ ವ್ಯೆನಲ್ಲಿ ಬುಧವಾರ ನಡೆಯಿತು.
ಕೇಂದ್ರ ವಾಣಿಜ್ಯ ಸಚಿವಾಲಯ ಹಾಗೂ ಫೆಡರೇಷನ್ ಆಫ್ ಇಂಡಿಯಾ ಎಕ್ಸ್‌ಪೋರ್ಟ್ ಆರ್ಗನೈಷೇಷನ್ ವತಿಯಿಂದ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ನಿಗಮ, ಕೃಷಿ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಕಾಫಿ ಮಂಡಳಿ ಮತ್ತು ಸಂಬಾರ ಮಂಡಳಿ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜಿಲ್ಲೆಯಲ್ಲಿ ಕಾಫಿ ಮತ್ತು ಸಂಬಾರ ಬೆಳೆಗಳ ರಫ್ತಿನಲ್ಲಿರುವ ಸಮಸ್ಯೆ, ರಫ್ತಿನ ಅವಕಾಶ ಬಲವರ್ಧಿಸುವ ಕುರಿತು ಹಾಗೂ ಹೊರ ದೇಶಗಳ ಆಮದು ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ರಫ್ತು ಪ್ರಮಾಣ ಹೆಚ್ಚಿಸುವ ಕ್ರಮಗಳ ಬಗ್ಗೆ ರೈತರು, ರೈತ ಉತ್ಪಾದಕರ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಉದ್ದಿಮೆದಾರರೊಂದಿಗೆ ಚರ್ಚಿಸಲಾಯಿತು.
ಉದ್ದಿಮೆದಾರರಿಗೆ ಅಂತಾರಾಷ್ಟ್ರೀಯ ವ್ಯಾಪಾರ ಹಾಗೂ ಮಾರುಕಟ್ಟೆಗಳ ಅವಕಾಶಗಳ ಕುರಿತು ಅರಿವು ಮೂಡಿಸಲಾಯಿತು. ಜಾಗತಿಕ ವಾಣಿಜ್ಯ ಸಂಸ್ಥೆಗಳ ಪಾತ್ರ, ಮುಕ್ತ ವ್ಯಾಪಾರ ಒಪ್ಪಂದಗಳ ಪಾತ್ರ ಹಾಗೂ ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ ಮತ್ತು ಕಸ್ಟಂ ಇಲಾಖೆಯಿಂದ ಒದಗಿಸುವ ಸೌಲಭ್ಯ ಹಾಗೂ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಲಾಯಿತು.
ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕಿ ಶಬಾನಾ ಎಂ ಶೇಖ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಟಿ. ದಿನೇಶ್, ಬೆಂಗಳೂರು ಕಾಫಿ ಮಂಡಳಿ ಉಪನಿರ್ದೇಶಕ ಡಿ.ಆರ್. ಬಾಬು ರೆಡ್ಡಿ, ಉಪ ನಿರ್ದೇಶಕ ಡಾನಿಶುನು, ಎಫ್‌ಐಇಒ ಕಿರಿಯ ಸಹಾಯಕಿ ಭಾಗ್ಯಲಕ್ಷ್ಮಿ,
ಬ್ಯಾಂಕ್ ಆಫ್ ಬರೋಡದ ಹಿರಿಯ ವ್ಯವಸ್ಥಾಪಕ ಅಭಿಷೇಕ್ ಕಟೋಚ್, ಮಂಗಳೂರು ಲುಟೆಡ್ ಕಾರ್ಯನಿರ್ವಹಣಾಧಿಕಾರಿ ನಂದಕುಮಾರ್ ಅಂಬಟಿ ಮಾತನಾಡಿದರು. ಬೆಂಗಳೂರು ಕೆಪೆಕ್ ವ್ಯವಸ್ಥಾಪಕ ನಿರ್ದೇಶಕ ಎಂ.ಎಚ್.ಬಂಥನಾಳ್ ಇದ್ದರು.