

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಹೆಸರನ್ನು ಬೀಡಾಡಿ ಹಸುವಿನ ಮೇಲೆ ಬರೆದಿರುವ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಜೆಪಿ ಸದಸ್ಯ ಎಸ್.ಸಿ. ಸತೀಶ್ ನೀಡಿರುವ ದೂರಿನನ್ವಯ ಪ್ರಕರಣ ದಾಖಲಾಗಿದೆ. ಕೆಲವು ದಿನ ಗಳಿಂದ ಅನಿತಾ ಪೂವಯ್ಯ ಎಂದು ಹಸುವಿನ ಮೇಲೆ ಬರೆದಿರುವುದು ಚರ್ಚೆಗೆ ಗ್ರಾಸವಾಗಿತ್ತು.
ಮಾನಸಿಕ ವಿಕೃತಿ ಮೆರೆದಿರುವ ವ್ಯಕ್ತಿ ಮತ್ತು ಅದಕ್ಕೆ ಕುಮ್ಮಕ್ಕು ಕೊಟ್ಟಿರುವವರನ್ನು ಪತ್ತೆ ಹಚ್ಚಿ ಕಾನೂನು ಕ್ರಮಕೈಗೊಳ್ಳಬೇಕೆಂದು ಬಿಜೆಪಿ ಜಿಲ್ಲಾ ವಕ್ತಾರ ಮಹೇಶ್ ಜೈನಿ ಆಗ್ರಹಿಸಿದ್ದಾರೆ.
ಅನಿತಾ ಪೂವಯ್ಯ ತಮಗೆ ಸಿಕ್ಕ ಅವಕಾಶ ಉಪಯೋಗಿಸಿಕೊಂಡು ಈಗಾಗಲೇ ಅನೇಕ ಅಭಿವೃದ್ಧಿ ಕೆಲಸ ಮಾಡುವುದರ ಮೂಲಕ ತಮ್ಮ ಪಾಲಿನ ಕೆಲಸ ಅಚ್ಚುಕಟ್ಟಾಗಿ ನಿಭಾಹಿಸುತಿದ್ದಾರೆ. ಜನಪರ ಕೆಲಸದಿಂದ ಅಸೂಯೆಗೊಂಡ ಗುಂಪು ಇವರ ಹೆಸರು ಕೆಡಿಸುವ ಉದ್ದೇಶದಿಂದ ಈ ರೀತಿಯ ಕೆಲಸಕ್ಕೆ ಕೈ ಹಾಕಿದ್ದಾರೆಂದು ಹೇಳಿಕೆಯಲ್ಲಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಕೊಡಗಿನ ಪ್ರಜ್ಞಾವಂತ ನಾಗರಿಕ ಸಮಾಜ ತಲೆತಗ್ಗಿಸುವ ಕಿಡಿಗೇಡಿ ಕೃತ್ಯ ಇದಾಗಿದೆ. ಬೀಡಾಡಿ ಹಸುವಿನ ಮೇಲೆ ನಗರಸಭೆ ಅಧ್ಯಕ್ಷೆ ಹೆಸರು ಬರೆದು ಅಪಮಾನ ಮಾಡಲಾಗಿದೆ. ಇದು ಹೇಯ ಕೃತ್ಯ ಎಂದು ಸಾಮಾಜಿಕ ಕಾರ್ಯಕರ್ತ ಸತ್ಯ ಕರ್ಕೇರ ಖಂಡಿಸಿದ್ದಾರೆ. ಮಹಿಳಾ ಸ್ವಾತಂತ್ರೃದ ಬಗ್ಗೆ ವೇದಿಕೆಯಲ್ಲಿ ಭಾಷಣ ಮಾಡುವವರು ಹೆಣ್ಣಿಗೆ ಆಗಿರುವ ಅವಮಾನವನ್ನು ಖಂಡಿಸದಿರುವುದು ಬೇಸರವುಂಟು ಮಾಡಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.