

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಸರ್ಕಾರಿ ಜಾಗ ಹಾಗೂ ರಾಜಕಾಲುವೆ ಒತ್ತುವರಿ ತೆರವುಗೊಳಿಸಲು ಸರ್ವೇ ಕೈಗೆತ್ತಿಕೊಳ್ಳಲು ನಗರಸಭೆ ಸಾಮಾನ್ಯಸಭೆಯಲ್ಲಿ ತೀರ್ಮಾನಿಸ ಲಾಯಿತು. ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಅಧ್ಯಕ್ಷತೆಯಲ್ಲಿ ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಸಾಮಾನ್ಯಸಭೆಯಲ್ಲಿ ಒತ್ತುವರಿ ಕುರಿತು ಕಾಂಗ್ರೆಸ್, ಎಸ್‌ಡಿಪಿಐ ಸದಸ್ಯರು ಗಮನ ಸೆಳೆದರು. ಸರ್ಕಾರಿ ಜಾಗ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ತಕ್ಷಣ ಎಡಿಎಲ್‌ಆರ್ ಮೂಲಕ ಸರ್ವೇ ಮಾಡಿಸಲಾಗುವುದೆಂದು ಶಾಸಕರು ಹೇಳಿದರು.
ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿರುವುದಕ್ಕೆ ನಗರಸಭೆಯಿಂದ ಎನ್‌ಒಸಿ ನೀಡುತ್ತಿದ್ದಾರೆಂದು ಎಸ್‌ಡಿಪಿಐನ ಮನ್ಸೂರ್ ಆಲಿ ಟೀಕಿಸಿದರು. ರಾಜಕಾಲುವೆ ಒತ್ತುವರಿ ಮಾಡಿಕೊಳ್ಳಲಾಗಿದೆ. ಇದರಿಂದ ಧಾರಾಕಾರವಾಗಿ ಮಳೆ ಸುರಿಯುವ ವೇಳೆ ರಸ್ತೆ ಮೇಲೆ ನೀರು ಹರಿದು ಸಂಕಷ್ಟ ಎದುರಾಗುತ್ತದೆ ಎಂದು ಎಸ್‌ಡಿಪಿಐನ ಬಷೀರ್ ಅಹಮ್ಮದ್ ಗಮನ ಸೆಳೆದರು.
ಶಾಸ್ತ್ರೀನಗರದಲ್ಲಿ ರಸ್ತೆ ಮತ್ತು ಚರಂಡಿ ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಲಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳ ಪರಿಶೀಲಿಸಿದ್ದರೂ ಒತ್ತುವರಿ ತೆರವುಗೊಳಿಸಿಲ್ಲ ಎಂದು ಕಾಂಗ್ರೆಸ್ಸಿನ ರಾಜೇಶ್ ಯಲ್ಲಪ್ಪ ಆಕ್ಷೇಪ ವ್ಯಕ್ತ ಪಡಿಸಿದರು. ಈ ಪ್ರಕರಣ ನ್ಯಾಯಾಲಯದಲ್ಲಿದೆ ಎಂದು ಪೌರಾಯುಕ್ತ ವಿಜಯ್ ಮಾಹಿತಿ ನೀಡಿದರು.
ನಗರೋತ್ಥಾನ ಯೋಜನೆಯಡಿ ೪೦ ಕೋಟಿ, ೧೫ನೇ ಹಣಕಾಸು ಯೋಜನೆಯಡಿ ೬೦ ಲಕ್ಷ ಹಾಗೂ ಪ್ರಕೃತಿ ವಿಕೋಪದಡಿ ಬಿಡುಗಡೆಯಾದ ೩೫ ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಪೌರಾಯುಕ್ತರು ಮಾಹಿತಿ ನೀಡಿದರು. ನಗರಸಭೆ ವ್ಯಾಪ್ತಿಯಲ್ಲಿ ಗುರುತಿಸಿರುವ ೧,೨೦೦ ಜನ ನಿವೇಶನ ರಹಿತರಿಗೆ ನಿವೇಶನ ನೀಡಬೇಕೆಂದು ಅಮೀನ್ ಮೊಹಿಸ್ಸಿನ್ ಆಗ್ರಹಿಸಿದರು.
ಅಧ್ಯಕ್ಷೆ ಕೊಠಡಿಯಲ್ಲಿರುವ ಸಿಸಿ ಕ್ಯಾಮರಾ ಮುಖ ತಿರುಗಿಸಿಟ್ಟಿರುವುದಕ್ಕೆ ಅಮೀನ್ ಮೊಹಿಸ್ಸಿನ್, ಮನ್ಸೂರ್ ಆಲಿ ಆಕ್ಷೇಪ ವ್ಯಕ್ತ ಪಡಿಸಿ ದರು. ಪಾರದರ್ಶಕ ಮತ್ತು ಪ್ರಾಮಾಣಿಕ ಆಡಳಿತ ಮಾಡುವುದಾಗಿ ಹೇಳುವ ನೀವು ಏಕೆ ಹೀಗೆ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದರು. ಇದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತ ಪಡಿಸಿ, ಸಿಸಿ ಕ್ಯಾಮರ ಬಗ್ಗೆ ಅಧ್ಯಕ್ಷೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ಪ್ರಾಮಾಣಿಕತೆ ಬಗ್ಗೆ ಎಸ್‌ಡಿಪಿಐ ಯಿಂದ ಕಲಿತುಕೊಳ್ಳಬೇಕಾಗಿಲ್ಲ ಎಂದರು. ಆಡಳಿತಾರೂಢ ಸದಸ್ಯರೊಂದಿಗೆ ಚರ್ಚಿಸಿ ಸಿಸಿ ಕ್ಯಾಮರಾ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ಅಧ್ಯಕ್ಷೆ ಹೇಳಿದರು.
ಮಾರುಕಟ್ಟೆ ಒಳಗೆ ವಾಹನ ನಿಲುಗಡೆ ಮಾಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ ಬಿಜೆಪಿಯ ಕಾಳಚಂಡ ಸುಮನ್ ಅಪ್ಪಣ್ಣ, ಮಾರುಕಟ್ಟೆ ಯಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕೆಂದು ಆಗ್ರಹಿಸಿದರು. ರಾತ್ರಿ ವೇಳೆ ಮಾರುಕಟ್ಟೆಯಿಂದ ದನಗಳನ್ನು ಕದ್ದು ಸಾಗಾಟ ಮಾಡಲಾಗುತ್ತಿದೆ ಎಂದು ಬಿಜೆಪಿಯ ಅರುಣ್ ಶೆಟ್ಟಿ ಗಂಭೀರ ಆರೋಪ ಮಾಡಿದರು.
ಗಾಂಧಿ ಮೈದಾನಕ್ಕೆ ಪುಂಡರ ವಾಹನ ಪ್ರವೇಶಿಸುತ್ತಿದ್ದು, ಇದನ್ನು ತಡೆಯಲು ಗೇಟ್ ಅಳವಡಿಸಬೇಕೆಂದು ಕೆ.ಎಸ್. ರಮೇಶ್ ಆಗ್ರಹಿಸಿ ದರು. ಸ್ಥಳೀಯ ನಿವಾಸಿಗಳಿಗೆ ತೊಂದರೆ ಆಗದಂತೆ ಗೇಟ್ ಅಳವಡಿಸಬೇಕೆಂದು ಮಹೇಶ್ ಜೈನಿ ಹೇಳಿದರು. ನನ್ನ ವಾರ್ಡ್ ವ್ಯಾಪ್ತಿಯಲ್ಲಿ ಕೆಲಸ ಆಗುತ್ತಿಲ್ಲ. ಕಾಡು ಕಡಿಯುವುದು, ಕಸ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಕಾಂಗ್ರೆಸ್ಸಿನ ರಾಜೇಶ್ ಯಲ್ಲಪ್ಪ ಅಸಮಾಧಾನ ವ್ಯಕ್ತ ಪಡಿಸಿದರು. ನಗರಸಭೆ ಉಪಾಧ್ಯಕ್ಷೆ ಸವಿತಾ ರಾಕೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ್ ಸುಬ್ರಮಣಿ ಇದ್ದರು.
ನೌಕರರಿಗೆ ವೇತನ ನೀಡಿ
ಏಳು ತಿಂಗಳಿನಿಂದ ಹೊರಗುತ್ತಿಗೆ ನೌಕರರಿಗೆ ವೇತನ ನೀಡಿಲ್ಲ ಎಂದು ಅಮೀನ್ ಮೊಹಿಸ್ಸಿನ್, ಮನ್ಸೂರ್ ಆಲಿ ಅಸಮಾಧಾನ ವ್ಯಕ್ತ ಪಡಿಸಿ ದರು. ನಿಮಗೆ ಕಾಳಜಿ ಇದ್ದಿದಲ್ಲಿ ೧ ತಿಂಗಳಲ್ಲಿ ವೇತನ ನೀಡಲು ಕ್ರಮ ತೆಗೆದುಕೊಳ್ಳುತ್ತಿದ್ದೀರಾ ಎಂದು ಅಧ್ಯಕ್ಷೆಯನ್ನು ತರಾಟೆಗೆ ತೆಗೆದು ಕೊಂಡರು. ನೌಕರರ ಬಗ್ಗೆ ಮೊಸಳೆ ಕಣ್ಣೀರು ಹಾಕುವ ಅಗತ್ಯತೆ ಇಲ್ಲ ಎಂದು ಮಹೇಶ್ ಜೈನಿ ಹೇಳಿದರು. ನೌಕರರಿಗೆ ವೇತನ ನೀಡಲು ತಡವಾಗಿದ್ದರೂ, ವೇತನ ಸಿಗುತ್ತದೆ ಎಂದು ಶಾಸಕರು ಹೇಳಿದರು.
ಬಾಂಬ್ ಪರಿಶೀಲಿಸಿ
ಬಾಂಬ್ ಹಾಕಲಾಗುವುದೆಂದು ಜೆಡಿಎಸ್ ಸದಸ್ಯ ಮುಸ್ತಫಾ ಹೇಳಿದ್ದಾರೆ. ಅವರು ಸಭೆಗೆ ಬಂದಿದ್ದು, ನಮಗೆ ಭಯವಾಗುತ್ತಿದೆ. ಅವರನ್ನು ಪರಿಶೀಲಿಸಬೇಕೆಂದು ಬಿಜೆಪಿಯ ಅರುಣ್ ಶೆಟ್ಟಿ ಗಮನ ಸೆಳೆದದರು. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಲಿದ್ದಾ ರೆಂದು ಶಾಸಕರು ಹೇಳಿದರು. ಸಭೆಯ ಕೊನೆಯಲ್ಲಿ ಮತ್ತೊಮ್ಮೆ ವಿಷಯ ಪ್ರಸ್ತಾಪಿಸಿದ ಅರುಣ್ ಶೆಟ್ಟಿ, ಬಾಂಬ್ ಹಾಕುವುದಾಗಿ ಬೆದರಿಕೆ ಹಾಕಿರುವ ಮುಸ್ತಫಾ ವಿರುದ್ಧ ನಿರ್ಣಯ ತೆಗೆದುಕೊಳ್ಳಬೇಕು. ಅವರ ಸದಸ್ಯತ್ವ ರದ್ದು ಮಾಡಬೇಕೆಂದು ಆಗ್ರಹಿಸಿದರು. ಇದಕ್ಕೆ ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.
ಅಧ್ಯಕ್ಷೆ ದೂರವಾಣಿ ಬಿಲ್
ಅಧ್ಯಕ್ಷರು ತಿಂಗಳಿಗೆ ೨,೫೦೦ ರೂಪಾಯಿ ದೂರವಾಣಿ ವೆಚ್ಚವಾಗಿ ಪಡೆದುಕೊಳ್ಳುತ್ತಿದ್ದೀರಾ. ಇದು ನಿಮ್ಮ ಪ್ರಾಮಾಣಿಕತೆಯೇ ಎಂದು ಎಸ್‌ಡಿಪಿಐನ ಅಮೀನ್ ಮೊಹಿಸ್ಸಿನ್, ಮನ್ಸೂರ್ ಆಲಿ ಪ್ರಶ್ನಿಸಿದರು. ೭೦೦ ರೂ. ಪಾವತಿಸಿದ್ದಲ್ಲಿ ೩ ತಿಂಗಳು ಪ್ರತಿನಿತ್ಯ ೨೪ ಗಂಟೆ ಮಾತನಾಡ ಬಹುದೆಂದು ಕುಟುಕಿದರು. ಇದಕ್ಕೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತ ಪಡಿಸಿದರು. ಇದು ನಿಮ್ಮ ಸಣ್ಣತನ ತೋರಿಸುತ್ತದೆ ಎಂದು ಬಿಜೆಪಿ ಯ ಕೆ.ಎಸ್. ರಮೇಶ್ ಹೇಳಿದರು.
ಈ ವಿಚಾರಕ್ಕೆ ಸಂಬಂಧಿಸಿದ್ದಂತೆ ಚರ್ಚೆ ನಡೆಯುತ್ತಿದ್ದ ವೇಳೆ ನಗರಸಭೆ ವಿರುದ್ಧ ಘೋಷಣೆ ಕೂಗುತ್ತಾ ಎಸ್‌ಡಿಪಿಐ ಸದಸ್ಯರು ಸಭೆಯಿಂದ ನಿರ್ಗಮಿಸಿದರು. ಮಸೀದಿಗೆ ಶುಕ್ರವಾರದ ಪ್ರಾರ್ಥನೆಗೆ ತೆರಳುವ ಉದ್ದೇಶದಿಂದ ಎಸ್‌ಡಿಪಿಐ ಸದಸ್ಯರು ಹೀಗೆ ಮಾಡಿದ್ದಾರೆಂದು ಆಡಳಿತಾ ರೂಢ ಬಿಜೆಪಿ ಸದಸ್ಯರು ಅಸಮಾಧಾನ ವ್ಯಕ್ತ ಪಡಿಸಿದರು. ಅನುದಾನ ಹಂಚಿಕೆ ಸಂದರ್ಭದಲ್ಲಿ ಎಸ್‌ಡಿಪಿಐ ಸದಸ್ಯರಿಗೆ ನೀಡಬಾರದೆಂದು ಬಿಜೆಪಿಯ ಕೆ.ಎಸ್. ರಮೇಶ್ ಹೇಳಿದರು.
ಆರೋಗ್ಯ ಕೆಡುತ್ತಿದೆ
ನಗರಸಭೆಯ ಎಲ್ಲಾ ಕೆಲಸ ನಾನೇ ಮಾಡಬೇಕಾಗಿದೆ. ಬೆಳಗ್ಗೆ ೫ ಗಂಟೆಯಿಂದ ರಾತ್ರಿ ೧೦ ಗಂಟೆಯವರೆಗೆ ನಿರಂತರ ಕೆಲಸ ಮಾಡಬೇಕಾ ಗಿದೆ. ಇದರಿಂದ ನನ್ನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ ಎಂದು ಪೌರಾಯುಕ್ತ ವಿಜಯ್ ತಮ್ಮ ಅಸಹಾಯಕತೆ ವ್ಯಕ್ತ ಪಡಿಸಿ ದರು.