

ಮಡಿಕೇರಿ: ಮಡಿಕೇರಿ ನಗರಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ನೀಡಿರುವ ದೂರಿನನ್ವಯ ಕಾಂಗ್ರೆಸ್ಸಿನ ೧೩ ಜನರ ವಿರುದ್ಧ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜನರಲ್ ಕೆ.ಎಸ್. ತಿಮ್ಮಯ್ಯ ವೃತ್ತದಲ್ಲಿ ಆ.೧೮ ರಂದು ಹಲ್ಲೆ ಯತ್ನ ಹಾಗೂ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆಂದು ಆ.೧೯ ರಂದು ರಾತ್ರಿ ದೂರು ನೀಡಿದ್ದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಕೆಪಿಸಿಸಿ ಕಾನೂನು ಘಟಕ ಅಧ್ಯಕ್ಷ ಎ.ಎಸ್. ಪೊನ್ನಣ್ಣ, ಎಂಎಲ್ಸಿ ಚುನಾವಣೆಯಲ್ಲಿ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಡಾ.ಮಂಥರ್‌ಗೌಡ, ಕಾಂಗ್ರೆಸ್ ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್, ಕಾಂಗ್ರೆಸ್ ವಕ್ತಾರ ತೆನ್ನೀರ ಮೈನ, ಸಾಮಾಜಿಕ ಜಾಲತಾಣದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಜಿಲ್ಲಾ ಸಂಚಾಲಕ ಹೊಸೂರು ಸೂರಜ್, ಮಡಿಕೇರಿ ನಗರ ಕಾಂಗ್ರೆಸ್ ಉಪಾಧ್ಯಕ್ಷ ಪ್ರಕಾಶ್ ಆಚಾರ್ಯ, ಅಲ್ಪಸಂಖ್ಯಾತ ಘಟಕದ ಮಡಿಕೇರಿ ನಗರಾಧ್ಯಕ್ಷ ಖಾಲಿದ್, ವಿರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯ ಶಾಫಿ, ಮರಗೋಡು ವಲಯ ಕಾಂಗ್ರೆಸ್ ಅಧ್ಯಕ್ಷ ಮಂದ್ರೀರ ಮೋಹನ್ ದಾಸ್, ಮಿನಾಜ್, ತೆರೇಜಾ ವಿಕ್ಟರ್ ಹಾಗೂ ಇತರ ವಿರುದ್ಧ ಪ್ರಕರಣ ದಾಖಲಾಗಿದೆ.
ಪೊನ್ನಣ್ಣ ಪ್ರತಿಕ್ರಿಯೆ
ಮೊಟ್ಟೆ ಎಸೆತ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಕಾಂಗ್ರೆಸ್ ದೂರು ನೀಡಿದ್ದರಿಂದ ಕಾಂಗ್ರೆಸ್ಸಿಗರ ಮೇಲೆ ಸುಳ್ಳು ದೂರು ನೀಡಲಾಗಿದೆ. ಒಬ್ಬ ಮಹಿಳೆ ಹೀಗೆ ಮಾಡಿರುವುದು ಅಚ್ಚರಿ ಉಂಟು ಮಾಡಿದೆ ಎಂದು ಕೆಪಿಸಿಸಿ ಕಾನೂನು ಘಟಕ ಅಧ್ಯಕ್ಷ ಎ.ಎಸ್. ಪೊನ್ನಣ್ಣ ಶನಿವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.