ಜಿಎಸ್‌ಟಿ ನಿಯಂತ್ರಣಕ್ಕೆ ಮಡಿಕೇರಿ ನಗರ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಒತ್ತಾಯ

27adarshkdga4
Published on


ಮಡಿಕೇರಿ: ದೇಶದ ಜನಸಾಮಾನ್ಯರಿಗೆ ಹೊರೆಯಾಗಿರುವ ಜಿಎಸ್‌ಟಿ ಏರಿಕೆಯನ್ನು ನಿಯಂತ್ರಿಸಬೇಕೆಂದು ಒತ್ತಾಯಿಸಿ ಮಡಿಕೇರಿ ನಗರ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗಳಿಗೆ ಬುಧವಾರ ಮನವಿ ಪತ್ರ ಸಲ್ಲಿಸಿತು.


ಅಲ್ಪಸಂಖ್ಯಾತರ ಘಟಕದ ನಗರಾಧ್ಯಕ್ಷ ಕೆ.ಜಿ.ಪೀಟರ್‌ರವರ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಅವರಿಗೆ ಮನವಿ ಪತ್ರ ಸಲ್ಲಿಸಿದ ಪ್ರಮುಖರು ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ಖಂಡಿಸಿದರು.


ಈ ಸಂದರ್ಭ ಕೆ.ಜಿ.ಪೀಟರ್ ಮಾತನಾಡಿ, ತೈಲೋತ್ಪನ್ನಗಳ ಬೆಲೆ ಏರಿಕೆಯೊಂದಿಗೆ ನಿತ್ಯ ಬಳಕೆಯ ವಸ್ತುಗಳ ಬೆಲೆಯು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಈ ನಡುವೆ ಕೇಂದ್ರ ಸರ್ಕಾರ ಜಿಎಸ್‌ಟಿಯನ್ನು ಶೇ.೫ರಷ್ಟು ಏರಿಕೆ ಮಾಡಿರುವುದರಿಂದ ಹಿಟ್ಟು, ಸಕ್ಕರೆ, ಅಕ್ಕಿ, ಪನ್ನೀರ್, ಮೊಸರು ಸೇರಿದಂತೆ ಹಲವು ಆಹಾರ ಪದಾರ್ಥಗಳ ಬೆಲೆ ದುಬಾರಿಯಾಗಿದೆ ಎಂದರು.


ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಡಬ್ಬಿ ಅಥವಾ ಪ್ಯಾಕ್ ಮತ್ತು ಲೇಬಲ್ ಮಾಡಿದ ಆಹಾರ ಪದಾರ್ಥಗಳ ಮೇಲೆ ಜಿಎಸ್ಟಿ ತೆರಿಗೆ ವಿಧಿಸುವ ಬಗ್ಗೆ ನಿರ್ಧರಿಸಲಾಗಿತ್ತು. ಇದರಿಂದ ಮೀನು, ಮೊಸರು, ಪನ್ನೀರ್, ಲಸ್ಸಿ, ಜೇನುತುಪ್ಪ, ಅಕ್ಕಿ, ಗೋಧಿ, ರೈಸ್, ಬಾರ್ಲಿ, ಓಟ್ಸ್, ಒಣ ಸೋಯಾಬೀನ್, ಬಟಾಣಿ ಮುಂತಾದ ಉತ್ಪನ್ನಗಳಿಗೆ ಜಿಎಸ್ಟಿ ಅನ್ವಯವಾಗಲಿದೆ. ಇದರಿಂದ ಜನಸಾಮಾನ್ಯರ ಜೀವನ ಸಂಕಷ್ಟಕ್ಕೆ ಸಿಲುಕಲಿದೆ ಎಂದರು.


ಬಡವರು, ಕೂಲಿ ಕಾರ್ಮಿಕರು, ಜನಸಾಮಾನ್ಯರು, ವಿದ್ಯಾವಂತ ಯುವಕ, ಯುವತಿಯರು ಆದಾಯವಿಲ್ಲದೆ ಆರ್ಥಿಕ ಹಿನ್ನಡೆಯನ್ನು ಅನುಭವಿಸುತ್ತಿದ್ದು, ಇದೀಗ ಜಿಎಸ್ಟಿ ಹೊರೆಯಿಂದ ಗಾಯದ ಮೇಲೆ ಬರೆ ಎಳೆದಂತ್ತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.


ದೇಶದ ಇತಿಹಾಸದಲ್ಲೇ ಹಾಲಿನ ಉತ್ಪನ್ನಕ್ಕೂ ಜಿಎಸ್ಟಿ ವಿಧಿಸಿರುವುದು ಇದೇ ಮೊದಲಾಗಿದೆ. ದುಬಾರಿ ಬೆಲೆಯಿಂದಾಗಿ ಬಡವರು ಪೌಷ್ಠಿಕ ಆಹಾರದಿಂದ ವಂಚಿತರಾಗಲಿದ್ದಾರೆ. ಅಡುಗೆ ಅನಿಲದ ಬೆಲೆಯೂ ಎರಡೂವರೆ ಪಟ್ಟು ಹೆಚ್ಚಾಗಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ ಪೀಟರ್, ದೇಶದ ಬಡ ಜನರ ಹಿತದೃಷ್ಟಿಯಿಂದ ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಿ ಬೆಲೆ ಏರಿಕೆಯನ್ನು ನಿಯಂತ್ರಿಸುವಂತೆ ಸರ್ಕಾರಕ್ಕೆ ಆದೇಶ ನೀಡಬೇಕೆಂದು ಮನವಿ ಮಾಡಿದರು.


ಮನವಿ ಪತ್ರ ಸಲ್ಲಿಸುವ ಸಂದರ್ಭ ಅಲ್ಪಸಂಖ್ಯಾತರ ಘಟಕದ ಮಡಿಕೇರಿ ಬ್ಲಾಕ್ ಅಧ್ಯಕ್ಷ ಎಂ.ಎ.ಖಲೀಲ್ ಬಾಷ, ಮಡಿಕೇರಿ ನಗರ ಕಾರ್ಯದರ್ಶಿ ಎಂ.ಎ.ಫಯಾಜ್, ಉಪಾಧ್ಯಕ್ಷ ಎಂ.ಹೆಚ್.ಶೌಖತ್ ಆಲಿ ಹಾಗೂ ಸದಸ್ಯ ಎಂ.ಎ.ಅಶ್ರಫ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net