ಮಡಿಕೇರಿ ನಗರಸಭೆ ೬.೨೫ ಕೋಟಿ ಉಳಿತಾಯ ಬಜೆಟ್

20mdk03
Published on

ಮಡಿಕೇರಿ:
೨೦೨೩, ೨೪ನೇ ಸಾಲಿಗೆ ಮಡಿಕೇರಿ ನಗರಸಭೆಯಲ್ಲಿ ೬.೨೫ ಕೋಟಿ ರೂ. ಉಳಿತಾಯ ಬಜೆಟ್ ಮಂಡಿಸಲಾಗಿದೆ. ಇದೊಂದು ದೂರದೃಷ್ಟಿಯ ಬಜೆಟ್ ಎಂದು ಆಡಳಿತ ಪಕ್ಷದ ಸದಸ್ಯರು ಸ್ವಾಗತಿಸಿದರೆ, ಬಜೆಟ್ ಹೆಸರಿನಲ್ಲಿ ಚೆಂಬು ಕೊಟ್ಟು, ಹೂವು ಮುಡಿಸಲಾಗಿದೆ ಎಂದು ಪ್ರತಿಪಕ್ಷ ಎಸ್‌ಡಿಪಿಐ ಸದಸ್ಯರು ಟೀಕಿಸಿದರು.


ಮಡಿಕೇರಿ ನಗರಸಭೆಯ ೨೦೨೩, ೨೪ನೇ ಸಾಲಿನ ಅಂದಾಜು ಆಯವ್ಯಯ ಪಟ್ಟಿ ಮಂಡನೆ ಸಭೆಯನ್ನು ಸೋಮವಾರ ಬೆಳಗ್ಗೆ ೧೧.೩೦ಕ್ಕೆ ಕರೆಯಲಾಗಿತ್ತು. ಪ್ರತಿಪಕ್ಷ ಎಸ್‌ಡಿಪಿಐ ಮತ್ತು ಆಡಳಿತರೂಢ ಬಿಜೆಪಿಯ ಕೆಲವು ಸದಸ್ಯರು ಸಮಯಕ್ಕೆ ಸರಿಯಾಗಿ ಸಭಾಂಗಣದಲ್ಲಿ ಆಸೀನರಾಗಿದ್ದರು. ಆದರೆ ಬಜೆಟ್ ಮಂಡಿಸಬೇಕಿದ್ದ ಅಧ್ಯಕ್ಷೆ ಎನ್.ಪಿ. ಅನಿತಾ ಮಧ್ಯಾಹ್ನ ೧೨ ಗಂಟೆಯಾದರೂ ಸಭಾಂಗಣಕ್ಕೆ ಬಂದಿರಲಿಲ್ಲ. ಇದರಿಂದ ಸಿಟ್ಟಾದ ಎಸ್‌ಡಿಪಿಐನ ಅಮೀನ್ ಮೊಹಸಿನ್ ಮತ್ತಿತರ ಸದಸ್ಯರು ಅಧ್ಯಕ್ಷರು ಸಮಯ ಪರಿಪಾಲನೆ ಮಾಡುತ್ತಿಲ್ಲ. ಬಜೆಟ್ ಮಂಡನೆಯನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಸದಸ್ಯ ಅರುಣ್ ಶೆಟ್ಟಿ, ಅಧ್ಯಕ್ಷರಿಗೆ ಅನಾರೋಗ್ಯ ಇರುವುದರಿಂದ ಸ್ವಲ್ಪ ತಡವಾಗಿದೆ. ಎನ್ನುತ್ತಿದ್ದಂತೆಯೇ ಉಪಾಧ್ಯಕ್ಷೆ ಸವಿತಾ ರಾಕೇಶ್ ಮತ್ತು ಪೌರಾಯುಕ್ತ ವಿಜಯ್ ಜೊತೆಯಲ್ಲಿ ಅಧ್ಯಕ್ಷೆ ಅನಿತಾ ಸಭಾಂಗಣಕ್ಕೆ ಆಗಮಿಸಿ, ತಮ್ಮ ಆಗಮನ ತಡವಾಗಲು ಕಾರಣವಾದ ಅಂಶದ ಬಗ್ಗೆ ಮಾಹಿತಿ ನೀಡಿ ನಂತರ ಬಜೆಟ್ ಪ್ರತಿಯ ಸಂಕ್ಷಿಪ್ತ ನೋಟವನ್ನು ಸಭೆಗೆ ಓದಿ ಹೇಳಿದರು.


ಆರಂಭ ಶಿಲ್ಕು ೧೨ ಕೋಟಿ ೯ ಲಕ್ಷದ ೮೯ ಸಾವಿರದ ೬೩೦ ರೂ. ಇದ್ದು, ವಿವಿಧ ಮೂಲಗಳಿಂದ ಒಟ್ಟು ೬೧ ಕೋಟಿ ೩ ಲಕ್ಷ ೫೯ ಸಾವಿರ ೧೬೨ ರೂ. ಆದಾಯ ನಿರೀಕ್ಷೆ ಮಾಡಲಾಗಿದೆ. ಒಟ್ಟು ೬೬ ಕೋಟಿ ೮೮ ಲಕ್ಷ ೮ ಸಾವಿರ ಖರ್ಚಿನ ಲೆಕ್ಕ ಹಾಕಲಾಗಿದ್ದು, ೬ ಕೋಟಿ ೨೫ ಲಕ್ಷ ೪೦ ಸಾವಿರ ೭೯೫ ರೂ. ಉಳಿತಾಯದ ಬಜೆಟ್ ಅನ್ನು ಅಧ್ಯಕ್ಷೆ ಎನ್.ಪಿ. ಅನಿತಾ ಮಂಡಿಸಿದರು.


ಇದೇ ವೇಳೆ ಮಳೆ ಹಾನಿ ಸಂತ್ರಸ್ತರಿಗೆ ಸುರಕ್ಷಿತ ಪ್ರದೇಶದಲ್ಲಿ ಸರಕಾರ ಮನೆ ಕೊಟ್ಟಿದ್ದರೂ ಅಪಾಯಕಾರಿ ಜಾಗದಲ್ಲಿನ ತಮ್ಮ ಹಳೆಯ ಮನೆ ಬಹುತೇಕರು ಖಾಲಿ ಮಾಡದಿರುವ ಬಗ್ಗೆ ಹಲವು ಸದಸ್ಯರು ಸಭೆಯಲ್ಲಿ ಪ್ರಸ್ತಾಪ ಮಾಡಿದರು. ಅಪಾಯಕಾರಿ ಪ್ರದೇಶದಲ್ಲಿನ ಮನೆಗಳನ್ನು ಬಾಡಿಗೆ ಕೊಟ್ಟವರು ಕೂಡ ಇದ್ದಾರೆ. ಹಾಗಾಗಿ ಈ ಎಲ್ಲಾ ಮನೆಗಳನ್ನು ಖಾಲಿ ಮಾಡಿಸಿ, ಆ ಮನೆಗಳನ್ನು ಸಂಪೂರ್ಣ ಬೀಳಿಸಬೇಕು. ನಂತರ ಆ ಜಾಗವನ್ನು ನಗರಸಭೆ ಆಸ್ತಿ ಎಂದು ಘೋಷಣೆ ಮಾಡಬೇಕು ಎಂದು ಸದಸ್ಯರು ಒತ್ತಾಯ ಮಾಡಿದರು. ಅಧ್ಯಕ್ಷೆ ಅನಿತಾ ಕೂಡ ಇದಕ್ಕೆ ಸಹಮತ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net