

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಒಕ್ಕಲಿಗ ಯುವ ನಾಯಕರು ತೆರೆಮರೆಯಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ. ಉತ್ತರಪ್ರದೇಶ, ಗುಜರಾತ್ ಚುನಾವಣೆಯಲ್ಲಿ ಹಲವು ಸಚಿವರು ಸೇರಿದ್ದಂತೆ ಹಲವು ಶಾಸಕರಿಗೆ ಟಿಕೆಟ್ ನೀಡಲಿಲ್ಲ. ಇದೇ ಮಾನದಂಡ ೨೦೨೩ ರಲ್ಲಿ ನಡೆಯುವ ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿಯೂ ಅನುಸರಿಸುವ ನಿರೀಕ್ಷೆಯಲ್ಲಿ ಟಿಕೆಟ್ ಆಕಾಂಕ್ಷಿಗಳಿದ್ದಾರೆ.
ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಕ್ಕಲಿಗ- ಅರೆಭಾಷೆ ಮತದಾರರ ಪ್ರಾಬಲ್ಯ ಹೆಚ್ಚಿದೆ. ಕಳೆದ ಹಲವು ದಶಕದಿಂದ ಒಕ್ಕಲಿಗ ಮತದಾರರು ಮಾಜಿ ಸಚಿವ ಬಿ.ಎ. ಜೀವಿಜಯಗೆ ಪಕ್ಷಾತೀತವಾಗಿ ಬೆಂಬಲ ನೀಡುತ್ತಾ ಬಂದಿದ್ದಾರೆ. ಬಿಜೆಪಿಯಲ್ಲಿ ಹಂತ- ಹಂತವಾಗಿ ಬೆಳೆದು ಬಂದಿರುವ ಹಲವು ಒಕ್ಕಲಿಗ ನಾಯಕರು ಎಂಎಲ್‌ಎ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ.
ಭವಿಷ್ಯದ ರಾಜಕೀಯ ದೃಷ್ಟಿಯಿಂದ ಎರಡನೇ ಹಂತದ ನಾಯಕರನ್ನು ಬೆಳೆಸುವ ಚಿಂತನೆ ಬಿಜೆಪಿ ಉನ್ನತಮಟ್ಟದಲ್ಲಿದೆ. ರಾಜ್ಯದಲ್ಲಿ ಒಂದಿಷ್ಟು ಹೊಸ ಮುಖಗಳಿಗೆ ಅವಕಾಶ ನೀಡುವುದರ ಮೂಲಕ ಬಿಜೆಪಿ ವರ್ಚಸ್ಸು ಹೆಚ್ಚಿಸುವ ಕಾರ್ಯಯೋಜನೆ ರೂಪಿತವಾಗಿದೆ. ಇದರ ಭಾಗವಾಗಿ ಮಡಿಕೇರಿ ಕ್ಷೇತ್ರದಲ್ಲಿಯೂ ಅವಕಾಶ ಸಿಗಲಿದೆ ಎಂಬ ಆಶಾಭಾವನೆಯಲ್ಲಿ ಹಲವರು ಇದ್ದಾರೆ.
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್, ಬಿಜೆಪಿ ಕೃಷಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಡಾ.ಬಿ.ಸಿ. ನವೀನ್‌ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಜೆ. ದೀಪಕ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುಲ್ಲೂರುಕೊಪ್ಪ ಮಾದಪ್ಪ, ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ್ ತಿಮ್ಮಯ್ಯ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಕೊಡಗು ಸ್ಥಳೀಯ ಸಂಸ್ಥೆ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪ್ರಭಾರಿಯೂ ಆಗಿರುವ ಬಿ.ಬಿ. ಭಾರತೀಶ್ ತೀವ್ರ ಪ್ರಯತ್ನ ನಡೆಸಿದ್ದರು. ಹಲವು ವರ್ಷದಿಂದ ಬಿಜೆಪಿ ಸಂಘಟನೆಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಭಾರತೀಶ್ ಈ ಬಾರಿ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಒಂದೇ ಕುಟಂಬದವರಿಗೆ ರಾಜಕೀಯದಲ್ಲಿ ಹೆಚ್ಚಿನ ಅವಕಾಶ ನೀಡುತ್ತಿರುವುದಕ್ಕೆ ಉನ್ನತ ಮಟ್ಟದಲ್ಲಿ ಆಕ್ಷೇಪ ವ್ಯಕ್ತವಾಗುತ್ತಿದೆ.
ಬಿಜೆಪಿ ವೈದ್ಯಕೀಯ ಪ್ರಕೋಷ್ಠ ಅಧ್ಯಕ್ಷರಾಗಿ ಗಮನ ಸೆಳೆದ ಡಾ.ಬಿ.ಸಿ. ನವೀನ್‌ಕುಮಾರ್, ಬಿಜೆಪಿ ಕೃಷಿ ಮೋರ್ಚಾ ರಾಜ್ಯ ಕಾರ್ಯದರ್ಶಿಯಾಗಿ ರಾಜ್ಯಾದ್ಯಂತ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಹಲವು ವಿಚಾರಗಳ ಬಗ್ಗೆ ಜ್ಞಾನ ಹೊಂದಿರುವ ಡಾ. ಬಿ.ಸಿ. ನವೀನ್‌ಕುಮಾರ್ ಅಭಿವೃದ್ಧಿ ರಾಜಕೀಯದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಉನ್ನತಮಟ್ಟದಲ್ಲಿ ಹೊಂದಿರುವ ಸಂಪರ್ಕ ಬಳಸಿ ಕೊಂಡು ಟಿಕೆಟ್‌ಗೆ ಪ್ರಯತ್ನಿಸುತ್ತಿದ್ದಾರೆ.
ಸೋಮವಾರಪೇಟೆ ತಾಲೂಕು ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷರಾಗಿ ಸಮಾಜದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಹಾನಗಲ್ಲು ಜಿಲ್ಲಾ ಪಂಚಾಯಿತಿ ಕ್ಷೇತ್ರದ ಮಾಜಿ ಸದಸ್ಯ ಬಿ.ಜೆ. ದೀಪಕ್ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಸೋಮವಾರಪೇಟೆಯಲ್ಲಿ ವಕೀಲರಾಗಿ ಕಾರ್ಯನಿರ್ವಹಿಸುತ್ತಿರುವ ದೀಪಕ್ ಒಳ್ಳೆಯ ವ್ಯಕ್ತ ಎಂಬ ಕಾರಣಕ್ಕಾಗಿ ಜನಬೆಂಬಲ ಹೊಂದಿದ್ದಾರೆ.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿರುವ ಹುಲ್ಲೂರುಕೊಪ್ಪ ಮಾದಪ್ಪ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಜನಪ್ರತಿನಿಧಿ ವಿರುದ್ಧ ಪಾಳೆಯದಲ್ಲಿ ಸಕ್ರಿಯವಾಗಿ ಕಾಣಿಸಿಕೊಂಡಿದ್ದ ಮಾದಪ್ಪ ತಂತ್ರಗಾರಿಕೆಯ ರಾಜಕೀಯದಲ್ಲಿ ತಲ್ಲೀನರಾಗಿದ್ದಾರೆ. ಸೋಮವಾರಪೇಟೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರೂ ಆಗಿರುವ ಇವರು ಅವಕಾಶ ಸಿಕ್ಕಲ್ಲಿ ಅದೃಷ್ಟ ಪರೀಕ್ಷೆಗೆ ಸಿದ್ಧರಾಗಿದ್ದಾರೆ.
ಚೌಡ್ಲು ಗ್ರಾಮ ಪಂಚಾಯಿತಿ ಆಧ್ಯಕ್ಷರಾಗಿ ಅಭಿವೃದ್ಧಿ ಹರಿಕಾರ ಎಂದು ಗುರುತಿಸಲ್ಪಟ್ಟಿರುವ ಬಿಜೆಪಿ ಯುವ ನೇತಾರ ಮಹೇಶ್ ತಿಮ್ಮಯ್ಯ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯರೂ ಆಗಿರುವ ಮಹೇಶ್ ತನ್ನದೇ ಆದ ಶೈಲಿಯಲ್ಲಿ ರಾಜಕೀಯ ಮಾಡುವ ಯುವ ಮುಖಂಡರಾಗಿದ್ದಾರೆ.
ಕೈ ಒಕ್ಕಲಿಗರ ಪೈಪೋಟಿ
ಕಾಂಗ್ರೆಸ್ ಟಿಕೆಟ್‌ಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ಅರ್ಜಿ ಸಲ್ಲಿಸಿರುವ ಆರು ಆಕಾಂಕ್ಷಿಗಳ ಪೈಕಿ ಐವರು ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿರುವುದು ವಿಶೇಷ. ಒಕ್ಕಲಿಗ ಸಮುದಾಯಕ್ಕೆ ಸೇರಿದ ಬಿ.ಎ. ಜೀವಿಜಯ, ಕೆ.ಪಿ. ಚಂದ್ರಕಲಾ, ಡಾ.ಮಂಥರ್ ಗೌಡ, ಕೆ.ಕೆ. ಮಂಜುನಾಥ್‌ಕುಮಾರ್, ಹರಪಳ್ಳಿ ರವೀಂದ್ರ ಟಿಕೆಟ್‌ಗಾಗಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ಐವರು ಒಕ್ಕಲಿಗ ಆಕಾಂಕ್ಷಿಗಳ ನಡುವೆ ವೀರಶೈವ- ಲಿಂಗಾಯಿತ ಸಮುದಾಯಕ್ಕೆ ಸೇರಿದ ಎಚ್.ಎಸ್. ಚಂದ್ರಮೌಳಿ ಟಿಕೆಟ್‌ಗೆ ಪ್ರಯತ್ನ ನಡೆಸುತ್ತಿದ್ದಾರೆ.
ಜೆಡಿ(ಎಸ್) ಕೊಡವ
ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಕೊಡವ ಸಮುದಾಯಕ್ಕೆ ಸೇರಿದ ನಾಪಂಡ ಮುತ್ತಪ್ಪ ಕ್ಷೇತ್ರ ವ್ಯಾಪ್ತಿಯಲ್ಲಿ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇವರು ಕೂಡ ತಮ್ಮ ಗೆಲುವಿಗೆ ಒಕ್ಕಲಿಗ ಮತದಾರರನ್ನು ನೆಚ್ಚಿಕೊಂಡಿದ್ದಾರೆ.ಅದಕ್ಕಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಕುಟುಂಬವನ್ನು ಅವಲಂಬಿಸಿದ್ದಾರೆ.
ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ, ಎಚ್.ಡಿ. ರೇವಣ್ಣ, ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ಮೂಲಕ ಒಕ್ಕಲಿಗರ ಮತ ಜೆಡಿಎಸ್‌ಗೆ ಬರುವಂತೆ ಮಾಡಲು, ಸಿ.ಎಂ. ಇಬ್ರಾಹಿಂ ಮೂಲಕ ಮುಸ್ಲಿಂ ಮತ ಸೆಳೆಯುವ ಕಾರ್ಯತಂತ್ರವನ್ನು ಜೆಡಿಎಸ್ ರೂಪಿಸುತ್ತಿದೆ.