

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ರಸ್ತೆ ಅಭಿವೃದ್ಧಿ ಸೇರಿದ್ದಂತೆ ವಿವಿಧ ವಿಚಾರಕ್ಕೆ ಸಂಬಂಧಿಸಿದ್ದಂತೆ ಬಹಿರಂಗವಾಗಿ ಟೀಕೆ ವ್ಯಕ್ತವಾಗುತ್ತಿರುವಾಗ ಪಕ್ಷದವರು ಶಾಸಕರ ಪರ ನಿಲ್ಲುತ್ತಿಲ್ಲ ಎಂದು ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅತೃಪ್ತಿ ವ್ಯಕ್ತ ಪಡಿಸಿದರು.
ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ ಅಧ್ಯಕ್ಷತೆಯಲ್ಲಿ ಸೋಮವಾರ ಓಂಕಾರ ಸದನದಲ್ಲಿ ಆಯೋಜಿಸಿದ್ದ ಬಿಜೆಪಿ ಜಿಲ್ಲಾ ವಿಶೇಷ ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದರು.
ಮಳೆಯಿಂದಾಗಿ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ. ರಸ್ತೆ ವಿಚಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟಕೆಟ್ಟದಾಗಿ ಹಾಕುತ್ತಿ
ದ್ದಾರೆ. ಈ ಚರ್ಚೆಯಲ್ಲಿ ಟೀಕಕಾರಕ್ಕೆ ಪೂರಕವಾಗಿ ನಮ್ಮವರು ಪ್ರತಿಕ್ರಿಯಿಸುತ್ತಿದ್ದಾರೆ. ಮೂವರು ಶಾಸಕರು ಹೊರತು ಪಡಿಸಿದ್ದಂತೆ ಪಕ್ಷದ ವರು ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲು ಇರುವ ಪ್ರತಿಕೂಲ ಪರಿಸ್ಥಿತಿ ಬಗ್ಗೆ ಜನರಿಗೆ ಮನವರಿಕೆ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿ ದರು.
ಕೆಲವೆಡೆ ರಸ್ತೆ ವಿಚಾರಕ್ಕೆ ಸಂಬಂಧಿಸಿದ್ದಂತೆ ನಡೆದ ಪ್ರತಿಭಟನೆಯಲ್ಲಿ ನಮ್ಮವರೂ ಪಾಲ್ಗೊಂಡಿರುವುದು ಬೇಸರದ ವಿಚಾರ. ಮಳೆಯಿಂದಾಗಿ ಮಿಕ್ಸಿಂಗ್ ಪ್ಲಾಂಟ್ ಪ್ರಾರಂಭವಾಗಿಲ್ಲ. ಹೀಗಿದ್ದರೂ, ನಮ್ಮ ವಿರೋಧಿಗಳೊಂದಿಗೆ ನಮ್ಮವರು ಸೇರಿಕೊಂಡಿರುವುದು ಸರಿಯಲ್ಲ. ವಾಸ್ತವ ವಿಚಾರ ಜನತೆಗೆ ತಿಳಿಸಿಕೊಡಬೇಕೆಂದು ಮನವಿ ಮಾಡಿದರು.
ಬಿ.ಎಸ್. ಯಡಿಯೂರಪ್ಪ ಸಿಎಂ ಆಗಿದ್ದಾಗ ಕೊಡಗಿನ ಅಭಿವೃದ್ಧಿಗೆ ಬಿಡುಗಡೆಯಾದ ಅನುದಾನ ಇನ್ನೂ ಖರ್ಚಾಗಿಲ್ಲ. ಸರ್ಕಾರದಲ್ಲಿ ಹಣಕಾಸಿನ ಸಮಸ್ಯೆ ಇಲ್ಲ. ಸಿಎಂ ಬಸವರಾಜು ಬೊಮ್ಮಾಯಿ ಕೂಡ ಕೊಡಗಿಗೆ ಅಗತ್ಯವಾದ ಅನುದಾನ ಒದಗಿಸುತ್ತಿದ್ದಾರೆ. ಕೇಂದ್ರ- ರಾಜ್ಯ ಸರ್ಕಾರ ಕೃಷಿಕರಿಗೆ ಸೂಕ್ತ ಪರಿಹಾರ ನೀಡಿದೆ. ಪ್ರಕೃತಿ ವಿಕೋಪದಿಂದ ಫಸಲು ಹಾನಿಗೀಡಾದ ಬೆಳೆಗಾರರ ಖಾತೆಗೆ ನೇರವಾಗಿ ಪರಿಹಾರ ಹಣ ಜಮಾ ಆಗಲಿದೆ ಎಂದರು.
ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ನಮ್ಮ ವಿರುದ್ಧ ವಾಗ್ದಾಳಿ ನಡೆಯುತ್ತಿದೆ. ಈ ವಿಚಾರದಲ್ಲಿ ತಲೆಕೆಡಿಸಿಕೊಳ್ಳಬಾರದೆಂದು ನಾನು ಸಾಮಾಜಿಕ ಜಾಲತಾಣ ಗಮನಿಸುವುದಿಲ್ಲ. ಆದರೆ, ಕೆಲವರು ಗಮನಕ್ಕೆ ತಂದಾಗ ಮಾತ್ರ ಗಮನಿಸುತ್ತೇನೆ. ಸಾಮಾಜಿಕ ಜಾಲತಾಣಗಳು ಯುವಜನರ ಮೇಲೆ ಪ್ರಭಾವ ಬೀರುತ್ತಿದ್ದು, ನಮ್ಮ ಪಕ್ಷದವರು ಸಾಮಾಜಿಕ ಜಾಲತಾಣದಲ್ಲಿ ಕ್ರಿಯಾಶೀಲರಾಗಬೇಕೆಂದರು. ಇಲ್ಲದಿದ್ದಲ್ಲಿ ನಮ್ಮ ವಿರುದ್ಧ ಬಂದ ಅಭಿಪ್ರಾಯವೇ ಸತ್ಯ ಎಂಬ ನಂಬಿಕೆ ಮೂಡುತ್ತದೆ ಎಂದು ಕಳವಳ ವ್ಯಕ್ತ ಪಡಿಸಿದರು.
ಶಾಸಕರು ಆಕಾಶದಿಂದ ಬಂದವರಲ್ಲ. ಪಕ್ಷ ಹಾಗೂ ಜನಪ್ರತಿನಿಧಿಗಳು ಕೈಜೋಡಿಸಬೇಕು. ಅಭ್ಯರ್ಥಿ ವಿಚಾರ ಸೇರಿದ್ದಂತೆ ಪಕ್ಷದ ಆಂತರಿಕ ವಿಷಯ ಹೊರಗೆ ಚರ್ಚಿಸಬಾರದು. ನಾಲ್ಕು ಗೋಡೆ ಒಳಗೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಬೇಕು. ಬಿಜೆಪಿ ಮೇಲಿನ ವಿಶ್ವಾಸ ಉಳಿಸಿಕೊಳ್ಳ ಬೇಕು. ತಪ್ಪುಗಳನ್ನು ನಾಲ್ಕು ಗೋಡೆ ನಡುವೆ ಚರ್ಚಿಸುವ. ಅಧಿಕಾರ ಇಲ್ಲದಿದ್ದಲ್ಲಿ ಯಾರು ನಮ್ಮನ್ನು ಮಾತನಾಡಿಸುವುದಿಲ್ಲ ಎಂಬ ಅರಿವು ಇರಬೇಕೆಂದರು.
ಕೊಡಗಿನಲ್ಲಿ ಪಕ್ಷದ ಸಂಘಟನೆ ವಿಚಾರದಲ್ಲಿ ಯಾವ ಕೊರತೆಯು ಇಲ್ಲ. ವಿಧಾನಸಭೆ, ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಸಮೀಪಿಸುತ್ತಿದೆ. ಈ ಬಾರಿ ೫ ತಾಪಂಗೆ ಚುನಾವಣೆ ನಡೆಯಲಿದೆ. ಯಾವ ಸಂದರ್ಭದಲ್ಲಿ ಬೇಕಾದರೂ ಜಿಪಂ, ತಾಪಂ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ. ಚುನಾವಣೆಯಲ್ಲಿ ಗೆಲುವು ಸಾಧಿಸಲು ಪ್ರತಿಯೊಬ್ಬರು ಗಮನ ಹರಿಸಬೇಕೆಂದರು.
ಡಬಲ್ ಇಂಜಿನ್ ಸರ್ಕಾರ ಆಗಿರುವುದರಿಂದ ಬಿಜೆಪಿ ಮೇಲೆ ಜನರ ನಿರೀಕ್ಷೆ ಹೆಚ್ಚಿದೆ. ಪ್ರತಿಪಕ್ಷವಾಗಿ ಚುನಾವಣೆ ಎದುರಿಸುವುದು ಸುಲಭ. ಆಡಳಿತಾರೂಢ ಪಕ್ಷವಾಗಿ ನಾವು ಮಾಡಿರುವ ಕೆಲಸ ಕಾರ್ಯದ ಆಧಾರದಲ್ಲಿ ಮತಯಾಚನೆ ಮಾಡಬೇಕು. ಕೇಂದ್ರ- ರಾಜ್ಯ ಸರ್ಕಾರದ ಸಾಧನೆ ಕುರಿತು ವಿಸ್ತಾರವಾದ ಕೈಪಿಡಿ ಶೀಘ್ರ ಬರಲಿದೆ. ಇದನ್ನು ಪ್ರತಿಯೊಬ್ಬರಿಗೂ ತಲುಪಿಸಬೇಕೆಂದರು.
ಪ್ರಕೃತಿ ವಿಕೋಪ, ಕೋವಿಡ್‌ನಿಂದ ಜನತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರು. ಪ್ರತಿಕೂಲ ಪರಿಸ್ಥಿತಿಯನ್ನು ಸರ್ಕಾರ ಸಮರ್ಥವಾಗಿ ನಿಭಾಯಿ ಸಿದೆ. ಪ್ರಕೃತಿ ವಿಕೋಪ, ಕೋವಿಡ್ ಸಂದರ್ಭದಲ್ಲಿ ಮಾಡಿದ ಕೆಲಸ ಕಾರ್ಯ ಸೇರಿದ್ದಂತೆ ಕೇಂದ್ರ- ರಾಜ್ಯ ಸರ್ಕಾರದ ಸಾಧನೆ ಜನರಿಗೆ ಮುಟ್ಟಿಸುವ ಕೆಲಸ ಮಾಡಬೇಕೆಂದು ಕೆ.ಜಿ. ಬೋಪಯ್ಯ ಹೇಳಿದರು.
ವೇದಿಕೆಯಲ್ಲಿ ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ, ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್‌ಕುಮಾರ್, ಕರ್ನಾಟಕ ಪಶ್ಚಿಮಘಟ್ಟ ಕಾರ್ಯಪಡೆ ಮಾಜಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ಮಾಜಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್, ರಾಜ್ಯ ಶಿಸ್ತು ಸಮಿತಿ ಸದಸ್ಯೆ ಪಟ್ಟಡ ರೀನಾ ಪ್ರಕಾಶ್ ಇದ್ದರು.
ಕುಂಞಂಗಡ ಅರುಣ್ ಭೀಮಯ್ಯ ನಿರೂಪಿಸಿದರು. ಹುಲ್ಲೂರುಕೊಪ್ಪ ಮಾದಪ್ಪ ಸ್ವಾಗತಿಸಿದರು. ಬಿ.ಕೆ. ಅರುಣ್‌ಕುಮಾರ್ ಪ್ರಾರ್ಥಿಸಿ ದರು.
ಶೀಘ್ರ ಶಂಕುಸ್ಥಾಪನೆ
ಬಿಜೆಪಿ ಜಿಲ್ಲಾ ಕಾರ್ಯಾಲಯ ಕಟ್ಟಡ ನಿರ್ಮಾಣಕ್ಕೆ ಶೀಘ್ರ ಶಂಕುಸ್ಥಾಪನೆ ನೆರವೇರಿಸಲಾಗುವುದು. ನೀಲಿನಕ್ಷೆ ಸಿದ್ಧವಾಗಿದ್ದು, ೬ ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದೆಂದು ಪ್ರಾಸ್ತಾವಿಕವಾಗಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ ಹೇಳಿ ದರು.
ಶಿಸ್ತಿನ ಪಕ್ಷವಾಗಿರುವುದರಿಂದ ಬೂತ್, ಮಂಡಲ, ಜಿಲ್ಲಾ ಕಾರ್ಯಕಾರಿಣಿ ಕ್ರಮಬದ್ಧವಾಗಿ ನಡೆಯುತ್ತಿದೆ. ಪಕ್ಷದ ಸಂಘಟನೆ ವ್ಯವಸ್ಥಿತವಾಗಿ ನಡೆಯುತ್ತಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಅವಧಿಯಲ್ಲಿ ಪೂರ್ಣ ಬಹುಮತ ಸಿಕ್ಕಿರಲಿಲ್ಲ. ೨೦೨೩ ರಲ್ಲಿ ೧೫೦ ಸ್ಥಾನ ಗೆಲ್ಲುವ ಗುರಿ ಮುಟ್ಟಬೇಕಾಗಿದೆ. ಚುನಾವಣೆ ಎದುರಿಸಲು ಪಕ್ಷ ಸಂಘಟನಾತ್ಮಕವಾಗಿ ಸಜ್ಜಾಗಿದೆ ಎಂದರು.
ಟಿಪ್ಪು ನಿಜ ಕನಸ್ಸುಗಳು ನಾಟಕ ವೀಕ್ಷಿಸಿ
ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಅವರ ಟಿಪ್ಪು ನಿಜ ಕನಸ್ಸುಗಳು ನಾಟಕ ಪ್ರತಿಯೊಬ್ಬರು ವೀಕ್ಷಿಸಬೇಕು. ಟಿಪ್ಪು ನಡೆಸಿದ ದೌರ್ಜನ್ಯದ ವಾಸ್ತವ ವಿಚಾರ ನಾಟಕದಲ್ಲಿದೆ ಎಂದು ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ಜಿ. ಬೋಪಯ್ಯ ಹೇಳಿದರು.
ಕೊಡಗು ಜಿಲ್ಲಾ ಬಿಜೆಪಿ ಸೋಮವಾರ ಓಂಕಾರ ಸದನದಲ್ಲಿ ಜಿಲ್ಲಾಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಬಿಜೆಪಿ ಜಿಲ್ಲಾ ವಿಶೇಷ ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದರು.
ರಂಗಾಯಣದಲ್ಲಿ ಭಾನುವಾರ ಮೊದಲ ಪ್ರದರ್ಶನ ವೀಕ್ಷಿಸಿದ್ದೇನೆ. ೨೫೦ ಪ್ರೇಕ್ಷಕರಿಗೆ ಆಸನ ವ್ಯವಸ್ಥೆ ಇದೆ. ಪ್ರಥಮ ಪ್ರದರ್ಶನ ವೇಳೆ ೫೦೦ಕ್ಕೂ ಹೆಚ್ಚು ಪೊಲೀಸರು ಹೊರಗೆ ಇದ್ದರು. ನಿಜ ವಿಷಯ ಹೇಳಲು ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸುವಂತಾಗಿರುವುದು ಸರಿಯಲ್ಲ ಎಂದರು.
೩ ದಿನದ ಮಟ್ಟಿಗೆ ಬುಕ್ಕಿಂಗ್ ಆಗಿದೆ. ಅಡ್ಡಂಡ ಸಿ. ಕಾರ್ಯಪ್ಪ ಅವರನ್ನು ಸಂಪರ್ಕಿಸಿ ಟಿಕೆಟ್ ಪಡೆದುಕೊಂಡು ನಾಟಕ ವೀಕ್ಷಿಸುವಂತೆ ಮನವಿ ಮಾಡಿದರು.