ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಆಸ್ತಿ ವೈಷಮ್ಯ ಹಿನ್ನೆಲೆಯಲ್ಲಿ ಗುಂಡು ಹಾರಿಸಿ ವ್ಯಕ್ತಿಯೊಬ್ಬರ ಹತ್ಯೆಗೈಯಲು ಪ್ರಯತ್ನಿಸಿದ ಘಟನೆ ಬಿಳಿಗೇರಿ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ. ಗುಂಡು ಹಾರಿಸಿದ್ದಕ್ಕೆ ಪ್ರತಿಕಾರವಾಗಿ ಮತ್ತೊಬ್ಬ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ.
ಮಡಿಕೇರಿ ತಾಲೂಕು ವ್ಯಾಪ್ತಿಯ ಬಿಳಿಗೇರಿಯಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದ್ದಂತೆ ಎರಡು ಕುಟುಂಬಗಳ ನಡುವೆ ಕಲಹ ಏರ್ಪಟ್ಟಿತ್ತು. ಈ ವಿಚಾರಕ್ಕೆ ಸಂಬಂಧಿಸಿದ್ದಂತೆ ಎರಡು ಕುಟುಂಬಗಳ ನಡುವೆ ಹೊಡೆದಾಟ ನಡೆದಿತ್ತು. ಈ ಸಂದರ್ಭ ವ್ಯಕ್ತಿಯೊಬ್ಬನ ಮೇಲೆ ಗುಂಡು ಹಾರಿಸಿ ಕೊಲೆ ಮಾಡುವ ಪ್ರಯತ್ನ ನಡೆದಿದೆ.
ದಂಬೆಕೋಡಿ ತೀರ್ಥ ಎಂಬಾತನ ಮೇಲೆ ಭುಜಂಗಯ್ಯ ಎಂಬಾತ ಗುಂಡು ಹಾರಿಸಿದ್ದಾನೆ. ಗುಂಡು ಹಾರಿಸಿದಕ್ಕೆ ಪ್ರತಿಕಾರವಾಗಿ ದಂಬೆಕೋಡಿ ನಿಶ್ಚಲ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಗಂಭೀರ ಸ್ವರೂಪದ ಪೆಟ್ಟಾಗಿದೆ. ಕೈ ಮುರಿದಿದ್ದು, ತಲೆಗೂ ಗಂಭೀರ ಪೆಟ್ಟಾಗಿದೆ.
ಆಸ್ತಿ ವೈಷಮ್ಯ ಹಿನ್ನೆಲೆಯಲ್ಲಿ ಬುಧವಾರ ಮಾತುಕತೆ ನಡೆಸಲು ಊರಿನಲ್ಲಿ ಸಭೆ ಆಯೋಜಿಸಲಾಗಿತ್ತು. ಪಿಕ್‌ಅಪ್ ವಾಹನದಲ್ಲಿ ತೀರ್ಥ ಸಭೆ ಗೆ ಆಗಮಿಸುತ್ತಿದ್ದ ಸಂದರ್ಭ ಭುಜಂಗಯ್ಯ ದಾರಿ ಮಧ್ಯೆಯಲ್ಲಿ ವಾಹನ ತಡೆದು ಬಂದೂಕಿನಿಂದ ಗುಂಡು ಹಾರಿಸಿದ್ದ. ವಾಹನದಲ್ಲಿದ್ದ ತೀರ್ಥ ತಕ್ಷಣ ಬಗ್ಗಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ. ಗುಂಡು ವಾಹನಕ್ಕೆ ತಗುಲಿದೆ.
ತೀರ್ಥ ಅವರ ತೋಟ ಭೋಗ್ಯಕ್ಕೆ ಪಡೆದ ವ್ಯಕ್ತಿಗಳು, ನಿಶ್ಚಲ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದರು. ಮಡಿಕೇರಿ ಡಿವೈಎಸ್ಪಿ ಗಜೇಂದ್ರಪ್ರಸಾದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.