

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಬೇಟೆ ನಿಷೇಧ ಆಗಿರುವುದರಿಂದ ಬೇಟೆ ಕುರಿತು ಪ್ರಕಟವಾಗಿರುವ ಕೃತಿಗಳನ್ನು ಸಂರಕ್ಷಿಸಬೇಕೆಂದು ಸಾಹಿತಿ ಮಾಳೇಟಿರ ಸೀತಮ್ಮ ವಿವೇಕ್ ಕರೆ ನೀಡಿದರು.
ಅಲ್ಲಾರಂಡ ರಂಗ ಚಾವಡಿ ಹಾಗೂ ಸಿರಿಗನ್ನಡ ವೇದಿಕೆ ಕೊಡಗು ಸಂಯುಕ್ತಾಶ್ರಯದಲ್ಲಿ ಮಂಗಳವಾರ ಮಡಿಕೇರಿ ಕೊಡವ ಸಮಾಜ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬೇಟೆ ಸಾಹಿತ್ಯೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಬೇಟೆ ಕೊಡಗಿನ ಸಂಸ್ಕೃತಿಯ ಒಂದು ಭಾಗವಾಗಿತ್ತು. ಬೇಟೆ ಸಂಸ್ಕೃತಿ ಕುರಿತು ಮುಂದಿನ ಪೀಳಿಗೆಗೆ ಪರಿಚಯಿಸಲು ಬೇಟೆ ಸಾಹಿತ್ಯ ಸಂರಕ್ಷಿಸಬೇಕೆಂದರು.
ಅನಾದಿ ಕಾಲದಲ್ಲಿ ಕೊಡಗಿನಲ್ಲಿ ಬೇಟೆ ಆಡುವ ಪದ್ಧತಿ ಇತ್ತು. ಕಾಡುಪ್ರಾಣಿಗಳಿಗೆ ಬೆಳೆ, ಜಾನುವಾರು ರಕ್ಷಣೆ ಮಾಡುವ ಉದ್ದೇಶವಾಗಿತ್ತು. ಕೃಷಿ ಫಸಲಿಗೆ ಹಾನಿವುಂಟು ಮಾಡುವ ಹಾಗೂ ಜಾನುವಾರುಗಳನ್ನು ಬಲಿ ತೆಗೆದುಕೊಳ್ಳುವ ಪ್ರಾಣಿಗಳನ್ನು ಮಾತ್ರ ಬೇಟೆಯಾಡಲಾಗುತ್ತಿತ್ತು. ಹಬ್ಬಹರಿದಿನದ ಸಂದರ್ಭ ಕಟ್ಟುಪಾಡು ವಿಧಿಸುವುದರ ಮೂಲಕ ಪ್ರಾಣಿಗಳ ವಂಶಾಭಿವೃದ್ಧಿಗೆ ಅವಕಾಶ ಮಾಡಿಕೊಡಲಾಗುತ್ತಿತ್ತು.
ವನ್ಯಜೀವಿ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದ ಮೇಲೆ ಬೇಟೆ ಸಂಪೂರ್ಣ ನಿಷೇಧಿಸಲ್ಪಟ್ಟಿದೆ ಎಂದು ಸೀತಮ್ಮ ವಿವೇಕ್ ಹೇಳಿದರು.
ಬೇಟೆ ಕೃತಿ ಅನಾವರಣ ಮಾಡಿದ ಸಾಹಿತಿ ನಾರಾಯಣ ಸ್ವಾಮಿ ಮಾತನಾಡಿ, ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡವರು ದಾರಿ ತಪ್ಪಿದ ಉದಾಹರಣೆಗಳಿಲ್ಲ. ಪುಸ್ತಕಗಳಿಗಿಂತ ಮಿಗಿಲಾದ ಸ್ನೇಹಿತರಿಲ್ಲ ಎಂದರು. ಬೇಟೆ ಸಾಹಿತ್ಯದ ಕುರಿತು ವಕೀಲ ಕೆ.ಆರ್. ವಿದ್ಯಾಧರ್ ಮಾತನಾಡಿದರು.
ಕೊಡಗಿನ ಬೇಟೆ ಸಾಹಿತಿ ಬಿ.ಆರ್. ಜೋಯಪ್ಪ, ದೇವರಕಾಡ್ ಚಲನಚಿತ್ರ ನಿರ್ಮಾಪಕ ಅವಿನಾಶ್ ಶೆಟ್ಟಿ, ಕೊಡಗಿನಲ್ಲಿ ಕೊನೆಯ ಹುಲಿ ಮದುವೆ ಮಾಡಿದ ಕಲ್ಲುಮಾಡಂಡ ಜಿಮ್ಮಿ ಮಾದಯ್ಯ ಅವರನ್ನು ಸನ್ಮಾನಿಸಲಾಯಿತು. ರಂಗಕರ್ಮಿ ಮಾದೇಟಿರ ಬೆಳ್ಯಪ್ಪ, ಮಾಳೇಟಿರ ಮಧು ಬೇಟೆ ಕುರಿತಾದ ಹಾಡುಗಳನ್ನು ಹಾಡಿದರು.
ವೇದಿಕೆಯಲ್ಲಿ ಕೊಡಗಿನ ಪ್ರಥಮ ಬೇಟೆ ಸಾಹಿತಿ ಕಾಕೆಮಾನಿ (ಬಿ.ಡಿ. ಸುಬ್ಬಯ್ಯ) ಅವರ ಪುತ್ರ ಬಾಚಮಾಡ ಎಸ್. ವಸಂತ, ಅಲ್ಲಾರಂಡ ರಂಗ ಚಾವಡಿ ಹಾಗೂ ಸಿರಿಗನ್ನಡ ವೇದಿಕೆ ಕೊಡಗು ಘಟಕ ಅಧ್ಯಕ್ಷ ಅಲ್ಲಾರಂಡ ವಿಠಲ ನಂಜಪ್ಪ ಇದ್ದರು.