

ಮಡಿಕೇರಿ: ಗುಡ್ಡೆಹೊಸೂರಿನಲ್ಲಿ ಸಿದ್ದರಾಮಯ್ಯ ತೆರಳುತ್ತಿದ್ದ ಕಾರಿಗೆ ಮೊಟ್ಟೆ ಹೊಡೆದ ಸಂಪತ್ ಕಾಂಗ್ರೆಸ್ ಶಾಲು ಹಾಕಿರುವ ಚಿತ್ರ ಮಡಿಕೇರಿ ಶಾಸಕರ ಮನೆ ಆವರಣದಲ್ಲಿ ತೆಗೆಯಲಾಗಿದೆ ಎಂದು ಮಾಜಿ ಸಚಿವ ಬಿ.ಎ. ಜೀವಿಜಯ ಆರೋಪಿಸಿದ್ದಾರೆ.
ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಛಾಯಾಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದ್ದಲ್ಲಿ ಶಾಸಕರ ಮನೆ ಆವರಣದಲ್ಲಿ ತೆಗೆದಿರುವುದು ಗೊತ್ತಾಗುತ್ತದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
೭೦ ಲಕ್ಷ ರೂ. ಮೊತ್ತದ ಕಾಮಗಾರಿ ತುಂಡು ಗುತ್ತಿಗೆ ನಿರ್ವಹಿಸಿರುವ ಸಂಪತ್‌ನನ್ನು ಹೆದರಿಸಿ, ನನ್ನ ಬೆಂಬಲಿಗ ಎಂದು ಹೇಳಿಸಿದ್ದಾರೆ. ಹೆದರಿಕೊಂಡು ಗಿಳಿಪಾಠ ಹೇಳಿದ್ದಂತೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ನನಗೂ, ಸಂಪತ್‌ಗೂ ಸಂಬಂಧವಿಲ್ಲ. ಸಾಕಷ್ಟು ಜನರ ಮದುವೆ, ಸಾವಿಗೆ ಹೋಗಿದ್ದೇನೆ. ಅದೇ ರೀತಿ ಸಂಪತ್ ಸಹೋದರನ ಮದುವೆಯೂ ಹೋಗಿದ್ದೇನೆ. ಈ ಕುತಂತ್ರ ರಾಜಕೀಯದಿಂದ ಅವರಿಗೇನು ಲಾಭವಾಗುವುದಿಲ್ಲ ಎಂದಿದ್ದಾರೆ.
ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಶಾಸಕರೊಂದಿಗೆ ಗಣವೇಷ ಧರಿಸಿ ಸಂಪತ್ ಪಾಲ್ಗೊಂಡಿದ್ದ. ಕೊಡಗಿನ ಜನ ಶಾಸಕರನ್ನು ತಿರಸ್ಕರಿಸಲಿದ್ದಾರೆ. ಸಂಪತ್‌ನನ್ನು ಜೆಡಿಎಸ್‌ನ ಭರತ್ ನ್ಯಾಯಾಲಯದಲ್ಲಿ ಜಾಮೀನು ಕೊಟ್ಟು ಬಿಡಿಸಿಕೊಂಡು ಹೋಗಿದ್ದಾರೆಂದು ಜೀವಿಜಯ ಹೇಳಿದರು.