ಆಗಸ್ಟ್ ೨೬ ರಂದು ಮಡಿಕೇರಿಯಲ್ಲಿ ಬಿಜೆಪಿ ಜನಜಾಗೃತಿ ಸಮಾವೇಶ

robin devaiah - Copy
Published on

ಮಡಿಕೇರಿ: ಕೋಮುಭಾವನೆ ಕೆರಳಿಸುವವರ ವಿರುದ್ಧ ಜನಜಾಗೃತಿ ಮೂಡಿಸಲು ಆ.೨೬ ರಂದು ಮಡಿಕೇರಿ ಗಾಂಧಿ ಮೈದಾನದಲ್ಲಿ ಬೃಹತ್ ಜನಜಾಗೃತಿ ಸಮಾವೇಶ ಆಯೋಜಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ ಹೇಳಿದ್ದಾರೆ.

ಅಂದಿನ ಸಮಾವೇಶದಲ್ಲಿ ೧ ಲಕ್ಷ ಜನ ಸೇರಲಿದ್ದಾರೆ. ಪ್ರತಿ ಗ್ರಾಮದಿಂದ ಜನರನ್ನು ಕರೆದುಕೊಂಡು ಬರುವ ಜವಾಬ್ದಾರಿಯನ್ನು ಬಿಜೆಪಿ ಬೂತ್ ಸಮಿತಿಗಳಿಗೆ ನೀಡಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಆ.೨೬ ರಂದು ಕಾಂಗ್ರೆಸ್ ಆಯೋಜಿಸಿರುವ ಮಡಿಕೇರಿ ಚಲೋಗಾಗಿ ನಮ್ಮ ಸಮಾವೇಶ ಮುಂದೂಡುವುದಿಲ್ಲ. ನಮ್ಮ ಸಮಾವೇಶ ಆಯೋಜನೆಯತ್ತ ಗಮನ ಹರಿಸುತ್ತೇವೆ. ಪೊಲೀಸರು, ಜಿಲ್ಲಾಡಳಿತ ತಮ್ಮ ಪಾಲಿನ ಕೆಲಸ ಮಾಡಲಿದ್ದಾರೆ. ಸಮಾವೇಶಕ್ಕೆ ಆಗಮಿಸುವ ನಾಯಕರು, ಮಾತನಾಡುವವರ ಹೆಸರು ಶೀಘ್ರ ನಿರ್ಧಾರ ಮಾಡಲಾಗುವುದೆಂದರು.

೨೦೧೫ನೇ ಇಸವಿ ನವೆಂಬರ್ ೧೦ ರಂದು ಟಿಪ್ಪು ಜಯಂತಿ ಆಚರಣೆಯಿಂದ ಹತ್ಯೆಯಾಗಿರುವುದನ್ನು ಕೊಡಗಿನ ಜನತೆ ಮರೆತ್ತಿಲ್ಲ. ಕಲ್ಲು ಹೊಡೆದು ಹತ್ಯೆ ಮಾಡಿದ ತಾಲಿಬಾನ್ ಸಂಸ್ಕೃತಿ ಹೊಂದಿರುವವರಿಂದ ಮೊಟ್ಟೆ ಹೊಡೆದಿರುವುದನ್ನು ದೊಡ್ಡ ವಿಷಯ ಮಾಡುತ್ತಿದ್ದಾರೆಂದು ಅಸಮಾಧಾನ ವ್ಯಕ್ತ ಪಡಿಸಿದರು.

ಪೊಲೀಸರು ಮೊಟ್ಟೆ ಹೊಡೆದವರನ್ನು ಪತ್ತೆಹಚ್ಚಿ ಕ್ರಮ ತೆಗೆದುಕೊಳ್ಳಲಿದ್ದಾರೆ. ಬಿಜೆಪಿ ಕಾರ್ಯಕರ್ತರು ಮೊಟ್ಟೆ ಒಡೆಯುವ ಕೆಲಸ ಮಾಡಿಲ್ಲ. ಟಿಪ್ಪು ಜಯಂತಿ ಮಾಡಿದ್ದರಿಂದ ವಿಶ್ವ ಹಿಂದು ಪರಿಷತ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ದೇವಪಂಡ ಕುಟ್ಟಪ್ಪ ಹತ್ಯೆ ನಡೆದಿತ್ತು. ಟಿಪ್ಪು ಒಬ್ಬ ಸ್ವಾತಂತ್ರೃ ಹೋರಾಟಗಾರನೆಂದು ಬಿಂಬಿಸುವ ಕೆಲಸ ಆಗುತ್ತಿದೆ ಎಂದು ಟೀಕಿಸಿದರು.

ಟಿಪ್ಪು ೩೨ ಬಾರಿ ಕೊಡಗಿನ ಮೇಲೆ ದಾಳಿ ಮಾಡಿದ್ದಾಗ ಹಿಮ್ಮೆಟ್ಟಿಸಿದ್ದರು. ದೇವಾಟ್‌ಪರಂಬಿನಲ್ಲಿ ಮೋಸದಿಂದ ಸಾವಿರಾರು ಕೊಡವರ ಹತ್ಯೆ ಮಾಡಿದ್ದ. ಕೊಡವರು ಧನದ ಮಾಂಸ ತಿನ್ನುತ್ತಾರೆಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಎ.ಕೆ. ಸುಬ್ಬಯ್ಯ ಬೆಂಗಳೂರಿನ ಟೌನ್ ಹಾಲ್ ಎದುರು ಧನದ ಮಾಂಸ ತಿಂದರೆಂದು ಎಲ್ಲಾ ಕೊಡವರು ಧನದ ಮಾಂಸ ತಿನ್ನುವುದಿಲ್ಲ. ವೀರ ಸಾವರ್ಕರ್ ಬಗ್ಗೆ ಅಪಮಾನಕಾರಿ ಹೇಳಿಕೆ ನೀಡಿರುವುದಕ್ಕೆ ಸಿದ್ದರಾಮಯ್ಯ ವಿರುದ್ಧ ಆಕ್ರೋಶವಿದೆ ಎಂದರು.

ಗೋಷ್ಠಿಯಲ್ಲಿ ಬಿಜೆಪಿ ದಕ್ಷಿಣ ಕನ್ನಡ ಪ್ರಭಾರಿ ಬಿ.ಬಿ. ಭಾರತೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಹುಲ್ಲೂರುಕೊಪ್ಪ ಮಾದಪ್ಪ, ಕುಂಞಂಗಡ ಅರುಣ್ ಭೀಮಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net