

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಮಾನವ- ವನ್ಯಪ್ರಾಣಿಗಳ ಸಂಘರ್ಷದ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಘಟಕ ನೇತೃತ್ವದಲ್ಲಿ ಸೋಮವಾರ ಅರಣ್ಯ ಭವನ ಚಲೋ ಯಶಸ್ವಿಯಾಗಿ ನಡೆಯಿತು. ರೈತರು, ಕಾರ್ಮಿಕರು, ಆದಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಕೊಡಗಿನಲ್ಲಿ ಪ್ರಥಮ ಬಾರಿಗೆ ರೈತರು- ಕಾರ್ಮಿಕರು ಒಗ್ಗೂಡಿ ಪ್ರತಿಭಟನೆ ನಡೆಸಿರುವುದು ವಿಶೇಷ.
ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಘಟಕ ಹಾಗೂ ರೈತರು, ಕಾರ್ಮಿಕರು, ಆದಿವಾಸಿಗಳು ಮತ್ತು ಬುಡಕಟ್ಟು ಜನಾಂಗಗಳ ಅರಣ್ಯ ಹೋರಾಟ ಸಮಿತಿ ನೇತೃತ್ವದಲ್ಲಿ ಆಯೋಜಿತ ಪ್ರತಿಭಟನೆಯಲ್ಲಿ ವಿವಿಧ ರಾಜಕೀಯ ಪಕ್ಷ, ಸಂಘ- ಸಂಸ್ಥೆಗಳ ನೇತಾರರು, ಸದಸ್ಯರು ಪಾಲ್ಗೊಂಡಿದ್ದರು.
ಜನರಲ್ ಕೆ.ಎಸ್. ತಿಮ್ಮಯ್ಯ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸುವುದರ ಮೂಲಕ ವನ್ಯಜೀವಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡು ವಂತೆ ಆಗ್ರಹಿಸಿದರು. ಅರಣ್ಯಾಧಿಕಾರಿಗಳು, ಜನಪ್ರತಿನಿಧಿಗಳು, ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಶಾಶ್ವತ ಪರಿಹಾರ ಒದಗಿಸುವಂತೆ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಮುಖಂಡರು ಒತ್ತಾಯಿಸಿದರು. ಜನರಲ್ ತಿಮ್ಮಯ್ಯ ವೃತ್ತದಿಂದ ಅರಣ್ಯ ಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.
ಅರಣ್ಯ ಭವನದಲ್ಲಿ ತಮ್ಮ ಬೇಡಿಕೆಯ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಹಾಗೂ ಕೊಡಗು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ನಿರಂಜನ್ ಮೂರ್ತಿ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು. ಊರಿನಲ್ಲಿರುವ ಕಾಡು ಪ್ರಾಣಿಗಳನ್ನು ಸ್ಥಳಾಂತರ ಮಾಡಿ ಜಿಲ್ಲೆ ಯನ್ನು ಅವುಗಳ ಹಾವಳಿಯಿಂದ ಶಾಶ್ವತವಾಗಿ ಮುಕ್ತಗೊಳಿಸ ಬೇಕು, ಕಾಡು ಹಂದಿ ಹಾವಳಿ ತಡೆಯಲು ಕ್ರಮ ತೆಗೆದುಕೊಳ್ಳಬೇಕು, ಕಾಡು ಪ್ರಾಣಿಗಳಿಂದ ನಾಶವಾಗುವ ಗಿಡಕ್ಕೆ ಕನಿಷ್ಠ ೫ ಸಾವಿರ ಹಾಗೂ ಭತ್ತದ ಗದ್ದೆಗೆ ಏಕ್ರೆವಾರು ಕನಿಷ್ಠ ೬೦ ಸಾವಿರ ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ವನ್ಯಪ್ರಾಣಿಗಳ ದಾಳಿಯಾಗುವ ವ್ಯಕ್ತಿಯನ್ನು ಹುತಾತ್ಮ ಎಂದು ಪರಿಗಣಿಸಿ ಅವರ ಕುಟುಂಬಕ್ಕೆ ಪುನರ್ವಸತಿ ಕಲ್ಪಿಸಿಕೊಡಬೇಕು. ಆ ಕುಟುಂಬಗಳಿಗೆ ನಿವೃತ್ತಿ ವೇತನ, ಉಚಿತ ವಿದ್ಯಾಭ್ಯಾಸ ಸೇರಿದ್ದಂತೆ ವಿವಿಧ ಸವಲತ್ತು ಒದಗಿಸಬೇಕು. ಜಿಲ್ಲೆಯಲ್ಲಿ ಅರಣ್ಯ ಪ್ರವಾಸೋದ್ಯಮ ಸಂಪೂರ್ಣ ರದ್ದು ಮಾಡಬೇಕೆಂದು ಒತ್ತಾಯಿಸಿದರು.
ಸರ್ಕಾರದ ಖರ್ಚಿನಲ್ಲಿ ರೈತರ ಆಸ್ತಿ ರಕ್ಷಣೆಗೆ ಸೌರ ವಿದ್ಯುತ್ ಬೇಲಿ ಅಳವಡಿಸಬೇಕು, ದನದ ಕೊಟ್ಟಿಗೆ ನಿರ್ಮಾಣಕ್ಕೆ ನೀಡುತ್ತಿರುವ ಶೇ.೫೦ ರಷ್ಟು ಸಹಾಯಧನ ಶೀಘ್ರ ಬಿಡುಗಡೆ ಮಾಡಬೇಕು, ಸರ್ಕಾರ ವನ್ಯಪ್ರಾಣಿ ದಾಳಿ ಪರಿಹಾರ ನೀಡಿದ ನಂತರವೂ ಸಂತ್ರಸ್ತ ವ್ಯಕ್ತಿಗಳು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಹೆಚ್ಚಿನ ವಿಮಾ ಪರಿಹಾರ ಪಡೆದುಕೊಳ್ಳಲು ಸಹಾಯ ಮಾಡಬೇಕೆಂದರು.
ವನ್ಯಪ್ರಾಣಿ ದಾಳಿ ಭಯ ಇರುವ ಸ್ಥಳದ ವಿದ್ಯಾರ್ಥಿಗಳಿಗೆ ಅರಣ್ಯ ಇಲಾಖೆಯಿಂದ ವಾಹನ ವ್ಯವಸ್ಥೆ ಮಾಡಬೇಕು, ಕಾಫಿ ತೋಟ ರಕ್ಷಣೆಗೆ ಕೇಂದ್ರ- ರಾಜ್ಯ ಸರ್ಕಾರ ಗಮನ ಹರಿಸಬೇಕು, ಅರಣ್ಯ ನೀತಿ ರೂಪಿಸುವ ಅಧಿಕಾರಿಗಳ ಸಭೆ ಕೊಡಗಿನಲ್ಲಿ ಆಯೋಜಿಸಬೇಕೆಂದು ಒತ್ತಾಯಿಸಿದರು.
ಆದಿವಾಸಿ ಬುಡಕಟ್ಟು ಜನರನ್ನು ತೆರವು ಮಾಡಬಾರದು, ಆದಿವಾಸಿಗಳ ರಕ್ಷಣೆಗೆ ರೈಲ್ವೆ ಬ್ಯಾರಿಕೇಡ್ ನಿರ್ಮಿಸಬೇಕು. ಮರಗಳ ಮೇಲಿನ ಹಕ್ಕು ಸಂಪೂರ್ಣ ರೈತರಿಗೆ ನೀಡಬೇಕು. ಬ್ರಹ್ಮಗಿರಿ ಬೆಟ್ಟದ ಬೆಗೂರು ಕಾರಿಡಾರ್, ಕುಟ್ಟ ಭಾಗದ ಹೂವಿನಕಾಡು ತೋಟದಲ್ಲಿನ ಆನೆ ಕಾರಿಡಾರ್‌ಗಳನ್ನು ತಕ್ಷಣ ತೆರವುಗೊಳಿಸಬೇಕು. ಕೂಟಿಯಾಲ ಸೇತುವೆ ಸಂಪರ್ಕ ರಸ್ತೆ ಕಾಮಗಾರಿಗೆ ಇರುವ ತಡೆ ನಿವಾರಣೆ ಮಾಡ ಬೇಕೆಂದು ಆಗ್ರಹಿಸಿದರು.