

ಮಡಿಕೇರಿ: ಹಿಂದು ಜಾಗರಣ ವೇದಿಕೆ ನೇತೃತ್ವದಲ್ಲಿ ಅಖಂಡ ಭಾರತ ಸಂಕಲ್ಪ ದಿನದ ಪ್ರಯುಕ್ತ ಮಡಿಕೇರಿಯಲ್ಲಿ ಶುಕ್ರವಾರ ರಾತ್ರಿ ಬೃಹತ್ ಪಂಜಿನ ಮೆರವಣಿಗೆ ನಡೆಯಿತು.
ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಅಖಂಡ ಭಾರತದ ಸಂಕಲ್ಪಕ್ಕಾಗಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಪಂಜಿನ ಮೆರವಣಿಗೆಗೆ ಚಾಲನೆ ನೀಡಲಾಯಿತು. ಭಗವಾಧ್ವಜ ಮತ್ತು ಉರಿಯುವ ಪಂಜು ಹಿಡಿದ ಹಿಂದು ಪರ ಸಂಘಟನೆಗಳ ನೂರಾರು ಕಾರ್ಯಕರ್ತರು ದೇಶಭಕ್ತಿಯ ಘೋಷಣೆ ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿದರು.
ಮಡಿಕೇರಿಯ ಲಕ್ಷ್ಮಿ ನರಸಿಂಹ ಕಲ್ಯಾಣ ಮಂಟಪದ ಜನಾರ್ದನ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ೧೯೪೭ ರ ಆಗಸ್ಟ್ ೧೪ ರ ಮಧ್ಯರಾತ್ರಿ ದೇಶ ವಿಭಜನೆಗೊಂಡ ಇತಿಹಾಸದ ಕರಾಳ ಸತ್ಯವನ್ನು ದಿಕ್ಸೂಚಿ ಭಾಷಣಕಾರರಾಗಿ ಆಗಮಿಸಿದ್ದ ಉಡುಪಿಯ ಖ್ಯಾತ ವಾಗ್ಮಿ ಶ್ರೀಕಾಂತ್ ಶೆಟ್ಟಿ ಎಳೆಎಳೆಯಾಗಿ ವಿವರಿಸಿದರು.
ಸಹಸ್ರಾರಾರು ದೇಶಭಕ್ತರ ತ್ಯಾಗ - ಬಲಿದಾನ - ಹೋರಾಟಗಳಿಂದ ಪಡೆದ ಅಖಂಡ ಭಾರತದ ಸ್ವಾತಂತ್ರ್ಯವನ್ನು ಮತೀಯ ನೆಲೆಗಟ್ಟಿನಲ್ಲಿ ಚೂರು ಚೂರು ಮಾಡಿದ ಅಂದಿನ ಅವಕಾಶವಾದಿಗಳ ನಿಜ ಬಣ್ಣವನ್ನು ಇಂದಿನ ಮತ್ತು ಮುಂದಿನ ತಲೆಮಾರಿಗೆ ತಿಳಿಸಬೇಕಿರುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.
ಅಂದು ಕಳೆದುಕೊಂಡಿರುವ ಭಾರತದ ಭೂಭಾಗಗಳನ್ನು ಮತ್ತೆ ಪಡೆಯುವ ಮೂಲಕ ಈ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತೆತ್ತ ಎಲ್ಲ ಸ್ವಾತಂತ್ರ್ಯ ಯೋಧರಿಗೆ ಗೌರವ ಸಮರ್ಪಣೆ ಮಾಡಬೇಕಾಗಿದೆ. ದೇಶದೊಳಗೆ ನಡೆಯುತ್ತಿರುವ ಮತಾಂಧ ಶಕ್ತಿಗಳ ವಿಧ್ವಂಶಕ ಕೃತ್ಯಗಳಿಗೆ ಸೂಕ್ತ ರೀತಿ ತಿರುಗೇಟು ನೀಡುವ ಮೂಲಕ ಸಮಾಜಕ್ಕೆ ಶಕ್ತಿ ತುಂಬಬೇಕಾಗಿದೆ ಎಂದು ಕರೆ ನೀಡಿದರು.
ಸಮಾಜದಲ್ಲಿ ಜಾಗೃತಿ ಮೂಡಿಸುತ್ತಾ, ಸಂಘಟಿತ ಸಮಾಜವೇ ಸಮಾಜ ವಿರೋಧಿ ಶಕ್ತಿಗಳನ್ನು ಹುಟ್ಟಡಗಿಸುವ ಕೆಲಸ ಮಾಡಬೇಕಿದೆ. ಈ ಉದ್ದೇಶದ ಭಾಗವಾಗಿ ಹಿಂದು ಜಾಗರಣ ವೇದಿಕೆಯು ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮ ನಡೆಸುತ್ತಿದೆ. ಮುಂದೊಂದು ದಿನ ಅಖಂಡ ಭಾರತ ನಿರ್ಮಾಣವನ್ನು ಜಾಗೃತ ಸಮಾಜವೇ ಮಾಡಲಿದೆಯೆಂದು ಶ್ರೀಕಾಂತ್ ಶೆಟ್ಟಿ ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಭಾರತೀಯ ನೌಕಾದಳ ನಿವೃತ್ತ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಚೋಂಡಿರ ಸುರೇಶ್, ಪ್ರತಿ ಮನೆಗಳಲ್ಲೂ ಛತ್ರಪತಿ ಶಿವಾಜಿ, ಸುಭಾಸ್ ಚಂದ್ರ ಬೋಸ್, ಕಿತ್ತೂರು ರಾಣಿ ಚೆನ್ನಮ್ಮ , ವನಕೆ ಓಬವ್ವ ರಂತವರು ಹುಟ್ಟುವ ಮೂಲಕ ದೇಶದೊಳಗಿನ ಮತಾಂಧ ದುಷ್ಟಶಕ್ತಿಗಳ ನಿರ್ನಾಮ ಮಾಡಬೇಕೆಂದರು.
ಹಿಂದು ಜಾಗರಣ ವೇದಿಕೆ ಮಂಗಳೂರು ವಿಭಾಗ ಸಂಯೋಜಕ್ ಬಿ.ಬಿ. ಮಹೇಶ್, ಜಿಲ್ಲಾ ಸಂಯೋಜಕ ಕುಕ್ಕೇರ ಅಜಿತ್, ಜಿಲ್ಲಾ ಸಹ ಸಂಯೋಜಕ ಚೇತನ್ ಶಾಂತಿನಿಕೇತನ್, ಜಿಲ್ಲಾ ಸಮಿತಿ ಪ್ರಮುಖರಾದ ಲಕ್ಷ್ಮಿ ನಾರಾಯಣ, ಪವಿತ್ರ, ಶಾಂತೆಯಂಡ ತಿಮ್ಮಯ್ಯ, ಕುಮಾರ್ ಮೇಕೇರಿ, ಸುನಿಲ್ ಮಾದಾಪುರ, ವಿನಯ್ ಮಡಿಕೇರಿ, ತಾಲೂಕು ಸಂಯೋಜಕ ಮುಗೇರನ ಬೆಳ್ಯಪ್ಪ, ಸಹ ಸಂಯೋಜಕ ಮನು ರೈ, ಚೇತನ್ ಚೆಟ್ಚಳ್ಳಿ, ದುರ್ಗೇಶ್ ಮತ್ತಿತರರು ಇದ್ದರು. ಅಮೃತ್ ರಾಜ್ ಪ್ರಾರ್ಥಸಿದರು. ಸುನಿಲ್ ಮಾದಾಪುರ ಸ್ವಾಗತಿಸಿದರು. ವಿನಯ್ ನಿರೂಪಿಸಿದರು. ಮುಗೇರನ ಬೆಳ್ಯಪ್ಪ ವಂದಿಸಿದರು.