

ಮಡಿಕೇರಿ: ಕರ್ನಾಟಕ ಜನನ ಮತ್ತು ಮರಣ ನಿಯಮ ೯ಕ್ಕೆ ತಿದ್ದುಪಡಿ ಮಾಡಿರುವುದನ್ನು ವಿರೋಧಿಸಿ ಮಡಿಕೇರಿ ವಕೀಲರ ಸಂಘದಿಂದ ಶುಕ್ರವಾರ ಮಡಿಕೇರಿ ನ್ಯಾಯಾಲಯ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಮಡಿಕೇರಿ ವಕೀಲರ ಸಂಘ ಅಧ್ಯಕ್ಷ ಕೆ.ಡಿ. ದಯಾನಂದ ಮಾತನಾಡಿ, ಇದುವರೆಗೂ ಜನನ ಮತ್ತು ಮರಣ ಪ್ರಮಾಣ ಪತ್ರಕ್ಕೆ ಸಂಬಂಧಿಸಿದ ಪ್ರಕರಣವನ್ನು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ಇತ್ಯರ್ಥ ಆಗುತ್ತಿತ್ತು. ಸರ್ಕಾರದ ಹೊಸ ಆದೇಶ ಪ್ರಕಾರ ಉಪ ವಿಭಾಗಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಇದು ಆಸಂವಿಧಾನಿಕ ಮತ್ತು ಕಾನೂನಿಗೆ ವಿರುದ್ಧವಾದ ಆದೇಶವಾಗಿದೆ. ಆದಷ್ಟು ಶೀಘ್ರ ಸರ್ಕಾರ ತನ್ನ ಆದೇಶ ಹಿಂಪಡೆಯಬೇಕೆಂದು ಒತ್ತಾಯಿಸಿದರು.
ತಿದ್ದುಪಡಿ ನಿಯಮ ಜಾರಿಗೆ ಬಂದರೆ ಸಾರ್ವಜನಿಕರಿಗೆ ತುಂಬಾ ಅನ್ಯಾಯವಾಗುತ್ತದೆ. ಕಾನೂನು ದುರುಪಯೋಗ ಆಗುವ ಸಾಧ್ಯತೆ ಇದೆ. ನಕಲಿ ಜನನ ಮತ್ತು ಮರಣ ಪತ್ರಗಳು ಸೃಷ್ಟಿಯಾಗಿ, ಸಮಾಜದಲ್ಲಿ ಅಶಾಂತಿಗೂ ಕಾರಣ ಆಗಬಹುದೆಂಬ ಸಂಶಯ ವ್ಯಕ್ತಪಡಿಸಿದರು.
ತಮ್ಮ ಬೇಡಿಕೆಯ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಮಡಿಕೇರಿ ವಕೀಲರ ಸಂಘದ ಕಾರ್ಯದರ್ಶಿ ಎಂ.ಕೆ. ಅರುಣ್ಕುಮಾರ್, ಉಪಾಧ್ಯಕ್ಷ ಕೆ.ಎಸ್. ತಮ್ಮಯ್ಯ, ಜಂಟಿ ಕಾರ್ಯದರ್ಶಿ ಎಂ.ವಿ. ಸಂಜಯ್ ರಾಜ್, ಖಜಾಂಚಿ ಬಿ.ಸಿ. ದೇವಿಪ್ರಸಾದ್, ಪದಾಧಿಕಾರಿಗಳಾದ ಪಿ.ಆರ್. ಚಂದನ್, ಡಿ.ಎನ್. ಡೊಮಿನಿಕ್, ಭಾನುಪ್ರಕಾಶ್, ತಾಹ ಯಾಸೀನ್, ಡಿ.ಕೆ. ರಾಜೇಶ್, ಸುದಯ್ ನಾಣಯ್ಯ, ದಿವ್ಯಾ ನಂಜಪ್ಪ, ಲತಾಕುಮಾರಿ ಮತ್ತಿತರರು ಪಾಲ್ಗೊಂಡಿದ್ದರು.