ಜಮ್ಮಾಬಾಣೆ ಬಗ್ಗೆ ಗೊಂದಲಕಾರಿ ಹೇಳಿಕೆಗೆ ಕಂದಾಯ ಸಚಿವ ಆರ್. ಅಶೋಕ್ ಕ್ಷಮೆಯಾಚಿಸಲಿ

14mdkf5 - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ

ಜಮ್ಮಾಬಾಣೆ ಜಾಗವನ್ನು ಗುತ್ತಿಗೆ ಆಧಾರದಲ್ಲಿ ನೀಡಲಾಗುವುದೆಂದು ಕಂದಾಯ ಸಚಿವ ಆರ್. ಅಶೋಕ್ ರಾಜಕೀಯ ದುರುದ್ದೇಶ ದಿಂದ ಹೇಳಿಕೆ ನೀಡಿದ್ದಾರೆ. ಜಮ್ಮಾಬಾಣೆ ಕೊಡಗಿನ ಹಿಡುವಳಿದಾರರ ಅನುಭವ ಸ್ವಾಧೀನದಲ್ಲಿರುವ ಸ್ವಂತ ಜಾಗ ಎಂದು ಕೆಪಿಸಿಸಿ ಕಾನೂನು ಘಟಕ ಅಧ್ಯಕ್ಷ ಎ.ಎಸ್. ಪೊನ್ನಣ್ಣ ಹೇಳಿದ್ದಾರೆ.

ಜನರಲ್ಲಿ ಗೊಂದಲ ಮೂಡಿಸಿ, ಆತಂಕಕ್ಕೀಡುವ ಮಾಡುವ ಮೂಲಕ ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಕಂದಾಯ ಸಚಿವರು ಹೇಳಿಕೆ ನೀಡಿದ್ದಾರೆ. ಇದು ಜಮ್ಮಾಬಾಣೆ ಜಾಗಕ್ಕೆ ಸಂಬಂಧಿಸಿದ್ದಂತೆ ೧೯೯೨ ರಲ್ಲಿ ಚೆಕ್ಕೇರ ಪೂವಯ್ಯ ಪ್ರಕರಣದಲ್ಲಿ ಹೈಕೋಟರ್ ಪೂರ್ಣ ಪೀಠ ನೀಡಿರುವ ಆದೇಶಕ್ಕೆ ವ್ಯತಿರಿಕ್ತ ಹೇಳಿಕೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತ ಪಡಿಸಿದರು.

ಕಂದಾಯ ನಿಗದಿ ಪಡಿಸಿದ್ದಲ್ಲಿ, ಕೃಷಿಗೆ ಒಳ ಪಡಿಸಿದ್ದಲ್ಲಿ ಜಮ್ಮಾಬಾಣೆ ಜಾಗದ ಮಾಲೀಕತ್ವ ಹಿಡುವಳಿದಾರರದ್ದು ಆಗಿರುತ್ತದೆ. ಕೃಷಿ ಮಾಡದ ಜಮ್ಮಾಬಾಣೆ ಜಾಗಕ್ಕೂ ಕಂದಾಯ ನಿಗದಿ ಪಡಿಸಲು ಸರ್ಕಾರ ಕಾಯ್ದೆಗೆ ತಿದ್ದುಪಡಿ ತಂದಿದೆ. ಹೀಗಿರುವ ಕಾನೂನಿನ ಕನಿಷ್ಠ ಜ್ಞಾನ ಇಲ್ಲದಂತೆ ಕಂದಾಯ ಸಚಿವರು ಹೇಳಿಕೆ ನೀಡಿದ್ದಾರೆಂದು ಅಸಮಾಧಾನ ವ್ಯಕ್ತ ಪಡಿಸಿದರು.

ರಾಜಕೀಯ ಪ್ರೇರಿತವಾಗಿ ದುರುದ್ದೇಶದಿಂದ ಹೇಳಿಕೆ ನೀಡುವುದರ ಮೂಲಕ ಜನರನ್ನು ದುರ್ಬಲರನ್ನಾಗಿ ಮಾಡಲಾಗುತ್ತಿದೆ. ಅ ಮೂಲಕ ರಾಜಕೀಯ ಲಾಭ ಪಡೆಯುವ ಪ್ರಯತ್ನ ನಡೆದಿದೆ. ತಮ್ಮ ತಪ್ಪು ಹೇಳಿಕೆಗೆ ಸಂಬಂಧಿಸಿದ್ದಂತೆ ಕಂದಾಯ ಸಚಿವರು ಕೊಡಗಿನ ಜನತೆ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.

ಹುಲಿ ಹಾವಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಹುಲಿಗೆ ಗುಂಡಿಕ್ಕಿ ಕೊಲ್ಲುತ್ತೇವೆಂದು ಭಾವನಾತ್ಮಕ ಹೇಳಿಕೆ ನೀಡಿವುದು ಸಮಸ್ಯೆಗೆ ಪರಿಹಾರವಾಗುವುದಿಲ್ಲ. ನಾಗರಹೊಳೆ ಅಂಚಿನಲ್ಲಿರುವ ಗ್ರಾಮದಲ್ಲಿ ಹಲವು ವರ್ಷದಿಂದ ಎದುರಾಗಿರುವ ಹುಲಿ ಸಮಸ್ಯೆಗೆ ನೈಜ ಕಾರಣ ಪತ್ತೆಹಚ್ಚಿ, ಸೂಕ್ತ ಪರಿಹಾರ ಕಂಡುಕೊಳ್ಳಬೇಕೆಂದರು.

ಕೆ.ಬಾಡಗ ಗ್ರಾಮದಲ್ಲಿ ಹುಲಿ ದಾಳಿಗೆ ಯುವಕ ಬಲಿಯಾದ ಬಳಿಕ ಅರಣ್ಯಾಧಿಕಾರಿಗಳು ಎಚ್ಚೆತ್ತುಕೊಂಡಿದ್ದಲ್ಲಿ ಮರುದಿನ ಮುಂಜಾನೆ ವಯೋವೃದ್ಧರೊಬ್ಬರು ಹುಲಿಗೆ ಬಲಿಯಾಗುತ್ತಿರಲಿಲ್ಲ. ಈ ಬಗ್ಗೆ ನಿರ್ಲಕ್ಷೃತನ ತೋರಿರುವ ಅರಣ್ಯಾಧಿಕಾರಿ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದರು.

ಹುಲಿ ಸೆರೆಹಿಡಿಯಲು ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋಮವಾರ ಹೊರಡಿಸಿರುವ ಆದೇಶದಲ್ಲಿ ಕೆ.ಬಾಡಗ ಗ್ರಾಮ ನಾಗರಹೊಳೆ ಹುಲಿ ಸಂರಕ್ಷಣಾ ಪ್ರದೇಶದ ವ್ಯಾಪ್ತಿಗೆ ಬರುತ್ತದೆ ಎಂದು ಉಲ್ಲೇಖಿಸಿದ್ದಾರೆ. ಆ ಮೂಲಿಕ ಅರಣ್ಯದೊಳಗೆ ಹುಲಿ ದಾಳಿಗೆ ಇಬ್ಬರು ಬಲಿಯಾಗಿದ್ದಾರೆಂದು ಸಾಧಿಸಲು ಹೊರಟ್ಟಿದ್ದಾರೆ. ಇದನ್ನು ನಮ್ಮ ಪ್ರತಿನಿಧಿಗಳು ಏಕೆ ಪ್ರಶ್ನಿಸುತ್ತಿಲ್ಲ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಕಾನೂನು ಘಟಕದ ಜಿಲ್ಲಾಧ್ಯಕ್ಷ ಶ್ರೀಧರ್ ನಾಯರ್, ಸಾಮಾಜಿಕ ಜಾಲತಾಣ ವಿಭಾಗದ ಜಿಲ್ಲಾ ಸಂಚಾಲಕ ಹೊಸೂರು ಸೂರಜ್, ಪ್ರಮುಖರಾದ ಬೊಳ್ಳಂಡ ಶರಿ ಗಿರೀಶ್, ಬಲ್ಯಾಟಂಡ ಕೌಶಿಕ್, ಬೆಲ್ಲತಂಡ ಕಿರಣ್ ಪೂವಯ್ಯ ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net