ಮಡಿಕೇರಿಯಲ್ಲಿ ತ್ರಿಕೋನ ಸ್ಪರ್ಧೆ

1
Published on

ಮಡಿಕೇರಿ:
ಸದ್ಯಕ್ಕೆ ಮಡಿಕೇರಿ ಕೇತ್ರದಲ್ಲಿ ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆ ಇರುವ ಹಾಗೆ ಕಂಡು ಬರುತ್ತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಅಬ್ಬರದ ಪ್ರಚಾರ ನಡೆಸುವ ಮೂಲಕ ಗಮನ ಸೆಳೆಯುತ್ತಿದ್ದರೆೆ, ಬಿಜೆಪಿ ತನ್ನ ಬಲಿಷ್ಠ ಕಾರ್ಯಕರ್ತರ ಪಡೆ ಬಳಸಿಕೊಂಡು ಮನೆ ಮನೆ ಪ್ರಚಾರಕ್ಕೆ ಆದ್ಯತೆ ಕೊಟ್ಟಿದೆ.

ಬಿಜೆಪಿ ಪರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಈಗಾಗಲೇ ಮಡಿಕೇರಿಯಲ್ಲಿ ದೊಡ್ಡ ಮಟ್ಟದ ರೋಡ್ ಶೋ ನಡೆಸಿ ಕಾರ್ಯಕರ್ತರಿಗೆ ಹುರುಪು ತುಂಬಿದ್ದಾರೆ. ಜೆಡಿಎಸ್ ಪರ ಭವಾನಿ ರೇವಣ್ಣ ಮತಯಾಚನೆ ನಡೆಸಿದ್ದಾರೆ. ಕಾಂಗ್ರೆಸ್ ಪಾಳಯದಲ್ಲಿ ಈತನಕ ಯಾರೂ ಸ್ಟಾರ್ ಪ್ರಚಾರಕರೂ ಕಂಡುಬಂದಿಲ್ಲ.

ಇಲ್ಲಿ ಬಿಜೆಪಿಯಿಂದ ಹಾಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕಣದಲ್ಲಿ ಇದ್ದಾರೆ. ೬ ಬಾರಿ ಸ್ಪರ್ಧಿಸಿ ೫ ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿರುವ ಹಿರಿಯ ಶಾಸಕ ಅಪ್ಪಚ್ಚು ರಂಜನ್ ಇದು ತನ್ನ ಕೊನೆಯ ಚುನಾವಣೆ ಎಂದು ಈಗಾಗಲೇ ಘೋಷಿಸಿದ್ದು, ಈತನಕ ತಾವು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಮತಯಾಚನೆ ನಡೆಸುತ್ತಿದ್ದಾರೆ.

ಕಾಂಗ್ರೆಸ್‌ನಿಂದ ಡಾ. ಮಂಥರ್ ಗೌಡ ಸ್ಪರ್ಧಿಸಿಸುತ್ತಿದ್ದಾರೆ. ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಚುನಾವಣೆ ನಡೆದ ಸಂದರ್ಭ ಬಿಜೆಪಿಯ ಸುಜಾ ಕುಶಾಲಪ್ಪ ಅವರಿಗೆ ತೀವ್ರ ಸ್ಪರ್ಧೆ ನೀಡಿ ಸೋತಿದ್ದ ಡಾ. ಮಂಥರ್ ಗೌಡ ನಂತರದ ದಿನಗಳಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಡೆಗೆ ಗಮನ ಕೇಂದ್ರೀಕರಿಸಿ ಇಲ್ಲಿಯೇ ಚುನಾವಣೆಗೆ ಪೂರ್ವ ಸಿದ್ಧತೆ ನಡೆಸುವ ಮೂಲಕ ಘಟಾನುಘಟಿಗಳ ಎದುರು ಕಾಂಗ್ರೆಸ್ ಟಿಕೆಟ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಮೊದಲು ಕಾಂಗ್ರೆಸ್ ಕಾರ್ಮಿಕರ ವಿಭಾಗದಲ್ಲಿದ್ದುಕೊಂಡು ದೊಡ್ಡ ಮಟ್ಟದ ಸಂಘಟನೆ ಮಾಡುವ ಮೂಲಕ ಹೆಸರು ಮಾಡಿದ್ದ ನಾಪಂಡ ಮುತ್ತಪ್ಪ ನಂತರದ ದಿನಗಳಲ್ಲಿ ಜೆಡಿಎಸ್ ಸೇರಿಕೊಂಡು ಕೇತ್ರದಾದ್ಯಂತ ಸಂಚರಿಸಿ ತಮ್ಮ ಅದೇ ಹಳೆಯ ಚಾಣಾಕ್ಷತನದಿಂದ ಪಕ್ಷಕ್ಕೆ ಚೈತನ್ಯ ತುಂಬಿದ್ದ ಇವರು ಈಗ ನಿರೀಕ್ಷೆಯಂತೆ ಜೆಡಿಎಸ್ ಅಭ್ಯರ್ಥಿ.

ಈ ಮೂವರಿಗೂ ತಮ್ಮ ಪಕ್ಷಗಳಿಗೆ ಸಂಬಂಧಿಸಿದ ಸಾಂಪ್ರದಾಯಿಕ ಮತಗಳ ಗಟ್ಟಿ ಅಡಿಪಾಯ ಇದೆ. ಮೂವರೂ ತಮ್ಮದೇ ಆದ ಲೆಕ್ಕಾಚಾರಗಳ ಮೂಲಕ ಗೆಲುವು ತಮಗೆ ಖಚಿತ ಎನ್ನುವ ವಿಶ್ವಾಸಲ್ಲಿ ಇದ್ದಾರೆ. ಆದರೆ ರಾಜಕೀಯದಲ್ಲಿ ಏನು ಬೇಕಾದರೂ ಆಗುವ ಸಾಧ್ಯತೆಗಳಿದ್ದು ಒಳಸುಳಿಗಳು ಬೇರೆ ರೀತಿಯಲ್ಲೇ ಕೆಲಸ ಮಾಡುವುದರಿಂದ ಎಲ್ಲಾ ಲೆಕ್ಕಾಚಾರಗಳು ಉಲ್ಟಾ ಆದರೂ ಅಚ್ಚರಿ ಇಲ್ಲ.

ಈ ಹಿಂದಿನ ಎರಡು ಚುನಾವಣೆಗಳಲ್ಲಿ ೨ನೇ ಸ್ಥಾನದಲ್ಲಿ ಇದ್ದಿದ್ದು ಜೆಡಿಎಸ್. ಅದಕ್ಕೂ ಹಿಂದಿನ ಚುನಾವಣೆಯಲ್ಲಿ ಬಿಜೆಪಿಯ ನಂತರದ ಸ್ಥಾನದಲ್ಲಿ ಇದ್ದಿದ್ದು ಕಾಂಗ್ರೆಸ್. ಈ ಮೂರು ಸಂದರ್ಭದಲ್ಲೂ ಅಪ್ಪಚ್ಚು ರಂಜನ್ ಅವರಿಗೆ ನೇರ ಎದುರಾಳಿಯಾಗಿ ಇದ್ದಿದ್ದು ಮಾಜಿ ಸಚಿವ ಬಿ.ಎ. ಜೀವಿಜಯ. ೨೦೧೮, ೨೦೧೩ರಲ್ಲಿ ಇವರು ಜೆಡಿಎಸ್‌ನಿಂದ ಸ್ಪರ್ಧಿಸಿದ್ದರೆ, ೨೦೦೮ರಲ್ಲಿ ಕಾಂಗ್ರೆಸ್ ಆಭ್ಯರ್ಥಿ ಆಗಿದ್ದರು.

ಜೀವಿಜಯ ಈ ಬಾರಿ ಕಾಂಗ್ರೆಸ್‌ನಿಂದ ಪ್ರಬಲ ಟಿಕೆಟ್ ಆಕಾಂಕ್ಷಿ ಆಗಿದ್ದರು. ಆದರೆ ಟಿಕೆಟ್ ಸಿಗದ ಕಾರಣ ಮುನಿಸಿಕೊಂಡು ಮನೆ ಸೇರಿದ್ದಾರೆ. ಮುಖ್ಯಮಂತ್ರಿಯಾಗಿದ್ದ ಆರ್. ಗುಂಡೂರಾವ್ ಅವರನ್ನೇ ಸೋಲಿಸಿದ ಹೆಗ್ಗಳಿಕೆಯ ಜೀವಿಜಯ ಅವರಿಗೆ ಈಗಲೂ ದೊಡ್ಡ ಹಿಂಬಾಲಕರ ಪಡೆ ಮತ್ತು ಅವರದ್ದೇ ಆದ ಓಟ್ ಬ್ಯಾಂಕ್ ಇರುವುದರಿಂದ ಅವರು ತೆಗೆದುಕೊಳ್ಳುವ ನಿಲುವು ಮಡಿಕೇರಿ ಕ್ಷೇತ್ರದ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧರಿಸಲಿದೆ.

ಇಲ್ಲಿ ಎಸ್‌ಡಿಪಿಐನಿಂದ ಮಡಿಕೇರಿ ನಗರಸಭಾ ಸದಸ್ಯ ಅಮೀನ್ ಮೊಹಿಸಿನ್ ಕಣದಲ್ಲಿ ಇದ್ದಾರೆ. ಮುಸ್ಲಿಮರು, ದಲಿತ ಪರ ಹೋರಾಟಗಳಲ್ಲಿ ಗುರುತಿಸಿಕೊಂಡಿರುವ ಇವರ ಪಾತ್ರವೂ ಈ ಚುನಾವಣೆಯಲ್ಲಿ ಪ್ರಮುಖವಾಗಿದೆ. ಮುಸ್ಲಿಂ ಮತ್ತು ದಲಿತ ಮತಗಳು ಒಡೆದು ಅಮೀನ್ ಮೊಹಿಸಿನ್ ಪರ ಬಂದರೆ ತನಗೆ ಅನುಕೂಲವಾಗಲಿದೆ ಎನ್ನುವ ನಿರೀಕ್ಷೆಯಲ್ಲಿ ಬಿಜೆಪಿ ಇದೆ.
ಕೊಡಗಿನಲ್ಲಿ ಈತನಕ ಚುನಾವಣೆಯಲ್ಲಿ ಜಾತಿ ರಾಜಕಾರಣಕ್ಕೆ ಮತದಾರ ಬೆಲೆಕೊಡುತ್ತಿರಲಿಲ್ಲ. ಆದರೆ ಈ ಬಾರಿ ಜಾತಿ ಆಧಾರದಲ್ಲಿ ಮತ ಕೇಳುವ ಕೆಟ್ಟ ಸಂಪ್ರದಾಯ ಜಿಲ್ಲೆಯಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಡಾ. ಮಂಥರ್ ಗೌಡ ಒಕ್ಕಲಿಗ ಮತದಾರರು ಹೆಚ್ಚು ಇರುವ ಕಡೆಗಳಿಗೆ ತಮ್ಮ ಗಮನ ಜಾಸ್ತಿ ಕೇಂದ್ರೀಕರಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಒಟ್ಟು ಮತದಾರರ ಪೈಕಿ ಸುಮಾರು ೫೦ ಸಾವಿರದಷ್ಟು ಒಕ್ಕಲಿಗ ಮತ್ತು ಅರೆಭಾಷಿಕ ಮತದಾರರು ಮಡಿಕೇರಿ ಕ್ಷೇತ್ರದಲ್ಲಿದ್ದು, ಜಾತಿ ಆಧಾರದಲ್ಲಿ ಮತ ಚಲಾವಣೆ ಆದರೆ ತನ್ನ ಹಾದಿ ಸುಲಭ ಎನ್ನುವ ವಿಶ್ವಾಸದಲ್ಲಿ ಕಾಂಗ್ರೆಸ್ ಇದೆ.

ಜೆಡಿಎಸ್‌ನ ನಾಪಂಡ ಮತ್ತಪ್ಪ ಮಡಿಕೇರಿಗೆ ಮುತ್ತಪ್ಪಣ್ಣ, ರಾಜ್ಯಕ್ಕೆ ಕುಮಾರಣ್ಣ ಎನ್ನುವ ಘೋಷವಾಕ್ಯದೊಂದಿಗೆ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಕ್ಷೇತ್ರದ ಹಲವು ಕಡೆಗಳಲ್ಲಿ ಯುವ ಪಡೆ ಇವರ ಬೆನ್ನಿಗೆ ನಿಂತಿದೆ. ಜೆಡಿಎಸ್ ಪ್ರಾಬಲ್ಯದ ಪಕ್ಕದ ಹಾಸನ ಮತ್ತು ಮೈಸೂರು ಜಿಲ್ಲೆಗಳಿಗೆ ಹೊಂದಿಕೊಂಡಂತೆ ಮಡಿಕೇರಿ ಕ್ಷೇತ್ರ ಇರುವುದರಿಂದ ಇಲ್ಲಿಯೂ ಇರುವ ಸಾಂಪ್ರದಾಯಿಕ ಜೆಡಿಎಸ್ ಮತಗಳ ಆಸರೆಯೂ ಮುತ್ತಪ್ಪ ಜತೆಗಿದೆ. ಇವುಗಳೊಂದಿಗೆ ವ್ಯಯಕ್ತಿಕ ವರ್ಚಸ್ಸು, ಪಕ್ಷದ ಪ್ರಮುಖರ ಸಂಘಟಿತ ಪ್ರಯತ್ನದ ಮೇಲೆ ಮುತ್ತಪ್ಪ ಭವಿಷ್ಯ ನಿರ್ಧಾರ ಆಗಲಿದೆ.

ಮತದಾರರ ವಿವರ:
ಒಟ್ಟು ಮತದಾರರು: ೨,೩೨,೧೪೮
ಪುರುಷರು: ೧,೧೩,೫೮೫
ಮಹಿಳೆಯರು: ೧,೧೮,೫೧೩
ಇತರ: ೧೦

೨೦೧೮ರ ಚುನಾವಣಾ ಫಲಿತಾಂಶ:
ಗೆದ್ದವರು: ಎಂ.ಪಿ. ಅಪ್ಪಚ್ಚು ರಂಜನ್
ಪಕ್ಷ: ಬಿಜೆಪಿ
ಪಡೆದ ಮತ: ೭೦,೬೩೧
ಸೋತವರು: ಬಿ.ಎ. ಜೀವಿಜಯ
ಪಕ್ಷ: ಜೆಡಿಎಸ್
ಪಡೆದ ಮತ: ೫೪,೬೧೬
ಗೆಲುವಿನ ಅಂತರ: ೧೬,೦೧೫

೨೦೧೩ರ ಚುನಾವಣಾ ಫಲಿತಾಂಶ:
ಗೆದ್ದವರು: ಎಂ.ಪಿ. ಅಪ್ಪಚ್ಚು ರಂಜನ್
ಪಕ್ಷ: ಬಿಜೆಪಿ
ಪಡೆದ ಮತ: ೫೬,೬೯೬
ಸೋತವರು: ಬಿ.ಎ. ಜೀವಿಜಯ
ಪಕ್ಷ: ಜೆಡಿಎಸ್
ಪಡೆದ ಮತ: ೫೨,೦೬೭
ಗೆಲುವಿನ ಅಂತರ: ೪,೬೨೯

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net