14ನೇ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

logo
Published on

ಮಡಿಕೇರಿ: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜ.31 ಮತ್ತು ಫೆ.1 ರಂದು ಸೋಮವಾರಪೇಟೆ ತಾಲೂಕಿನ ನಿಡ್ತ ಗ್ರಾಮದಲ್ಲಿ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಪರಿಷತ್ ಜಿಲ್ಲಾಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್ ತಿಳಿಸಿದರು.

ನಿಡ್ತ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮ್ಮೇಳನಾಧ್ಯಕ್ಷ ನಾಗೇಶ್ ಕಾಲೂರು ಅಧ್ಯಕ್ಷತೆಯಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. 31ರಂದು ಬೆಳಿಗ್ಗೆ 8ಕ್ಕೆ ತಹಸೀಲ್ದಾರ್ ಗೋವಿಂದರಾಜು ರಾಷ್ಟ್ರ ಧ್ವಜಾರೋಹಣ ನೆರವೇರಿಸುವರು. ಇಒ ಸುನೀಲ್ ಹಾಗೂ ತಾವು ನಾಡಧ್ವಜ, ಪರಿಷತ್ ಧ್ವಜಾರೋಹಣ ನೆರವರಿಸಲಿದ್ದೇವೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದ್ವಾರಗಳ ಉದ್ಘಾಟನೆ: ಬೆಳಗ್ಗೆ 8.30ಕ್ಕೆ ದಿ.ಎನ್.ಕೃಷ್ಣಮೂರ್ತಿ ದ್ವಾರವನ್ನು ಗ್ರಾಪಂ ಸದಸ್ಯೆ ಎಲ್.ಎಚ್.ನಳಿನಿ, ದಿ.ಅಶೋಕ್ ದ್ವಾರವನ್ನು ಗ್ರಾಪಂ ಸದಸ್ಯೆ ಸಾವಿತ್ರಮ್ಮ, ದಿ.ಎನ್.ಬಿ.ಗುಂಡಪ್ಪ ದ್ವಾರವನ್ನು ಸದಸ್ಯೆ ಹೂವಮ್ಮ, ದಿ.ವಿ.ಎನ್ ಪುಟ್ಟಪ್ಪ ದ್ವಾರವನ್ನು ಸದಸ್ಯ ವಿಜಯ್ ಕುಮಾರ್, ಮಂಜಯ್ಯ ಮತ್ತು ಕೃಷ್ಣಯ್ಯ ದ್ವಾರವನ್ನು ಗಂಗಾಧರ್, ದಿ.ಮಂಜುನಾಥ್ ಮೂರ್ತಿ ಮುಖ್ಯ ದ್ವಾರವನ್ನು ಸೋಮವಾರಪೇಟೆ ತಾಪಂ ಉಪಾಧ್ಯಕ್ಷ ಅಭಿಮನ್ಯು ಕುಮಾರ್ ಉದ್ಘಾಟಿಸುವರು.

ಸಮ್ಮೇಳನಾಧ್ಯಕ್ಷರ ಮೆರವಣಿಗೆ: ಬೆಳಗ್ಗೆ 9ಗಂಟೆಗೆ ಸಮ್ಮೇಳನಾಧ್ಯಕ್ಷ ನಾಗೇಶ್ ಕಾಲೂರು ಅವರ ಮೆರವಣಿಗೆ ಮುಳ್ಳೂರು ವೃತ್ತದಿಂದ ಸಮ್ಮೇಳನದ ಮಂಟಪದವರೆಗೆ ಸಾಗಲಿದೆ. ಸಮ್ಮೇಳನಕ್ಕೆ ಜಿಲ್ಲಾಧಿಕಾರಿ ಅನಿಸ್ ಕಣ್ಮಣಿ ಜಾಯ್ ಚಾಲನೆ ನೀಡುವರು. ಈ ಸಂದರ್ಭ ಮಂಗಳವಾದ್ಯ, ಪೂರ್ಣ ಕುಂಭ, ಅಲಂಕೃತ ಸ್ಥಬ್ಧಚಿತ್ರಗಳು ಮೆರವಣಿಗೆಗೆ ಮೆರುಗು ನೀಡಲಿವೆ.

ಬೆಳಗ್ಗೆ 10.30ಕ್ಕೆ ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆ ಹಾಗೂ ಕೊಡಗು ಚಂದ್ರಿಕೆ ಸುದ್ದಿಮನೆಗೆ ಚಾಲನೆ ಸಿಗಲಿದೆ. ಬೆಳಗ್ಗೆ 11ಕ್ಕೆ ಬೆಸೂರು ನಂಜಪ್ಪ ಸಭಾಂಗಣವನ್ನು ಜಿ.ಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಉದ್ಘಾಟಿಸುವರು. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೇದಿಕೆಗೆ ಜಿಪಂ ಅಧ್ಯಕ್ಷ ಬಿ.ಎ.ಹರೀಶ್ ಚಾಲನೆ ನೀಡುವರು. ವಿರಾಜಪೇಟೆ ಅರಮೇರಿ, ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ವಸತಿ ಸಚಿವ ವಿ.ಸೋಮಣ್ಣ, ಶಾಸಕ ಕೆ.ಜಿ.ಬೋಪಯ್ಯ, ಸುನೀಲ್ ಸುಬ್ರಮಣಿ, ವೀಣಾ ಅಚ್ಚಯ್ಯ ಇತರರು ಪಾಲ್ಗೊಳ್ಳುವರು.
ಮಧ್ಯಾಹ್ನ 1ಕ್ಕೆ ಭಾವಸಂಗಮ, ನಂತರ ಸಾಹಿತಿ ಬಾಳೆಲೆ ಡಾ.ಜೆ.ಸೋಮಣ್ಣ ಅಧ್ಯಕ್ಷತೆಯಲ್ಲಿ ಕೃಷಿ ಮತ್ತು ಬದುಕು ವಿಚಾರಗೋಷ್ಠಿ ನಡೆಯಲಿದೆ. ಅಬ್ದುಲ್ ರಬ್, ಕುಮಾರ್ ವಿಷಯ ಮಂಡಿಸುವರು. ಮಧ್ಯಾಹ್ನ 3.45ಕ್ಕೆ ಬಿ.ಜಿ.ಅನಂತಶಯನ ನೇತೃತ್ವದಲ್ಲಿ ಪುಸ್ತಕ ಅವಲೋಕನ ಕಾರ್ಯಕ್ರಮ ನಡೆಯಲಿದೆ. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಫೆ.1 ರಂದು ಬೆಳಿಗ್ಗೆ 9ಕ್ಕೆ ಆಯೋಜಿಸಿರುವ ಜನಪದ ಕ್ರೀಡೋತ್ಸವವನ್ನು ಜಿಪಂ ಸದಸ್ಯೆ ಕುಮುದಾ ಧರ್ಮಪ್ಪ ಉದ್ಘಾಟಿಸುವರು. ಸಂಜೆ 4ರಿಂದ ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಡಾ. ಮಾದವ್, ಮಾಜಿ ಸಚಿವ ಬಿ.ಎ. ಜೀವಿಜಯ, ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ, ಹಿರಿಯ ವಕೀಲ ಚಂದ್ರ ಮೌಳಿ ಭಾಗವಹಿಸಲಿದ್ದಾರೆ ಎಂದರು.

ಗೋಷ್ಠಿಯಲ್ಲಿ ಪರಿಷತ್‌ನ ಗೌರವ ಕಾರ್ಯದರ್ಶಿ ಕೆ.ಎಸ್.ರಮೇಶ್, ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಆರ್.ಹರೀಶ್‌ಕುಮಾರ್, ನಿರ್ದೇಶಕ ಕಿಗ್ಗಲು ಗಿರೀಶ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net