

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಮಡಿಕೇರಿ ಕಾಲೇಜು ರಸ್ತೆಯಲ್ಲಿರುವ ಮಮತಾ ಕಾಂಪ್ಲೆಕ್ಸ್ ಅಕ್ರಮ ವಾಣಿಜ್ಯ ಕಟ್ಟಡಕ್ಕೆ ದುಪ್ಪಟ್ಟು ತೆರಿಗೆ ವಿಧಿಸುವುದರ ಮೂಲಕ ನಗರಸಭೆ ತಾತ್ಕಾಲಿಕ ದೃಢೀಕರಣ ಪತ್ರ ನೀಡಿದೆ. ಕಟ್ಟಡ ಮಾಲೀಕ ಪಿ.ಥೀಕಮ್ ಚಂದ್ ಅವರಿಂದ ೧.೦೫ ಲಕ್ಷ ರೂ. ಸಂಗ್ರಹಿಸಿ ಪ್ರಮಾಣ ಪತ್ರ ನೀಡಲಾಗಿದೆ.
ಬ್ಲಾಕ್ ನಂಬರ್ ೭ ರ ಸರ್ವೇ ನಂಬರ್ ೧೮, ೧೮/೧ ಹಾಗೂ ೧೮/೨ ರಲ್ಲಿ ವಾಣಿಜ್ಯ ಕಟ್ಟಡ ಮತ್ತು ಮನೆ ನಿರ್ಮಿಸಲಾಗಿದೆ. ನಗರಸಭೆ ತಾಂತ್ರಿಕ ಶಾಖೆ ಹಾಗೂ ಕಂದಾಯ ಇಲಾಖೆಯ ತಂಡ ಸ್ಥಳ ಪರಿಶೀಲನೆ ನಡೆಸಿ ನಿಯಮ ಉಲ್ಲಂಘನೆ ಪತ್ತೆ ಹಚ್ಚಿತ್ತು. ಅನುಮೋದಿತ ನೀಲಿ ನಕ್ಷೆ ರೀತಿ ವಾಣಿಜ್ಯ ಕಟ್ಟಡ ನಿರ್ಮಿಸಿಲ್ಲ. ಶೇ.೧೫೧.೪೭ ರಷ್ಟು ಹೆಚ್ಚುವರಿ ಕಟ್ಟಡ ನಿರ್ಮಿಸಿರುವುದು ಪತ್ತೆಯಾಗಿತ್ತು. ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ಸೂಚನೆಯನ್ವಯ ಕೆಲವು ದಿನಗಳ ಮಟ್ಟಿಗೆ ಕಟ್ಟಡ ಬಂದ್ ಮಾಡಲಾಗಿತ್ತು.
ಕರ್ನಾಟಕ ಪೌರಸಭಾ ಆಧಿನಿಯಮ ೧೯೬೪ ರ ನಿಯಮ ೧೦೭ ರಂತೆ ಅನಧಿಕೃತ ಕಟ್ಟಡಕ್ಕೆ ದುಪ್ಪಟ್ಟು ತೆರಿಗೆ ವಿಧಿಸಲಾಗಿದೆ. ನಿಯಮ ೧೯೦ ರಂತೆ ೨,೬೭೦ ರೂ. ಜುಲ್ಮಾನೆ ಶುಲ್ಕ ವಿಧಿಸಲಾಗಿದೆ. ಷರತ್ತು ಮತ್ತು ನಿಬಂಧನೆಗೆ ಒಳಪಡಿಸಿ ಸೆಪ್ಟೆಂಬರ್ ೧೭ ರಂದು ತಾತ್ಕಾಲಿಕವಾಗಿ ಮುಕ್ತಾಯ ಪ್ರಮಾಣ ಪತ್ರ ನೀಡಲಾಗಿದೆ.
ಅನುಮೋದಿತ ನೀಲಿ ನಕಾಶೆಯಂತೆ ವಸತಿ ಮತ್ತು ವಾಣಿಜ್ಯ ಕಟ್ಟಡ ನಿರ್ಮಿಸದೇ ಹೆಚ್ಚುವರಿ ಅಂತಸ್ತು ವಾಣಿಜ್ಯ ಹಾಗೂ ವಸತಿ ಕಟ್ಟಡ ನಿರ್ಮಿಸಲಾಗಿದೆ. ಹೆಚ್ಚವರಿ ಕಟ್ಟಡ ತೆರವುಗೊಳಿಸುವಂತೆ ೨೮-೯-೨೦೨೧ ರಂದು ಸ್ಥಳ ಪರಿಶೀಲನೆ ನಡೆಸಿದ ನಗರಸಭೆ ಕಿರಿಯ ಇಂಜಿನಿಯರ್ ಪೌರಾಯುಕ್ತರಿಗೆ ವರದಿ ಸಲ್ಲಿಸಿದ್ದರು.
ಅನುಮೋದಿತ ನೀಲಿ ನಕಾಶೆಗೆ ವ್ಯತಿರಿಕ್ತವಾಗಿ ಕಟ್ಟಡ ನಿರ್ಮಾಣ ಮಾಡಿರುವುದರಿಂದ ಕರ್ನಾಟಕ ಪೌರಸಭೆಗಳ ಆಧಿನಿಯಮ ೧೯೬೪ ರ ಪ್ರಕಾರ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಡಿಸಿ ಅಧ್ಯಕ್ಷತೆಯಲ್ಲಿ ಆಗಸ್ಟ್ ೧೬ ರಂದು ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಇದರನ್ವಯ ಪೌರಾಯುಕ್ತರಿಗೆ ಕ್ರಮಕ್ಕೆ ಸೂಚನೆ ನೀಡಲಾಗಿತ್ತು. ಇದಕ್ಕೂ ಮೊದಲು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಜಿಲ್ಲಾಧ್ಯಕ್ಷ ತೆನ್ನೀರ ಮೈನಾ ಡಿಸಿಗೆ ಲಿಖಿತ ದೂರು ಸಲ್ಲಿಸಿದ್ದರು.
ಅಕ್ರಮ ಕಟ್ಟಡಕ್ಕೆ ಷರತ್ತು
ಅನುಮೋದಿತ ನೀಲಿ ನಕಾಶೆಯ ಕಟ್ಟಡ ಭಾಗಕ್ಕೆ ಮಾತ್ರ ಕಟ್ಟಡ ಮುಕ್ತಾಯಗೊಂಡಿರುವುದಾಗಿ ತಾತ್ಕಾಲಿಕ ದೃಢೀಕರಣ ಪತ್ರ ನೀಡಲಾಗಿದೆ. ವಾಹನ ನಿಲುಗಡೆಗೆ ಆದಷ್ಟು ಬೇಗ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಇಲ್ಲವಾದಲ್ಲಿ ಈ ದೃಢೀಕರಣ ತನ್ನಿಂದ ತಾನೇ ರದ್ದಾಗುತ್ತದೆ.
ಹೆಚ್ಚುವರಿ ನಿರ್ಮಿಸಿರುವ ಕಟ್ಟಡ ತೆರವುಗೊಳಿಸಲು ಸೂಚಿಸಿದಲ್ಲಿ ಯಾವುದೇ ತಂಟೆ ತಕರಾರು ಮಾಡದೇ ಸ್ವಂತ ಖರ್ಚಿನಲ್ಲಿ ತೆರವುಗೊಳಿಸ ಬೇಕು. ಇದಕ್ಕೆ ಯಾವುದೇ ಪರಿಹಾರವನ್ನು ನಗರಸಭೆ/ ಸರ್ಕಾರದಿಂದ ಕೋರುವಂತಿಲ್ಲ ಹಾಗೂ ಈ ಬಗ್ಗೆ ಯಾವುದೇ ವ್ಯಾಜ್ಯ ದಾಖಲಿಸು ವಂತಿಲ್ಲ ಮತ್ತು ತಂಟೆ ತಕರಾರು ಮಾಡುವಂತಿಲ್ಲ.
ಸರ್ಕಾರ ಮತ್ತು ನಗರಸಭೆಯು ಕಾಲ ಕಾಲಕ್ಕೆ ವಿಧಿಸುವ ಷರತ್ತು ಮತ್ತು ನಿಬಂಧನೆಗಳಿಗೆ ಬದ್ಧರಾಗಿಬೇಕು ಮತ್ತು ಮುಂದಿನ ಆದೇಶಗಳನ್ನು ಪಾಲಿಸಬೇಕು. ನಗರಸಭೆಯಿಂದ ವಿಧಿಸುವ ದಂಡ, ಜುಲ್ಮಾನೆ ಸೇರಿದಂತೆ ಇತರೆ ತೆರಿಗೆಗಳನ್ನು ಪಾವತಿಸಲು ಬದ್ಧರಾಗಿರಬೇಕು. ಸಿವಿಲ್ ಲಿಟೀಗೇಶನ್‌ಗಳಿಗೆ ನಗರಸಭೆ ಜವಾಬ್ದಾರವಲ್ಲ. ಸರ್ಕಾರ ಹಾಗೂ ನಗರಸಭೆ ರಸ್ತೆ ವಿಸ್ತರಣೆ ಮಾಡಿದ್ದಲ್ಲಿ ಯಾವುದೇ ತಂಟೆ, ತಕರಾರು ಮಾಡದೇ ಪರಿಹಾರ ಕೇಳದೆ ಜಾಗವನ್ನು ಬಿಡುವುದು ಹಾಗೂ ರಸ್ತೆ ವಿಸ್ತರಣೆಗೆ ಸಹಕರಿಸಬೇಕು.
ಅನುಮೋದಿತ ನೀಲಿ ನಕಾಶೆ
ಮಮತಾ ಕಾಂಪ್ಲೆಕ್ಸ್‌ನಲ್ಲಿ ೨೯೦.೯೩ ಚದರ ಮೀಟರ್ ವಿಸ್ತೀರ್ಣದಲ್ಲಿ ಕಟ್ಟಡ ನಿರ್ಮಿಸಲು ಅನುಮೋದನೆ ಪಡೆದು, ೭೩೧.೬೦ ಚದರ ಮೀಟರ್ ವಿಸ್ತೀರ್ಣದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಅನುಮೋದಿತ ಅಳತೆಗಿಂತ ೪೪೦.೬೭ ಚ.ಮೀ. ಹೆಚ್ಚುವರಿ ವಿಸ್ತೀರ್ಣದಲ್ಲಿ ಕಟ್ಟಡ ನಿರ್ಮಿಸಲಾಗಿದೆ.
ಅನುಮೋದಿತ ನೀಲಿ ನಕಾಶೆ ಪ್ರಕಾರ ನೆಲ ಅಂತಸ್ತು ೧೧೪.೯೧ ಚದರ ಮೀಟರ್ (ವಸತಿ ಮತ್ತು ವಾಣಿಜ್ಯ), ಮೊದಲ ಅಂತಸ್ತು ೧೪೪.೯೧ ಚ.ಮೀ. (ವಸತಿ ಮತ್ತು ವಾಣಿಜ್ಯ), ೨ನೇ ಅಂತಸ್ತು ೩೧.೧೧ ಚ.ಮೀ. (ಚಾವಣಿ) ನಿರ್ಮಿಸಬೇಕಾಗಿತ್ತು. ಆದರೆ, ೧೪೬.೩೨ ಚ.ಮೀ. ನೆಲಮಾಳಿಗೆ (ವಾಣಿಜ್ಯ), ೧೪೬.೩೨ ಚ.ಮೀ. ನೆಲ ಅಂತಸ್ತು (ವಾಣಿಜ್ಯ), ೧೪೬.೩೨ ಚ.ಮೀ. ಮೊದಲ ಅಂತಸ್ತು (ವಾಣಿಜ್ಯ), ೧೪೬.೩೨ ೨ನೇ ಅಂತಸ್ತು (ವಾಣಿಜ್ಯ), ೧೪೬.೩೨ ಚ.ಮೀ. ೩ನೇ ಅಂತಸ್ತು (ವಸತಿ) ನಿರ್ಮಿಸಲಾಗಿದೆ.
ವಾಣಿಜ್ಯ ಕಟ್ಟಡವನ್ನು ರಸ್ತೆಯ ಮಧ್ಯಭಾಗದಿಂದ ೮.೫೦ ಮೀಟರ್ ಬಿಟ್ಟು ಕಟ್ಟಬೇಕಾಗಿರುತ್ತದೆ. ೬ ಮೀಟರ್ ಮಾತ್ರ ಬಿಟ್ಟಿದ್ದು, ೨.೫೦ ಮೀಟರ್ ಜಾಗದಲ್ಲಿ ಮೆಟ್ಟಿಲು ಕಟ್ಟಲಾಗಿದೆ. ಹಿಲ್ ರಸ್ತೆಯಿಂದ ವಸತಿ ಕಟ್ಟಡಕ್ಕೆ ಪರವಾನಗಿ ಪಡೆದಿದ್ದು, ಎರಡು ಕಡೆ ಒಂದು ಮೀಟರ್ ಸೆಟ್ ಬ್ಯಾಕ್ ಬಿಡಬೇಕಾಗಿತ್ತು. ಸೆಟ್ ಬ್ಯಾಕ್ ಬಿಡದೆ ಕಟ್ಟಡ ಕಟ್ಟಲಾಗಿದೆ.
ಕಾಲೇಜು ರಸ್ತೆ ಹಾಗೂ ಹಿಲ್ ರಸ್ತೆಯಿಂದ ಸಂಪರ್ಕ ಹೊಂದಿರುವ ಎರಡು ಮಹಡಿ ಕಟ್ಟಡ ಕಟ್ಟಲು ಪರವಾನಗಿ ಪಡೆದು ಪ್ರಸ್ತುತ ೨ ಕಡೆಯ ಜಾಗವನ್ನು ಒಂದೇ ಬೆಸ್‌ಮೆಂಟಿನ ಮೇಲೆ ನೆಲಮಾಳಿಗೆ, ನೆಲ ಅಂತಸ್ತು, ಮೊದಲನೇ ಅಂತಸ್ತು, ೨ನೇ ಅಂತಸ್ತು, ೩ನೇ ಅಂತಸ್ತು ಕಟ್ಟಲಾಗಿದೆ.
೪ ವಾಣಿಜ್ಯ ಮಳಿಗೆ
ಎಸ್.ಎಂ. ಎಂಟರ್‌ಪ್ರೈಸಸ್ ಹೆಸರಿನಲ್ಲಿ ಎಸ್.ಎ. ಮೊಹಮ್ಮದ್ ಫರಾಜ್ ಮೊಬೈಲ್ ಅಂಗಡಿ, ಅಲ್ ಇಂಡಿಯಾ ಹ್ಯಾಂಡ್ ಲೂಮ ಹೆಸರಿ ನಲ್ಲಿ ಕೆ.ಎಸ್. ಅಪ್ಪಯ್ಯ ಹ್ಯಾಂಡ್ ಲೂಮಲ್ಸ್, ಮಮತಾ ಎಲೆಕ್ಟ್ರಿಕಲ್ಸ್ ಹೆಸರಿನಲ್ಲಿ ಥೀಕಮ್ ಚಂದ್ ಎಲೆಕ್ಟ್ರಿಕಲ್ ಅಂಗಡಿ, ಸೈಕಲ್ ಟ್ರಾೃಕ್ ಹೆಸರಿನಲ್ಲಿ ಎನ್. ನೌಷಾದ್ ಸೈಕಲ್ ಸೇಲ್ಸ್ ಮತ್ತು ಸರ್ವಿಸ್ ಮಳಿಗೆ ನಡೆಸುತ್ತಿದ್ದಾರೆ. ನಗರಸಭೆಯಿಂದ ವ್ಯಾಪಾರ ಪರವಾನಗಿ ಪಡೆದು ಕೊಂಡು ವ್ಯಾಪಾರ ವಹಿವಾಟು ನಡೆಸಲಾಗುತ್ತಿದೆ.
ನಗರಸಭೆ ನಿರ್ಣಯ
ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಅಧ್ಯಕ್ಷತೆಯಲ್ಲಿ ೮-೮-೨೦೨೨ ರಂದು ನಡೆದ ನಗರಸಭೆ ಸಾಮಾನ್ಯಸಭೆಯಲ್ಲಿ ಅನಧಿಕೃತ ವಾಣಿಜ್ಯ ಕಟ್ಟಡ ಕುರಿತು ಚರ್ಚೆ ನಡೆಯಿತು. ಅನುಮೋದಿತ ನೀಲಿ ನಕಾಶೆ ಉಲ್ಲಂಘಿಸಿ ನಿರ್ಮಿಸಿರುವ ಕಟ್ಟಡಕ್ಕೆ ಸೆಕ್ಷನ್ ೧೦೭ ರಲ್ಲಿ ಅಧಿಕೃತವಲ್ಲದ ರೂಪದಲ್ಲಿ ತೆರಿಗೆ ವಸೂಲಿ ಮಾಡಲು, ದಂಡ ಸಮೇತ ದುಪ್ಪಟ್ಟು ತೆರಿಗೆ ಪಾವತಿಸಿಕೊಂಡು ಮುಕ್ತಾಯ ಪ್ರಮಾಣ ಪತ್ರ ನೀಡಲು ನಿಯಮ ಗಳಲ್ಲಿ ಅವಕಾಶವಿರುವಂತೆ ಕ್ರಮ ವಹಿಸಲು ಒಪ್ಪಿ ತೀರ್ಮಾನಿಸಲಾಯಿತು.
**
ಅನುಮೋದಿತ ನೀಲಿ ನಕ್ಷೆಗಿಂತ ಹೆಚ್ಚುವರಿ ಕಟ್ಟಡ ನಿರ್ಮಿಸಿರುವುದರಿಂದ ಅಕ್ರಮ ಕಟ್ಟಡ ಎಂದು ಘೋಷಿಸಲಾಗಿದೆ. ಕಾನೂನಿನ್ವಯ ಹೆಚ್ಚುವರಿ ಕಟ್ಟಡಕ್ಕೆ ದುಪ್ಪಟ್ಟು ತೆರಿಗೆ ವಿಧಿಸುವುದರ ಮೂಲಕ ತಾತ್ಕಾಲಿಕವಾಗಿ ಮುಕ್ತಾಯ ಪ್ರಮಾಣ ಪತ್ರ ನೀಡಲಾಗಿದೆ. ಅಕ್ರಮ ಕಟ್ಟಡ ಸಕ್ರಮ ಮಾಡಿಕೊಳ್ಳುವವರೆಗೂ ಅಕ್ರಮ ಕಟ್ಟಡ ಎಂದು ಪರಿಗಣಿಸಲಾಗುತ್ತದೆ. ವಿಜಯ್, ಪೌರಾಯುಕ್ತರು, ಮಡಿಕೇರಿ ನಗರಸಭೆ.
**
ಶೇ.೧೫೦ ಕ್ಕೂ ಮೇಲ್ಪಟ್ಟು ಉಲ್ಲಂಘನೆಯಾಗಿರುವ ವಾಣಿಜ್ಯ ಕಟ್ಟಡಕ್ಕೆ ನಗರಸಭೆ ತಾತ್ಕಾಲಿಕ ಮುಕ್ತಾಯ ಪ್ರಮಾಣ ಪತ್ರ ನೀಡಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಅನಧಿಕೃತ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ್ದಂತೆ ಕಾನೂನು ಕ್ರಮ ತೆಗೆದುಕೊಳ್ಳಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದರು. ಇದೀಗ ಒತ್ತಡಕ್ಕೆ ಒಳಗಾಗಿ ಅನುಮತಿ ನೀಡಿರುವುದಕ್ಕೆ ಮೇಲ್ಮಟ್ಟದಲ್ಲಿ ಗಮನ ಸೆಳೆಯಲಾಗುವುದು. ತೆನ್ನೀರ ಮೈನಾ, ಜಿಲ್ಲಾ ಸಂಚಾಲಕರು, ರಾಜೀವ್‌ಗಾಂಧಿ ಪಂಚಾಯತ್‌ರಾಜ್ ಸಂಘಟನೆ.