

ಕಿಕ್ಕೇರಿ: ಬಿಡದೆ ಸುರಿದ ಮಳೆಗೆ ಮಾದಿಹಳ್ಳಿ ಗ್ರಾಮಕ್ಕೆ ಜಲದಿಗ್ಭಂಧನವಾಗಿದೆ.
ವಾರದಿಂದ ನಿತ್ಯ ತಡರಾತ್ರಿಯಲ್ಲಿ ಧೋ ಎಂದು ಸುರಿಯುತ್ತಿರುವ ಮಳೆಗೆ ಜನ ತತ್ತರಿಸುವಂತಾಗಿದೆ. ಸಾಸಲು ಸೀಳುಕಾಲುವೆಯಿಂದ ದೇವರಹಳ್ಳಿ ಮಾರ್ಗವಾಗಿ ಅಧಿಕ ಪ್ರಮಾಣದಲ್ಲಿ ಮಾದಿಹಳ್ಳಿ ಹಳ್ಳಕ್ಕೆ ನೀರು ಹರಿದು ಬರುತ್ತಿದೆ. ನೀರಿನ ಪ್ರಮಾಣ ಅಧಿಕವಾಗಿ ಮೊದಲೇ ಸೇತುವೆ ಹಾಳಾಗಿತ್ತು. ಗ್ರಾಮಸ್ತರು ಗ್ರಾಪಂ. ಸದಸ್ಯ ಶ್ರೀಧರ್ ಸಹಕಾರದಲ್ಲಿ ಕೃತಕವಾಗಿ ಸೇತುವೆ ನಿರ್ಮಿಸಿಕೊಂಡು ಗ್ರಾಮದಿಂದ ಹೊರಗಡೆ ಮಾಡಲು ವ್ಯವಸ್ಥೆ ಮಾಡಿಕೊಂಡಿದ್ದರು.
ಸತತ ಮಳೆಯಿಂದ ಸೇತುವೆ ಕೊಚ್ಚಿಹೋಗಿದೆ. ಪರಿಣಾಮ ಗ್ರಾಮದ ಒಳಗಡೆ, ಹೊರಗಡೆ ಪ್ರವೇಶ ಮಾಡದಂತೆ ನೀರು ಉಕ್ಕಿ ಹರಿಯುತ್ತಿದೆ. ಹಲವರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಸೇತುವೆ ಮೇಲೆ ಬೈಕ್‌ನಲ್ಲಿ ತೆರಳಲು ಯತ್ನಿಸಿ ವಿಫಲರಾದರು. ಮಳೆಯ ನೀರಿನ ಆರ್ಭಟದಿಂದ ಶಾಲಾ ಕಾಲೇಜುಗಳಿಗೆ ಮಕ್ಕಳು ತೆರಳಲು ಸಾಧ್ಯವಾಗದೆ ಮನೆಯಲ್ಲಿಯೇ ಉಳಿದರು.
ನೀರಿನ ರಭಸಕ್ಕೆ ಕಾಲುವೆ ದಂಡೆಯಲ್ಲಿನ ಭತ್ತ, ಜಾನುವಾರು ಮೇವಿನ ಹುಲ್ಲು, ತೆಂಗು, ಬಾಳೆ, ಅಡಿಕೆ ಜಲಾವೃತವಾಗಿದೆ. ರಾಸುಗಳಿಗೆ ಮೇವು ತರಲಾಗದೆ ರೈತರು ಕಂಗಲಾಗಿದ್ದಾರೆ.
ಇದೇ ರೀತಿ ದೇವರಹಳ್ಳಿ. ಐನೋರಹಳ್ಳಿ ಗ್ರಾಮದ ಸ್ಥಿತಿಯಾಗಿದ್ದು ಇಲ್ಲಿಯ ನಾಗರೀಕರು ಗ್ರಾಮದಿಂದ ಹೊರಹೋಗದ ಸ್ಥಿತಿ ನಿರ್ಮಾಣವಾಗಿದೆ.
ದಿಂಕ, ಸಾಸಲು, ಸೊಳ್ಳೇಪುರ ಮಾರ್ಗವಾಗಿ ಗ್ರಾಮಕ್ಕೆ ಸುತ್ತಿಬಳಸಿಕೊಂಡು ತ್ರಾಸಕರವಾಗಿ ತಲುಪುವಂತಾಗಿದೆ ಎಂದು ರೈತರು ತಮ್ಮ ನಿವೇದನೆ ವ್ಯಕ್ತಪಡಿಸಿದ್ದಾರೆ. ಸೇತುವೆ ನಿರ್ಮಾಣವನ್ನು ಮಾಡಿಸಿಕೊಡುವುದಾಗಿ ಈ ಹಿಂದೆ ಇದ್ದ ತಾ. ಶಾಸಕ ಹಾಗೂ ಸಚಿವರಾದ ಕೆ.ಸಿ. ನಾರಾಯಣಗೌಡರ ಭರವಸೆ ಭರವಸೆಯಾಗಿಯೇ ಉಳಿದಿದೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.